Friday, December 23, 2011

ಸಣ್ಣ ವ್ಯಥೆ -15

ನಿಂತ ನೀರಿದು ನಿಂತ ನೀರಿದು
ಹರೆಯ ಬಾಳು ಹೊರೆಯ ಹಾಗೆ 
ಒಲವ ಮರೆತು ಒಡಲ ಸುಖಕೆ 
ನಿಂತ ನೀರಿದು ನಿಂತ ನೀರಿದು ||ಪ||

ಕಲಿವ ಶಿಕ್ಷಣ ಊಟಕಂತೆ
ಕಲಿತ ವಿದ್ಯೆ ಆಟದಂತೆ
ನೆರೆಯ ಪ್ರೀತಿ ಪಾತ್ರಕಾಗಿ 
ಸ್ವಂತ ದೇಹ ತೊರೆವರಂತೆ ||ನಿಂತ||

ತಂದೆ ತಾಯಿಯ ಹೊರಗಿನವರು 
ತವರ ಬಾಳ್ವೆ ರುಚಿಸದವರು 
ಮೂರು ದಿನದ ಬದುಕಿನಲ್ಲಿ 
ಯಾರಿಗೂ ನಿಲುಕದೆ ಓಡ್ವರು||ನಿಂತ||

ಮೌನ ಮಂತ್ರ ಮರೆವಿಗೆ 
ಮಾತೇ ತಂತ್ರ ಇವರಿಗೆ 
ಅಳಿಸಿ ಹೋಗುವ ಬಾಳ್ವೆಯಲ್ಲಿ 
ಅಂಧಕಾರದಿ ಮೆರೆವರು ||ನಿಂತ||

ಹಣವೇ ಎಲ್ಲವು ಆಗಿದೆ 
ಸ್ನೇಹ ಸರಸವು ಮಾಯವು 
ಉಸಿರು ಉಸಿರಿಗೂ ಮಧ್ಯದಲ್ಲಿ 
ಸುಳ್ಳ ಹೇಳಿ ಜೀವಿಪರು ||ನಿಂತ|

-- ಗಂಗರಾಜು.ಕು.ಸಿ.

Wednesday, December 21, 2011

ಸಣ್ಣ ವ್ಯಥೆ -14

ದೂರ ದೂರಕೆ ,ತೀರದ ಆಚೆಗೆ 
ಬಾಲ್ಯವ ಮರೆತು , ದುಡಿಮೆಯ ಬಯಸಿ||

ಜನನವೇ ಇವರಿಗೆ ಮೃತ್ಯುವಾಗಿದೆ
ಸಲಹುವವರು ಸುಳಿವಿಲ್ಲದೆ ಸರಿದಿದ್ದಾರೆ
ಬದುಕ ಕಟ್ಟಲು ಬಯಕೆಗಳಿಲ್ಲ 
ಹೊತ್ತಿನ ತುತ್ತಿಗೆ ಹವಣಿಸುತ್ತಿದ್ದಾರೆ 

ಮರೆಯಲು ಇವರಲಿ ನೆನಪುಗಳಿಲ್ಲ 
ಸವಿಯಲು ಸುಂದರ ಸಂಜೆಗಳಿಲ್ಲ
ದಿನವು ಕಣ್ಣಿರಲಿ ಮಿಂದು 
ಕಂಠದಲಿ ದುಃಖವ ಮಿಡಿದಿಹರು 


ದಿನದ ಕೂಲಿಯೇ ಇವರ ಶಿಕ್ಷಣ
ಬೈಗುಳವೇ ಇವರಿಗೆ ಪಾಠ ಪ್ರವಚನ 
ಆಡಲು ಒಡನಾಡಿಗಳಿಲ್ಲ 
ಅಗುಳು ಲೆಕ್ಕಿಸಿ ಉಣ್ಣುವ ಬದುಕು 


ಹುಟ್ಟಿಸಿದ ಅಪ್ಪ ಸಾರಾಯಿ ಅಂಗಡಿಯ ಖಾಯಂ ಸದಸ್ಯ 
ಅಮ್ಮನೋ ಇನ್ನೊಂದು ಅನರ್ಥ ಶಿಶುವಿನ ಗರ್ಭಿಣಿ 
ದಾಯಾದಿಗಳೋ ದಿಕ್ಕು ದಿಕ್ಕಿಗೆ ಓಡಿ ಹೋಗಿದ್ದಾರೆ 
ನೆರಹೊರೆಯವರ ಮೆಚ್ಚಿನ ಸೇವಕನಾಗಿಹನು 

ಬಡತನವ ಬಣ್ಣಿಸಲು ಇವನೇ ಆಗಿಹನು 
ಇವನ ದಾಸ್ಯದ ದಣಿವ ತೀರಿಸಲು ಯಾರಿಹರು 
ಇಂತಹವರ ಬಾಲ್ಯಕ್ಕೆ ಬೆಳಕನಿರ್ವರು ಯಾರು
ನೆಲೆಯೇ ಇಲ್ಲದವರ ನಲಿವು ಹೇಗೆ 
ಬಾಲ್ಯವೇ ನೀನೇಕೆ ಈ ಮಕ್ಕಳಿಗೆ ಸುಂದರವಾಗಿಲ್ಲ ?

ದೂರ ದೂರಕೆ ,ತೀರದ ಆಚೆಗೆ 
ಬಾಲ್ಯವ ಮರೆತು , ದುಡಿಮೆಯ ಬಯಸಿ||

-- ಗಂಗರಾಜು.ಕು.ಸಿ

Friday, December 9, 2011

ಸಣ್ಣ ವ್ಯಥೆ -13

ಅಂದು ಸೂರ್ಯೋದಯ ಕೊಂಚ ತಡವಾಗಿಯೇ ಆದ ಹಾಗೆ ತಿಮ್ಮನಿಗೆ ಅನ್ನಿಸಿತು,ಎದ್ದವನೇ ಗೋ ಶಾಲೆಗೆ ಹೋಗಿ ಬಸಪ್ಪನ ಕಾಲಿಗೆ ಬಿದ್ದು ,ಅಮ್ಮಿ ಮಾಡಿದ್ದ ಇಟ್ಟು ತಿಂದು ಮಡಿಕೆ ಕಟ್ಟಿದ.ಎಂದೂ ಟೈಮ್ ಗೆ ಬಾರದ ಉದಯ ರಂಗ ಬಸ್ಸು ಪೂಮು ಪೂಮು ಎಂದು ಸದ್ದು ಮಾಡುತ್ತಾ ಧೂಳು ಎಬ್ಬಿಸಿಕೊಂಡು ಪಟೇಲರ ಮನೆ ಮುಂದಿನ ಖಾಲಿ ಜಾಗದಲ್ಲಿ ನಿಂತಿತು.ತಿಮ್ಮ ಚುರಾಕಾಗಿ ಮೊದಲ ಸಾಲನ್ನು ಚಕ್ಕನೆ ಉತ್ತು ಬಿಟ್ಟು , ಎರಡನೇ ಸಾಲಿಗೆ ಅಣಿಯಾಗುತ್ತಿದ್ದ.ಬಸ್ಸಿನಿಂದ ಇಳಿದ ಟಪಾಲಪ್ಪ , ನೇರವಾಗಿ ಪಟೇಲಪ್ಪನ ಮನೆಗೆ ನುಗ್ಗಿದ . ತಿಮ್ಮನ ಮಕ್ಕಳು ಅಮ್ಮಿ ಮಾಡಿದ ಅದೇ ಇಟ್ಟನ್ನು ನುಂಗಿ, ಹರಿದ ನಿಕ್ಕರಿಗೆ ಪಿನ್ ಹಾಕಿಕೊಂಡು, ಕೆರೆ ಪಕ್ಕದ ಈರಪ್ಪನ ಗುಡಿಗೆ ಸ್ಲೇಟ್ ಹಿಡಿದು ಕೊಂಡು ಹೋದರು .ಟಪಾಲಪ್ಪ ಕೊಟ್ಟ ಉತ್ತರವನ್ನ ಓದಿದ ಪಟೇಲಪ್ಪ, ಹುಂಜನಿಗೆ ಊರಿನ ಎಲ್ಲರಿಗು ತಕ್ಷಣ ಬುಲಾವ್ ಕೊಡಲು ಹೇಳಿದ. ತಿಮ್ಮ ಅಷ್ಟು ನೆಲವನ್ನು ಹಸನು ಮಾಡಿ , ಬದಿಗಳಲ್ಲಿ ಬೆಳೆದ ಕಾಂಗ್ರೆಸ್  ಗಿಡಗಳನ್ನು ಕೀಳ ತೊಡಗಿದ್ದ . 
ಊರಿನ ಹಿರಿಯರೆಲ್ಲ ಪಟೇಲಪ್ಪನ ಮನೆ ಮುಂದೆ ಸಭೆ ಸೇರಿದರು. 
"ಇನ್ನು ಮ್ಯಾಲೆ ನಮ್ಗೆ ಸರ್ಕಾರ ಬೀಜ , ಗೊಬ್ಬರ ರಿಯಾಯಿತಿ ಧರದಲ್ಲಿ ಕೊಡಾಕಿಲ್ಲ" ಅಂಥ ಮಾತು ಮುಗಿಸಿದರು.
ತಿಮ್ಮ ಎಷ್ಟು ಕಿತ್ತರು ಕಾಂಗ್ರೆಸ್ ಗಿಡಗಳು ಮಾತ್ರ ನೆಲಸಮವಾಗಲಿಲ್ಲ.

--
ಗಂಗರಾಜು .ಕು.ಸಿ.

Thursday, December 1, 2011

ಸಣ್ಣ ವ್ಯಥೆ -12

ಈ ದಿನಕೆ ಇವು ಸೂಕ್ತ ಎನಿಸಿ ಬರೆದಿದ್ದೇನೆ ,

1) ಹಸಿದ ದೇಹಕೆ 
ಉಸಿರ ಬೆರೆಸುವ ನಲ್ಲೆಯ ಕನಸು 
ನಲ್ಲೆಯು ಸಿಗದೇ 
ಉಸಿರ ಬೆರೆಸಲು ಪರ ಸತಿಯ ನನಸು

2) ಹುಚ್ಚು ಮಗನಿಗೆ
ಮುಚ್ಚು ಮರೆ ಇಲ್ಲ 
ಮೆಚ್ಚಿಸಲು ಮಡದಿ ಇಲ್ಲ
ಬೀಸಿದನು ಊರ ವೈಶ್ಯೆಯ ಸಂಗ 

3) ಕಾದೂ ಕಾದು
ವಿರಹಕೆ ಕರಗಿ 
ಗೂಡ ಸೇರಲು ಹಪಿಸಿ 
ಹೊಸಲು ದಾಟಿದ 

--
ಗಂಗರಾಜು .ಕು.ಸಿ

Monday, November 7, 2011

ಸಣ್ಣ ವ್ಯಥೆ - 11

ಅವನ ಮನಸ್ಸೇ ಹಾಗೆ , ಯಾವುದೇ ಒಳ್ಳೆಯ ವಿಚಾರ,ಕೆಲಸಗಳನ್ನು ಸಹಿಸಿಕೊಳ್ಳುತ್ತಿರಲಿಲ್ಲ. ಅವನು ಬೆಳೆದ ವಾತಾವರಣದಲ್ಲಿ ಎಲ್ಲಿ ದೋಷವಿತ್ತೋ ತಿಳಿಯದು.ಆದರೆ ಒಳ್ಳೆಯ ವಿಚಾರಗಳು ಅವನ ಮೂಗಿನ ನೇರಕ್ಕೆ ಅಸಮಂಜಸ ಮತ್ತು ಕೆಟ್ಟದಾಗಿ ಕಾಣುತ್ತಿದ್ದವು. ಒಮ್ಮೆ ನಮ್ಮ ಮನಸ್ಕನ ಸ್ನೇಹಿತ ತನ್ನ ವಿಚಾರಗಳನ್ನು ಮುದ್ರಿಸಿ ಹಂಚಿದನು ಮತ್ತು ಆ ವಿಚಾರಗಳು ಮನುಷ್ಯನ ಜೀವನವನ್ನು ಕನ್ನಡಿಯಂತೆ ಹಿಡಿಯಲು ಪ್ರಯತ್ನಿಸಿದ್ದವು . ಬಹಳ ಜನರಿಗೆ ಆ ವಿಷಯಗಳು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಣೆ ಯಾಗಿದ್ದವು. ಆದರೆ ನಮ್ಮ ಮನಸ್ಕನಿಗೆ ಈ ವಿಚಾರಗಳು ಯಾವು ಹಿಡಿಸಲಿಲ್ಲ ಮತ್ತು ಇವನ ವಾದವು ಬೇರೆಯದೇ ಆಗಿತ್ತು.
ಆದರೆ ನಮ್ಮ ಮನಸ್ಕ ಒಂದು ಹೆಜ್ಜೆ ಮುಂದೆ ಹೋಗಿ , ಸ್ನೇಹಿತನ ವಿಚಾರಗಳನ್ನು ಅಲ್ಲಗೆಳೆದನು,ದೂಷಿಸಿದನು ಮತ್ತು ಅಸಮಂಜಸ ಎಂದು ತನ್ನ ಪತ್ರಿಕೆಯಲ್ಲಿ ಬರೆದುಕೊಂಡ. ನಮ್ಮ ಹಿರಿಯರು ಕೂಡ ಮನಸ್ಕನ ವಾದವನ್ನು ಸರಿಯಾಗಿ ಪರಿಶೀಲಿಸದೆ ಒಪ್ಪಿಕೊಂಡರು ಮತ್ತು ಮನಸ್ಕನ ಸ್ನೇಹಿತನ ವಿಚಾರ ಧಾರೆಯ ಮೇಲೆ ನಿಷೇಧ ಹೇರಿದರು.
ಹಿರಿಯರು ಏಕೆ ಪರಿಶೀಲಿಸದೆ ನಿಷೇಧ ಹೇರಿದರು , ಇದೇ ತಪ್ಪಲ್ಲವೇ ಖ್ಯಾತ ಖಗೋಳ ಶಾಸ್ತ್ರಜ್ಞ ಕೋಪರ್ನಿಕಸ್ ನ ಸಾವಿಗೆ ಕಾರಣವಾಗಿದ್ದು?
ಪರರ ಮೇಲೆ ಕಲ್ಲೆಸೆಯುವಾಗ , ಮೊದಲು ನಾವು ಗಾಜಿನ ಮನೆಯಲ್ಲಿ ಇದ್ದೇವೆ ಎಂದು ಏಕೆ ಮರೆಯುತ್ತೇವೆ ?
ದಯವಿಟ್ಟು ಸೂಕ್ತವಾದ ಮಾಹಿತಿ ಇಲ್ಲದೆ ತೀರ್ಮಾನ ತೆಗೆದುಕೊಳ್ಳಬೇಡಿ ಮತ್ತು ಯಾರನ್ನು ನೋಯಿಸಬೇಡಿ.

- ಗಂಗರಾಜು.ಕು.ಸಿ.

Friday, November 4, 2011

ಸಣ್ಣ ವ್ಯಥೆ - 10

ಆ ಊರಿಗೊಬ್ಬ ಕವಿಯಿದ್ದ, ಆ ಕವಿಗೆ ಅವನ ಹಳೆಯ ನೆನಪುಗಳೇ ಕಾವ್ಯ ವಸ್ತು. ಆ ನೆನಪಿನಂಗಳದಲ್ಲಿ ನಮ್ಮ ಕವಿಯ ಕವಿತೆಗಳು ಮೀಯುತ್ತಿದ್ದವು."ನೆನೆವ ಮನ" ಎಂಬ ಕವನ ಸಂಕಲನವನ್ನು ಆ ಊರಿನ ಹಿರಿಯರು ಸೇರಿಕೊಂಡು ಪ್ರಕಟಿಸಿದರು ಮತ್ತು ಹಲವಾರು ಬಾರಿ ಮರು ಪ್ರಕಾಶನ ಕೂಡ ಕಂಡಿತು.ಆದರೆ ಈಗ ಕವಿಯ ನೆನೆವ ಮನ ಮತ್ತು ದೇಹ ಆ ಊರನ್ನು ಮರೆತು ಪಟ್ಟಣ ಸೇರಿಯಾಗಿದೆ . ಈಗ ಪಟ್ಟಣದ ಸುಖದ ನನಸುಗಳು, ಬದುಕು ಕಟ್ಟಿಕೊಟ್ಟ ನಲಿವಿನ ನೆನಪುಗಳನ್ನು ಮರೆಸಿ ."ನಾನು ಮತ್ತು ನನ್ನ ಸುಖಿ ಜೀವನ" ಎಂಬ ಕವನ ಸಂಕಲನವನ್ನು ಅವನೇ ಹುಟ್ಟುಹಾಕಿದ ಪ್ರಕಾಶನದಿಂದ ಹೊರಬಂದು ವಿಮರ್ಶಕರಿಂದ ದೊಡ್ಡ ಪೆಟ್ಟುಗಳನ್ನು ಗಳಿಸಿದೆ.
ಈಗ ಕವಿಗೆ ನೆನೆವ ಮನ ಕೊಟ್ಟ ಊರು ಗಣಿ ಧೂಳಿನಿಂದ ಮುಚ್ಚಿ ಹೋಗಿದೆ , ಕವಿಯ ತಂದೆ ತಾಯಿ ದಿನ ನಿತ್ಯ ಗಣಿ ಧೂಳಿನಿಂದ ಬಂದ ಕೂಲಿಯಲ್ಲಿ ಜೀವನ ನೂಕುತ್ತಿದ್ದಾರೆ.
ಐಶ್ವರ್ಯ ಯಾರನ್ನು ಬಿಡುವುದಿಲ್ಲ ಅಲ್ಲವೇ ? ಅದು ಕವಿಯಾಗಲಿ ಅಥವಾ ರವಿಯಾಗಲಿ , ಮೋಹಿಸಿದ ಮೇಲೆ ಮಸಣವೇ ಉತ್ತರವೇ ?

- ಗಂಗರಾಜು.ಕು.ಸಿ.

Wednesday, November 2, 2011

ಸಣ್ಣ ವ್ಯಥೆ - 9

ಪಿ.ಯು.ಸಿ ಯಲ್ಲಿ ಉನ್ನತ ದರ್ಜೆ ಮತ್ತು ಸಿ.ಇ.ಟಿ. ಪರೀಕ್ಷೆ ಯಲ್ಲಿ ಉತ್ತಮ ಶ್ರೇಣಿ ಪಡೆಯಲೇ ಬೇಕೆಂದು ಭರತ ಹಗಲು ರಾತ್ರಿ ಕಷ್ಟ ಪಟ್ಟು ಓದಿದ , ಭರತನ ಇಚ್ಚೆಯಂತೆ ಉತ್ತಮ ಶ್ರೇಣಿಯನ್ನು ಪಡೆದು ರಾಜ್ಯದ ಅತ್ಯುನ್ನತ ವಿದ್ಯಾಸಂಸ್ಥೆಯಲ್ಲಿ ಇಂಜಿನಿಯರಿಂಗ್ ವ್ಯಾಸಂಗಕ್ಕೆ ಸೇರಿಕೊಂಡ. ಇಂಜಿನಿಯರಿಂಗ್ ನಲ್ಲೂ ಕೂಡ, ಅತಿ ಹೆಚ್ಚು ಸಂಬಳ ಕೊಡುವ ಕಂಪನಿ ಗೆ ಸೇರಬೇಕೆಂದು ಕಷ್ಟ ಪಟ್ಟು ಓದಿದ , ಪ್ರತಿ ಫಲವಾಗಿ ೬ ನೆ ಸೆಮೆಸ್ಟರ್ ನಲ್ಲೆ ಒಂದು ಅಂತರ್ ರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡ. ಇಂಜಿನಿಯರಿಂಗ್ ಪದವಿಧರನಾದಮೇಲೆ ಅಂತರ್ ರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡ , ಆದರೆ ಕೇವಲ ೬ ತಿಂಗಳುಗಳಲ್ಲಿ ವೃತ್ತಿ ಜೀವನಕ್ಕೆ ಒಗ್ಗಿಕೊಳ್ಳದೆ , ತಾನೆ ಸ್ವತಃ ಕಂಪನಿ ತೆಗೆಯುತ್ತೇನೆ ಎಂದು ಹೊರಬಂದ . ತನ್ನಲ್ಲಿದ್ದ ಹಣ , ಅಪ್ಪನ ಆಸ್ತಿ ಮತ್ತು ಒಂದಷ್ಟು ಸ್ನೇಹಿತರನ್ನು ಸೇರಿಸಿಕೊಂಡು ಉದ್ಯಮಿಯಾಗಲು ಹೊರಟ, ಆ ಕಂಪನಿ ಕೂಡ ಚೆನ್ನಾಗಿಯೇ ನಡೆಯುತ್ತಿತ್ತು ,ಆದರೆ ಸ್ನೇಹಿತರೊಡನೆ ಗುದ್ದಾಟ ಮಾಡಿಕೊಂಡು ಕಂಪನಿಯನ್ನು ಉನ್ನತ ಬೆಲೆಗೆ ಮಾರಿದ. ಈಗ ಕೇವಲ ಬ್ಯಾಂಕ್ ಬ್ಯಾಲನ್ಸ್ ಮಾತ್ರ ಭರತನ ಬಳಿ ಉಳಿದಿತ್ತು. ತಂದೆ ತಾಯಿಯೂ ಕೂಡ ವೃದ್ಧಾಶ್ರಮದ ಪಾಲಾಗಿದ್ದರು. ಕಾಲೇಜಿನಲ್ಲೇ ಇಷ್ಟ ಪಟ್ಟಿದ ಪ್ರೇಯಸಿ ಪ್ರೀತಿಯನ್ನು ಮದುವೆಯೂ ಆದ , ಆದರೆ ಮದ್ವೆಯಾದ ೩ ತಿಂಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿ, ನ್ಯಾಯಾಧೀಶರ ಬಳಿ ಉಗಿಸಿಕೊಂಡು , ಮುಂದಿನ ೩ ತಿಂಗಳಲ್ಲಿ ವಿಚ್ಚೇದನ ಕೂಡ ಪಡೆದ. ಇಷ್ಟೆಲ್ಲಾ ಕಾಲ ಘಟ್ಟದಲ್ಲಿ ನಡೆಯುವ ಹೊತ್ತಿಗೆ ಭರತನಿಗೆ ಬರೋಬ್ಬರಿ ೩೮ ವರ್ಷ, ಇನ್ನು ಏನು ಮಾಡುತ್ತಾನೋ ನೋಡಬೇಕು .
ಇರುವುದೆಲ್ಲವ ಬಿಟ್ಟು ಇಲ್ಲದೆಡೆಗೆ ದಾರಿ , ಅಂದ್ರೆ ಇದೇನಾ ?

- ಗಂಗರಾಜು.ಕು.ಸಿ

Tuesday, November 1, 2011

ಸಣ್ಣ ವ್ಯಥೆ - 8

ಅಂದು ಕನ್ನಡ ರಾಜ್ಯೋತ್ಸವ , ದಿನ ಪೂರ್ತಿ ಆಡಳಿತ ಪಕ್ಷದವರನ್ನು ಗೋಳು ಹೊಯ್ದುಕೊಂಡ ವಿರೋಧ ಪಕ್ಷದ ಮುಖಂಡರು,ವಿಚಿತ್ರ ರೀತಿಯಲ್ಲಿ ಪ್ರತಿಭಟನೆ ನಡೆಸಿದರು , ವಿಧಾನ ಸೌಧದ ಹತ್ತಿರ ಕನ್ನಡ ಪಟಗಳನ್ನು ಇಟ್ಟು ಜೈ ಕಾರ ಮತ್ತು ಆಡಳಿತ ಪಕ್ಷಕ್ಕೆ ಘೆರಾವ್ ಕೂಗಿದರು.ಮುಖಂಡರು ಕನ್ನಡ ಭಾಷೆಗೆ ಇಂದಿನ ಸ್ಥಾನ ಮತ್ತು ಮಾನಗಳ ಕುರಿತು ಎಲ್ಲಾ ವಾರ್ತಾ ಮಾಧ್ಯಮದವರೊಂದಿಗೆ , ವರದಿಗಾರರು ಜಾಗ ಖಾಲಿ ಮಾಡುವವರೆಗೂ ಆಡಳಿತ ಪಕ್ಷದ ವಿರುದ್ಧ ಉಚ್ಚವಾಗಿ ತೆಗಳಿದರು. ಸಂಜೆಯ ಹೊತ್ತಿಗೆ ಒಂದು ನರ ಪಿಳ್ಳೆಯು ವಿಧಾನ ಸೌಧದ ಹತ್ತಿರ ಕಾಣಲಿಲ್ಲ , ಎಲ್ಲರು ತಮ್ಮ ದಿನಚರಿ ಮುಗಿಸಿ ಬಿ.ಎಂ.ಟಿ.ಸಿ. ಬಸ್ಸು ಹತ್ತಿ ಮನೆ ಸೇರಿಕೊಂಡರು.ಇದೇ ಶಾಸಕರು ಸರಿಯಾಗಿ ೫ ತಿಂಗಳ ಸಮಯದಲ್ಲಿ ಅಂದರೆ ಏಪ್ರಿಲ್ ತಿಂಗಳಲ್ಲಿ , ತಮ್ಮ ಮೊಮ್ಮಗನಿಗೆ ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರವೇಶ ಕೊಡಲಿಲ್ಲ ಎಂದು ,ಮಂದಿಯ ಜೊತೆ ವಿಧಾನ ಸೌಧದ ಬಳಿ ಸಂಜೆಯವರೆಗೂ ಪ್ರತಿಭಟಿಸಿದರು. 

- ಗಂಗರಾಜು.ಕು.ಸಿ.

Monday, October 24, 2011

ಕುಡಿದು ಬರೆದಾಗ ( Drink ಅಂಡ್ write )


ಕುಡಿದು ಬರೆದಾಗ ( Drink ಅಂಡ್  write )   ,

ಈ ಶೀರ್ಷಿಕೆ ಎಷ್ಟು ಚೆನ್ನಾಗಿದೆ ಆಲ್ವಾ ? , ಸಾಮಾನ್ಯವಾಗಿ ಕುಡಿದವರು ( i mean alcohol ) ಪಕ್ಕದಲ್ಲಿರೋ  ಸ್ನೇಹಿತನಿಗೋ  ಇಲ್ಲ  ತನ್ನ ಪ್ರೆಯಸಿಗೋ , ತನ್ನ ಪಾನಕ್ಕೆ sponsor ಗೋ ಅಥವಾ ತಮ್ಮ ಹೆಂಡತಿಗೋ ತಮ್ಮ ಅನುಭವಗಳನ್ನು , ಅವಸರದಿಂದ , ಅವಶ್ಯವಿಲ್ಲದೆ  , ಅಳುಕಿಲ್ಲದೆ  , ಅಂಜಿಕೆ ಇಲ್ಲದೆ  , ಹದ್ದಿಲ್ಲದೆ , ತಮ್ಮ್ಕ ಮನಸ್ಸಿನ ಬಯಕೆಗಳನ್ನು , ಘಟನೆಗಳನ್ನೂ ,ಅನುಭವಗಳನ್ನೂ ಮಧ್ಯಪಾನದ ಅಮಲಿನಿಂದ ಹೊರಬರುವವರೆಗೂ ಹೇಳುತ್ತಾರೆ ಮತ್ತು ಕೆಲವರು ಗೊಣಗಿ ಕೊಳ್ಳುತ್ತಾರೆ .ಈ ಗೊಣಗಿಕೊಳ್ಳುವವರು ಸ್ನೇಹಿತರು , ಪ್ರೇಯಸಿಯು ಅಟ್ ಲೀಸ್ಟ್ ಕೊರೆಸಿಕೊಳ್ಳುವ ಯಾವ ಪ್ರಜೆಯು ಸಿಗದೇ ಹೋದಾಗ ಇವರು ಉದ್ಭವಿಸುತ್ತಾರೆ , ಇವರ ಬಗ್ಗೆ ಈಗ ಮಾತು ಬೇಡ , ಯಾಕೆಂದರೆ ಅದು ಅವರು ಪಡಕೊಂಡದ್ದು .

ಕುಡಿದವರು ಲೀಲಾಜಾಲವಾಗಿ ತಮ್ಮ ಮನಸ್ಸಿಗೆ ತೋಚಿದ್ದು ಹೇಳುತ್ತಿರುತ್ತಾರೆ , ಅವುಗಳಲ್ಲಿ ಒಂದಷ್ಟು ನಿಜ , ಒಂದಷ್ಟು ಕೇಳುಗರನ್ನು ಮೆಚ್ಚಿಸಲು ಹೇಳುವ ವರ್ಣನಾತೀತ ಮಾತುಗಳು ಅಷ್ಟೇ . ಆದರೆ ಆ ನಿಜಗಳು ಇವೆ ಆಲ್ವಾ , ಅವು ಮಾತ್ರ ಸಾಮಾನ್ಯವಾಗಿ ಇರುವುದಿಲ್ಲ ,ತಲೆಯ ಮೇಲೆ ಹೊಡೆದಂಗೆ  ಇರ್ತಾವೆ . ಬಹುಷಃ ನಾ ಈಗ ಹೇಳಿದ ಗಾದೆ ಮಾತು ಕೇಳಿರಬಹುದು, ಅದರ ಅನುಭವ ಬೇಕಾದರೆ ಕುಡುಕರ ಸಂಗಡ ಕೂರಬಹುದು .

ಕುಡಿದವರಿಗೆ ಒಂದು ರೀತಿಯ ಮೊಂಡು ಧೈರ್ಯ ಅಥವಾ ನಾವು ಕುಡಿದವರು so ,ನಾವು ಮನಸೆಚ್ಚ್ಹ ಮಾತನಾಡಬಹುದು ,ಯಾರು ಏನು ಕೇಳಿಯಾರು ಎಂಬ ಧೈರ್ಯ ದ ಮೇಲೆ ಈ ರೀತಿಯ ವರ್ತನೆ ಎಂದು ಎಲ್ಲರು ತಿಳಿದಿದ್ದಾರೆ. ಆದರೆ ನಿಜವಾಗಿ ಕುಡಿದವನು, ಅವ್ನ ಮೇಲೆ ನಿಯಂತ್ರಣ ತಪ್ಪಿರುತ್ತಾನೆ , ಆ ನಿಯಂತ್ರಣ ತಪ್ಪಿದಾಗ ನಾವು ಮನುಷ್ಯನ ನಿಜವಾದ ಮುಗ್ದ ಮನಸ್ಸಿನ ಸುಪ್ತ ಚಿತ್ರಣವನ್ನು ಕಾಣಬಹುದು .  ಆ ಚಿತ್ರಣ , ಕೇವಲ ಕೆಲವರಲ್ಲಿ ಮಾತ್ರ ಕಾಣಬಹುದು , ಈ ಯಾಂತ್ರಿಕ ಜಗತ್ತಿನಲ್ಲಿ , ಭಾವನೆಗಳ ಸುಳಿಯಲ್ಲಿ , ಜೀವನದ ಜಂಜಾಟದಲ್ಲಿ , ಈ ಚಿತ್ರಣ ಬಹು ಅವಶ್ಯ  ಅಲ್ವೇ ?

ಸರಿ , ಇಷ್ಟೆಲ್ಲಾ  ಕೊರಿತಿದ್ದಿಯ ಅಂದ್ರೆ , ನೀ ಬಹುಷಃ ಕುಡಿದಿರಲೇ ಬೇಕು ಅಂತ ನನ್ನ ಪ್ರಿಯ ಮಿತ್ರರು ಯೋಚಿಸಿರುತ್ತಿರಾ ಆಲ್ವಾ ? , so my answer is yessssssss .

ಎಲ್ಲೋ ದೂರದ ಊರಲ್ಲಿ , ಯಾರು ಜೊತೆ ಇಲ್ಲದೆ , ದಿನವು ಯಾಂತ್ರಿಕತೆಯ  ವೈಭವಕ್ಕೆ ಬೇಸತ್ತು , ಒಮ್ಮೆ ಒಬ್ಬನೇ ಕುಳಿತು ಪಾನಮತ್ತ ನಾದಾಗ , ಅದರ ವ್ಯಥೆಯೇ ಈ ನನ್ನ ಇವತ್ತಿನ ಅಂಕಣ . 
ಸರಿಯಾಗಿ ಕಂಠ ಪೂರ್ತಿ ಕುಡಿದೆ , ನನ್ನ ದೇಹ ತನ್ನ ಧಾರ್ಧ್ಯ ವನ್ನು ತಪ್ಪುವ ಸ್ಥಿತಿಗೆ ತಲುಪಿತು , ನನ್ನ ಡಾಕ್ಟರ ಸ್ನೇಹಿತ ಹೇಳಿದ್ದ " ಮಗನೆ ಕುಡಿದಾಗ ಚೆನ್ನಾಗಿ ತಿನ್ನು ಅಂಥ" , so , ಸರಿಯಾಗಿ ಕಂಠ ಪೂರ್ತಿ ತಿಂದೆ , ಬಿಲ್ ಕೊಟ್ಟು , ಹೇಗೋ ದಾರಿ ಹಿಡಿದು ಹೋಟೆಲ್ ತಲುಪಿದ್ದೇನೆ .

 ತಲುಪುವ ದಾರಿಯಲ್ಲಿ ನನ್ನ ಮನಸ್ಸಿನಲ್ಲಿ ನೂರಾರು ವಿಕಾರಗಳು , ಆ ವಿಕಾರಗಳನ್ನೆಲ್ಲ ಇಲ್ಲಿ ಬರೆದರೆ ನನ್ನ ಮಾರಣ ಹೋಮ ಖಂಡಿತ , and more over ನಾನು ಹೇಳುವುದು ಇಲ್ಲ ಬಿಡಿ ಅತ್ಲಾಗ.ಸುಮಾರು ೧೦೦ ರಿಂದ ೧೫೦ ವಿಕಾರಗಳು ನನ್ನ ಮನಸ್ಸು ಹೊಕ್ಕವು , ಅವುಗಳಲ್ಲಿ ಒಂದು ವಿಕಾರ ಮಾತ್ರ ನನ್ನನ್ನು ಈ ಅಲುಗಾಡುವ ಕೈಯಲ್ಲೂ ಬರೆಯುವಂತೆ ಮಾಡಿದೆ . ಏನು ಅಂತೀರಾ?
ಕುಡಿದು ಮಾತಾಡಿದ್ರು ಓಕೆ , ಕುಡಿದು ಬರೆದರೆ ತಪ್ಪೇನು ಅಂಥ ?

 ಕುಡಿದು ಏನು ಬೇಕೋ ಅದು , ಹೇಗೆ ಬೇಕೋ ಹಾಗೆ , ಯಾವ ರೀತಿ ಬೇಕೋ ಆ ರೀತಿ , ಕೆಟ್ಟದಾಗಿ , ಉಚ್ಚವಾಗಿ ಮಾತನಾಡುವವರನ್ನು ನೋಡಿ  ಬೇಸತ್ತು , ಅವರಿಗೆ ಛೀಮಾರಿಯನ್ನು  ಹಾಕಿರುತ್ತೇವೆ ಮತ್ತು ಅವರಲ್ಲಿ ನಿಮಗೆ ಒಂದು ಕ್ಷಮೆ ಇದೆ ಆಲ್ವಾ ? i .e ಕುಡಿದಿದ್ದಾನೆ ಅಂಥ , ಆ ಕ್ಷಮೆ ನನ್ನ ಮೇಲೂ ಇರಲಿ . ಕೆಲವು ಮಾತುಗಳು ಸೂಕ್ಷ್ಮ ವಾಗಿರ್ತ್ತವೆ , ಆದ್ರೆ ಅವನ್ನ ನೀವು ನಿಮ್ಮ ಭೂತ ಕಾಲವೆಂಬ ಕನ್ನಡಿ ಇಂದ ಏನು ನೋಡ್ಕೊಳೋಕೆ ಹೋಗಬೇಡಿ , ಯಾಕಂದ್ರೆ ನಾವೆಲ್ಲಾ ಸಜಿವೀಗಳು ಇರುವುದು ಭೂಮಿಯ ಮೇಲೇನೆ .

 ಸುಪ್ತ ಮನಸ್ಸು ಮತ್ತು ಜಾಗೃತ ಮನಸ್ಸು ಎಂಬ ವಿಷಯಗಳ ಬಗ್ಗೆ ಕೇಳಿರುತ್ತೇವೆ , ಬಹುಷಃ ನಿಮಗೆಲ್ಲರಿಗೂ ಗೊತ್ತು ಇರುತ್ತದೆ, ನನ್ನ ಇಂಗ್ಲಿಷ್ ಮಾಧ್ಯಮದ ಮಿತ್ರರಿಗಾಗಿ , conscious mind and sub conscious mind ಅಂಥ ಅಷ್ಟೇ. ಇವುಗಳ ಬಗ್ಗೆ ನಾನು ನಿಮ್ಮ ಬಳಿ ಚರ್ಚಿಸಲು ಮನೋರೋಗಿನೂ ಅಲ್ಲ ಅಥವಾ ಮನೋವೈಧ್ಯನು ಅಲ್ಲ .ಆದರು ಸಹ ಸ್ವಲ್ಪ ನಾನು ಇದರ ಬಗ್ಗೆ ಬರಿತೀನಿ , ಈ ಎರಡು ಮನಸ್ಸುಗಳಲ್ಲದೆ ಇನ್ನೊಂದು ಇದೆ , ಅದೇ ಅಂತರ್ಮುಖಿ ಮನಸ್ಸು. ಕೆಲವರಿಗೆ ಈ ಮನಸ್ಸು ತಾವು ಬೆಳೆಯುವ ವಾತಾವರಣದಿಂದ ಬಂದಿರುತ್ತದೆ ಅಥವಾ ಅವರು ವಾಸಿಸುವ ಪರಿಸರದ ಪ್ರಭಾವದಿಂದ ಈ ರೀತಿಯ ಪರಿವರ್ತನೆಯಾಗಿರಬಹುದು. ಇವರನ್ನು ರೋಗಿಗಳು ಅಂತ ಕರೆಯಬಹುದು ,ಆದರೆ ವಾಸಿ ಮಾಡಲಾಗದ ರೋಗ ಅಷ್ಟೇ.

 ನನ್ನ ಕುಡಿದ ಮನಸ್ಸಿನ ಪ್ರಕಾರ, ಎಲ್ಲ ಮನಸ್ಸುಗಳು ,ಒಂದಲ್ಲ ಒಂದು ಸಮಯದಲ್ಲಿ ಅಂತರ್ಮುಖಿಯಾಗಿ ವರ್ತಿಸುತ್ತವೆ ಅಥವಾ ವರ್ತಿಸಿರುತ್ತವೆ. ಇದು ನಮ್ಮ ಮನಃಶೈಲಿ, ಇದನ್ನು ಬದಲಿಸಿಕೊಳ್ಳಲು ಕೆಲವರಿಗೆ ಅಥವಾ ಕೆಲವು ಸನ್ನಿವೇಶಗಳಲ್ಲಿ ಸಾಧ್ಯವಾಗುವುದಿಲ್ಲ. ಸೊ , ಇದು ಮಾನವನ ಸಹಜ ಮನೋ ಧರ್ಮ ಅಂಥ ಹೇಳೋಣವೇ ?
ನಮ್ಮ ಮನಸ್ಸು ಕೂಡ ಒಂದು ವಿಷಯ ತೆಗೆದು ಕೊಂಡರೆ , ಅದನ್ನ ಆಳವಾಗಿ ಅಗೆಯಲು ಪ್ರಯತ್ನಿಸುತ್ತದೆ ಆಲ್ವಾ ಈ ಅಗೆಯುವ ಸಂಧರ್ಭದಲ್ಲಿ ಕೆಲವು ತಾತ್ಕಾಲಿಕ ನಿರ್ಣಯಗಳನ್ನ ತೆಗೆದುಕೊಂಡು ಮುಂದೆ ಹೋಗಿರುತ್ತೇವೆ , ಕೆಲವೊಮ್ಮೆ ಆ ನಿರ್ಣಯಗಳೇ ಈ ಅಂತರ್ಮುಖದ ಮೂಲ ಕಾರಣ ವಾಗಬಹುದು. ಸಾಕಪ್ಪಾ, ಸಾಕು ಬಹಳಷ್ಟು ಇದರ ಬಗ್ಗೆ ಬಹಳಷ್ಟು ಮಾತಾಡಿದರೆ ,ನನ್ನ NIMHANS candidate ಅಂಥ ನೀವು ಕರೆದರೂ ಕರೆಯಬಹುದು.ನಾನು ಇಲ್ಲಿಗೆ ಇದರ ಬಗ್ಗೆ ನಿಲ್ಲಿಸಿ ಬಿಡುತ್ತೇನೆ.

 ಅಯ್ಯೋ, ನಾನು ಇಲ್ಲಿ ಕುಡಿರಿ ಅಂಥ ನಿಮಗೆ advertisementu  ಕೊಡ್ತಾ ಇಲ್ಲ ಅಥವಾ ನಾನು ಕುಡಿತಿನಿ , ಕುಡಿದಿದ್ದೀನಿ ಅಂಥ ಹೋಗಳಿಕೆನು ಕೊಡ್ತಾ ಇಲ್ಲ .

 ಯಾರೋ ಮಹಾನುಭಾವರು ಹೇಳಿರೋ ಒಂದು ಸಾಲು ಜ್ಞಾಪಕಕ್ಕೆ ಬಂತು ,
"ಕುಡಿದು ಕುಡಿದು ಕುಣಿದಾಡು ಹೇ ಮನುಜ ,
ಕುಡಿದವನ, ಅರಿತವ ನಿಜಕು ರಾಜ" ,
ನನಗೆ , ಕವಿ ಈ ಸಾಲುಗಳನ್ನ ಯಾವ ಸಂಧರ್ಭದಲ್ಲಿ ಹೇಳಿದ್ದಾರೆ ಅಂಥ ನಿಜವಾಗಲು ಗೊತ್ತಿಲ್ಲ.
ಆದರೆ ಇಲ್ಲಿ ಉಲ್ಲೇಖಿಸಲು ಕಾರಣ, ಕುಡಿದಾಗ ಜನ ತಮ್ಮ ನೋವನ್ನೆಲ್ಲ ಮರೆತು , ಯಾವುದೊ ಹುಚ್ಚು ಧೈರ್ಯದಿಂದ , ಪ್ರಪಂಚಕ್ಕೆ ಸವಾಲೆಸೆಯುವ ಶಕ್ತಿವಂತರಂತೆ ಆಡುತ್ತಾರೆ ಆಲ್ವಾ ?, ಅದೇ ನೀವು ನಿಮ್ಮ ನಿಜ ಜೀವನದಲ್ಲೂ ಧೈರ್ಯವಾಗಿ ಇರಿ , ನೀವು ನೀವಾಗಿರಿ ಅಷ್ಟೇ. ನಮಗೆ ಧೈರ್ಯ ಎಂಬ ಗುಣವನ್ನು ತುಂಬಲು alcohol ನ ಅಗತ್ಯ ಏಕೆ ಬೇಕು? , ಧೈರ್ಯ ಎಂಬ ಅಂಶ ಮನಸ್ಸಿಗೆ ಸಂಬಂದಿಸಿದ್ದು , so alcohol ನ ಹೊಟ್ಟೆಗೆ ಹಾಕ್ಕೊಂಡ್ರೆ kidney, lever ಹಾಳಾಗುತ್ತೆ ಹೊರತು ಧೈರ್ಯ ಎಲ್ಲಿ ಬಂದಿತು.

 ನನಗೂ ಸ್ವಲ್ಪ ಕಿಕ್ಕ್ ಕಡಿಮೆ ಆಯಿತು , ನಾವು ಪಾಚ್ಕೊತಿವಿ. good night.


-- ಗಂಗರಾಜು.ಕು.ಸಿ.

Friday, October 21, 2011

ಸಣ್ಣ ವ್ಯಥೆ - 7

ಕಾಲೇಜು ರಂಗ ಕಳೆದು ಉದ್ಯೋಗವ ಮಾಡಲು ಒಂದು ಸಾಫ್ಟ್ ವೇರ್ ಕಂಪನಿಗೆ ಕಾಲೇಜು ಮುಗಿದ ೪ ದಿನಗಳಲ್ಲಿ ಸೇರಿಕೊಂಡೆ.ಇದಕ್ಕೆ ನಾನು ನನ್ನ ಕಾಲೇಜಿಗೆ ಮತ್ತು ನಮ್ಮ ಉಪನ್ಯಾಸಕರಿಗೆ ಚಿರ ಋಣಿ. ಉದ್ಯೋಗದ ಪ್ರಥಮ ತಿಂಗಳು ಹೊಸ ಹೊಸ ವಿಷಯಗಳ ಅರಿಯುವಲ್ಲಿ , ಪರಿಚಯಗಳಲ್ಲಿ ಒಂದು ಸುಂದರ ಅಲೆಯಂತೆ ಕಳೆಯಿತು.ತಿಂಗಳ ಕೊನೆಗೆ ಪ್ರಥಮ ಸಂಬಳವೆಂಬ ಹೊಸ ಪದಕ್ಕೆ ನನ್ನ ಜೀವನ ಎದುರು ನೋಡ ತೊಡಗಿತು, ಮನದಲ್ಲಿ ಒಂದು ಯೋಚನೆ ಏನ್ ಮಾಡುವುದು ಮೊದಲ ಸಂಬಳದಲ್ಲಿ ಅಂಥ ,ತಕ್ಷಣ ನನ್ನ ತಂಗಿಗೆ ಫೋನಾಯಿಸಿದೆ , ಅಪ್ಪನ ಶರ್ಟ್ ಸೈಜ್ ನೋಡಿ ಹೇಳು , ಹಾಗೆ ತಮ್ಮನ ಜೀನ್ಸ್ ಪ್ಯಾಂಟ್ ಮತ್ತು T ಶರ್ಟ್ ಸೈಜ್ ಅನ್ನು ಹೇಳು ಎಂದು ಹೇಳಿ, ಫೋನ್ ಇಟ್ಟು ಬಿಟ್ಟೆ.ಅರ್ಧ ತಾಸು ಬಿಟ್ಟು ಮತ್ತೆ ಮನೆಗೆ ಫೋನಾಯಿಸಿದೆ , ಆ ಕಡೆಯಿಂದ ಬಂದ ಉತ್ತರ ನನ್ನ ಕಣ್ಣನ್ನು ಒದ್ದೆ ಯಾಗಿಸಿತು ಮತ್ತು ಅಪ್ಪನ ಮೇಲೆ ಮತ್ತಷ್ಟು ಗೌರವ ಹೆಚ್ಚಿಸಿತು , "ಅಣ್ಣ , ಅಪ್ಪನ ಶರ್ಟ್ ನಲ್ಲಿ ಹಿಂದೆ ಹರಿದಿದೆ ಕಣೋ ಸೈಜ್ ಇರೋ label ,ಶರ್ಟ್ ಅಲ್ಲಿ ಇಲ್ಲ" .ನಾನು ಎಂದು ಅಪ್ಪನ ಬಟ್ಟೆಯ ಬಗ್ಗೆ ಅಷ್ಟು ಗಮನಿಸಿರಲಿಲ್ಲ .ಈ ಚಿತ್ರಗಳು ಮನಸ್ಸಿನ ಮೇಲೆ ಮೂಡಿ ಸುಮಾರು ೪ ವರ್ಷಗಳು ಕಳೆದಿವೆ ,ಆದರೆ ಈಗಲೂ ಯಾರೇ ಸ್ನೇಹಿತರಾಗಲಿ ಪ್ರಥಮ ಸಂಬಳದ ಬಗ್ಗೆ ನನ್ನ ಬಳಿ ಚರ್ಚಿಸಿದಾಗ ನನ್ನ ಕಣ್ಣು ಈಗಲೂ ಒದ್ದೆ ಯಾಗುತ್ತದೆ.
ಜೀವನದ ನಮ್ಮ ಪ್ರತಿ ಏಳಿಗೆಯಲ್ಲು ಭೂತ ಕಾಲದ ಮೆಟ್ಟಿಲುಗಳು ನಮ್ಮನ್ನ ಸದಾ ಎತ್ತರದಲ್ಲಿ ,ಎಚ್ಚರದಿಂದ ಇರುವಂತೆ ಮಾಡುತ್ತವೆ ಆಲ್ವಾ ?.

- ಗಂಗರಾಜು.ಕು.ಸಿ.

Thursday, October 20, 2011

ಸಣ್ಣ ವ್ಯಥೆ -6

ಒಮ್ಮೊಮ್ಮೆ ಅನಿಸುತ್ತದೆ ಯಾಕೋ , ಈ ಡಾರ್ವಿನ್ ಸಿದ್ಧಾಂತವನ್ನ ಜನರು ಎಲ್ಲಾ ಕಡೆ ಆಚರಣೆಗೆ ತರುತ್ತಿದ್ದಾರೆ ಅಂಥ.ಅದರಲ್ಲೂ ವೃತ್ತಿ ಜೀವನದಲ್ಲಿ ಈ ಸಿದ್ದಾಂತ ಬಹು ಜನರ ಮನಿಸ್ಸಿನ ಮೇಲೆ ನಿರಂತರ ದಾಳಿ ಮಾಡುತ್ತಲೇ ಇರುತ್ತದೆ, ಹಾಗೆಂದು ನಾನು ಇದು ತಪ್ಪು ಅಂಥ ಹೇಳುತ್ತಿಲ್ಲ.ಒಬ್ಬನ ಸೋಲು ಅಥವಾ ಬಲಹೀನತೆ ಮತ್ತೊಬ್ಬನ ಯಶಸ್ಸಿಗೆ ಅಥವಾ ಬೆಳವಣಿಗೆಗೆ ಸಹಾಯವಾಗಬಹುದು , ಆದರೆ ಇದರಲ್ಲಿ ಎಲ್ಲೂ ಸ್ವಾರ್ಥ, ಮೋಸ ಎಂಬ ಅಂಶ ಗಳಿಲ್ಲ. ಆದರೆ ಪರರ ಸೋಲಿಗೆ ನಾವು ಕಾರಣರಾಗಿ, ಆ ಸೋಲಿನ ಮೇಲೆ ಮಹಲ್ ಕಟ್ಟುವುದು ಯಾವ ನ್ಯಾಯ ? .ಈ ಬೆಳವಣಿಗೆ ಇಂದ ಸೋಲೊಪ್ಪಿಕೊಂಡ ಪ್ರಜೆಯ ಮನಸ್ಸಿನ ಮೇಲೆ ಆಗುವ ಆಘಾತ , ಅದರ ಪರಿಣಾಮ ಅವನ ಮನಸ್ಸು ಡಾರ್ವಿನ್ ಸಿದ್ದಾಂತ ಎಲ್ಲೆಡೆಯೂ ವರ್ತಿಸುತ್ತದೆ ಎಂದು ಪ್ರತಿಪಾದಿಸುತ್ತದೆ.
ಇದು ಎಷ್ಟು ಸರಿ , ನನ್ನಲ್ಲಿ ಉತ್ತರವಿಲ್ಲ ?

- ಗಂಗರಾಜು .ಕು.ಸಿ.

Sunday, October 9, 2011

ಸಣ್ಣ ವ್ಯಥೆ -5

ಅಂದು ಚೀನಾ ಗಡಿಯಲ್ಲಿ ಗುಂಡಿನ ಕಾಳಗ ನಡೆಯುತ್ತಲೇ ಇತ್ತು. ನಿರಂತರ ಮಂಜು, ನಿರಂತರ ಗುಂಡಿನ ಸದ್ದು ಅಲ್ಲಿ ಭಯಾನಕ ಸನ್ನಿವೇಶವನ್ನು ಸೃಷ್ಟಿಸಿತ್ತು.ಆದರೆ ಸೈನಿಕ ಸೂರ್ಯಶೇಖರ್ ಇವಕ್ಕೆಲ್ಲ ಅಂಜದೆ ಶತ್ರುಗಳ ಗುಂಪಿನ ಮೇಲೆ ಗುಂಡಿನ ಮಳೆಗೆರೆಯುವಲ್ಲಿ ಮುಂದಾಳಾದರು.ಆ ಕೆಟ್ಟ ಗಳಿಗೆ ಸೂರ್ಯಶೇಖರ್ ರನ್ನು ಬಲಿತೆಗೆದುಕೊಂಡಿತು, ಆ ವೀರ ಮರಣ ಉಳಿದ ಸೈನಿಕರಿಗೆ ಛಲ ಬಿಡದೆ ಹೋರಾಡುವ ಮನಸ್ಥಿತಿ ಕೊಟ್ಟಿತು.ಸುಮಾರು ಮೂರು ದಿನಗಳ ನಂತರ ಸೂರ್ಯ ಶೇಖರ್ ದೇಹವನ್ನು ಅವರ ಹುಟ್ಟುರಿಗೆ ತರಲಾಯಿತು , ಅಂದು ಊರಿನ ಮುಖಂಡರು , ಶಾಸಕರು ಅವರ ಮನೆ ಮುಂದೆ ಜಮಾಯಿಸಿದ್ದರು .ಮಗನ ಕಂಡ ತಾಯಿ ಗರ್ವದಿಂದ ಕಣ್ಣಿರಿಗೆ ಆಸ್ಪದ ಕೊಡದೆ , ತನ್ನ ಎರಡನೇ ಮಗನನ್ನು ಸೇನೆಗೆ ಬಿಳ್ಕೊಟ್ಟಳು.

- ಗಂಗರಾಜು.ಕು.ಸಿ.

Thursday, October 6, 2011

ಸಣ್ಣ ವ್ಯಥೆ -4

ಮಗುವಾಗಿದ್ದಾಗ ಹಾಲಿನ ಬಾಟಲಿ
ಶಾಲೆಗೆ ಹೋಗುವಾಗ ನೀರಿನ ಬಾಟಲಿ
ಕಾಲೇಜಿಗೆ ಸೇರಿಕೊಂಡಾಗ ಬೀರು ಬಾಟಲಿ
ಸಂಬಳ ಬಂದಾಗ ಸ್ಕಾಚ್ ಬಾಟಲಿ
ಮದುವೆಯ ನಂತರ ಸಾರಾಯಿ ಬಾಟಲಿ
ಕೊನೆಯುಸಿರೆಳೆವಾಗ ಗ್ಲುಕೋಸ್ ಬಾಟಲಿ .

- ಗಂಗರಾಜು .ಕು.ಸಿ .


ಸಣ್ಣ ವ್ಯಥೆ -3

ತನ್ನ ಬಾಲ್ಯ ಸ್ನೇಹಿತ ಪ್ರಭುವನ್ನು ಪ್ರೀತಿಸಿ, ಅಪ್ಪ ಅಮ್ಮ ಮತ್ತು ಅಣ್ಣನ ಎದುರು ಹಾಕಿಕೊಂಡು ಮದುವೆಯಾದ ಪುಷ್ಪ ಸಾಸಿವೆ ಹಳ್ಳಿಯಲ್ಲಿ ಸಂಸಾರ ಹೂಡಿದಳು.
ಇದಾಗಿ ೨೦ ವರ್ಷಗಳಾದವು ಪುಷ್ಪನ ಮಗಳು ಲಕ್ಷ್ಮಿ ಸಿ .ಇ. ಟಿ ಪರಿಕ್ಷೆಯಲ್ಲ್ಲಿ ಎಂಟನೆ ರಾಂಕ್ ಗಳಿಸಿದಾಗ ಪುಷ್ಪನ ಅಪ್ಪ ಅಮ್ಮ ,ಮೊಮ್ಮಗಳ ನೋಡಲು ಪುಷ್ಪನ ಅಣ್ಣನ ಮಗನ ಜೊತೆ ಬಂದರು.

ಗಂಗರಾಜು .ಕು.ಸಿ.

ಸಣ್ಣ ವ್ಯಥೆ -2

ಅಂದು ಶ್ರೀ ರಾಮನವಮಿ , ಬೇಸಗೆಯಲ್ಲೂ ಮೋಡಗಳು ಚಂದ್ರನನ್ನು ಕವಿದಿದ್ದವು .ಊರ ಮುಂದೆ ಜನರೆಲ್ಲಾ ಸಂಪೂರ್ಣ ರಾಮಾಯಣ ನಾಟಕವನ್ನು ನೋಡುತ್ತಿದ್ದಾರೆ . ಆದರೆ ಹೊಗೆಸೊಪ್ಪು ಮಾರುವ ರಾಮಣ್ಣನ ಹೆಂಡತಿ ಸೀತಕ್ಕನನ್ನು ಅವರ ಅತ್ತೆ ನಾಗವ್ವ ಇಲ್ಲ ಸಲ್ಲದ ಆರೋಪ ಹೊರಿಸಿ ಮಗನಿಗೆ ಚಾಡಿ ಸುತ್ತುತಿದ್ದಾಳೆ.ಅತ್ತ , ಸೀತಾ ಮಾತೆಯ ಅಗ್ನಿಪ್ರವೇಶ ಸ್ಥಿತಿಯನ್ನು ನೋಡಿ ಮರುಕ ಪಟ್ಟ ಜನ ಎದ್ದು ತಮ್ಮ ತಮ್ಮ ಮನೆಗಳಿಗೆ ಹೊರಟರು.ನಾಗವ್ವ ತನ್ನ ಪಟ್ಟು ಬಿಡದೆ ಸೀತಕ್ಕನಿಗೆ ಪಾಪಿ ಪಟ್ಟ ಕಟ್ಟಿದಳು , ಅಷ್ಟು ಸಾಲದೆನ್ನುವಂತೆ ಸೀತಕ್ಕನ ಮೇಲೆ ಸೀಮೆ ಎಣ್ಣೆ ಸುರಿದಳು. ಆದರೆ ಜನರು ಮಳೆ ಬರುವ ಮುನ್ನ ಮನೆ ಸೇರಿಕೊಂಡರು.ಚಂದ್ರನನ್ನು ಕಾರ್ಮೋಡಗಳು ಆವರಿಸಿ ಮತ್ತಷ್ಟು ಮಳೆಯಾಯಿತು.

ಗಂಗರಾಜು . ಕು.ಸಿ.


ಸಣ್ಣ ವ್ಯಥೆ -1

ಅಲ್ಲೇ ಕುಳಿತಿದ್ದ ಕಾಳಜ್ಜ ಕೂಗಿ ಕೂಗಿ ಕರೆದರೂ ಕೇಳದೆ ೧೫ ವರ್ಷದ ಓಬಳೇಶ ತೋಟಕ್ಕೆ ನುಗ್ಗಿದ, ಅದು ಯುಗಾದಿಯ ಮಾರನೆಯ ದಿನ ಅಲ್ಲಿ ಊರಿನ ಹಿರಿಯರು ಅಂಥ ಅನಿಸಿಕೊಂಡವರೆಲ್ಲ ಜೂಜಿನಲ್ಲಿ ಮಗ್ನರಾಗಿದ್ದರು ಜೊತೆಗೆ ತೀರ್ಥ ಸಹ ಅವರೆಲ್ಲರ ಕೈ ಮತ್ತು ಮೈಯಲ್ಲಿ ಮಿನುಗುತಿತ್ತು . ದೊಡ್ಡ ಬ್ಯಾಲ್ಯದ ಪುಟ್ಟಿ ಮತ್ತು ತಂಡ ತಮ್ಮದೇ ಆದ ನೃತ್ಯದಲ್ಲಿ ರಾರಾಜಿಸುತ್ತಿದ್ದರು.ಓಬಳೇಶ ತನ್ನ ಅಪ್ಪನ ಜೊತೆ ಬೆರೆತು ತಾತನ ಆಸ್ತಿಯನ್ನು ಪಣಕ್ಕೆ ಇಟ್ಟ.
- ಗಂಗರಾಜು ಕು.ಸಿ .

Tuesday, October 4, 2011

ಹೀಗೊಂದು ದಿನ ನನ್ನ ಮನ - ಗಾಂಧೀ ಜಯಂತಿ


ಅಂದು ಬುಧುವಾರ, ಎಲ್ಲರು ಒಂದು ಪಿರೇಡ್ ಮತ್ತು  ಇನ್ನೊಂದು ಪಿರೇಡ್ ನಡುವಿನ ಸಮಯವನ್ನ ಸಂತೋಷದಿಂದ ಕಿರುಚಾಡಿಕೊಂಡು  ಕಳಿತ ಇದಿವಿ, ಆಗ ತಾನೇ  ನಿದ್ದೆ ಇಂದ ಎದ್ದ ವೆಂಕಟ ಸ್ವಾಮಿ  ಕಣ್ಣು ಉಜ್ಜುಕೊಂಡು,ಜೊಲ್ಲು ವರೆಸಿ ಕೊಳ್ಳುತ್ತಿದ್ದ , ಇನ್ನು ಕೆಲವರು ತಮ್ಮ ಗುಂಪು ಘರ್ಷಣೆ ಬಗ್ಗೆ ಗಹನವಾಗಿ ಹುಚ್ಚು ಹುಚ್ಚು ಮಾತುಗಳನ್ನಡುತ್ತಿದರು , ಮತ್ತು ಯಥಾ ಪ್ರಕಾರ ಹುಡುಗಿಯರು ಪುಸ್ತಕ  ನೋಡುವ ಹಾಗೆಯೋ ಅಥವಾ ಏನೋ ಬರೆಯುವ ಹಾಗೆಯೋ , ಇನ್ನು ಕೆಲವರು ತಮ್ಮ ಎರಡು ಜಡೆಗಳ ರಿಬ್ಬೊನ್ ಅಥವಾ  ರಬ್ಬೆರ್  ಅನ್ನು ಸರಿಪಡಿಸಿಕೊಳ್ಳುವ ಹಾಗೆಯೋ  ತಮ್ಮನ್ನು ತಾವು ನಿರ್ದೆಶಿಸಿಕೊಳ್ಳುತಿದ್ದರು, ಆದರೆ ನಾನು ಮಾತ್ರ ಎದ್ದು ಬೋರ್ಡ್ ನ್ನು , ನಮ್ಮ ಶಾಲೆಯ ಮತ್ತು ನಮ್ಮ ಕ್ಲಾಸಿನ ದರ್ಜಿಯ ಮಗ ಹರೀಶ ಅವರ ಅಮ್ಮ ಹೊಲಿದ ಬಣ್ಣ ಬಣ್ಣದ ಡಸ್ಟರ್ ನಿಂದ , ಆಗ ತಾನೆ ವಿಜ್ಞಾನದ ಮೇಡಂ ಗಬ್ಬು ಎಬ್ಬಿಸಿದ ಬೋರ್ಡ್ ನ್ನು  ಒರೆಸುವ ಕಾಮಗಾರಿಯಲ್ಲಿ ತೊಡಗಿದ್ದೆ . ಅಂದು ನಾವು ಮಾಡಿದ ಗಲಾಟೆ , ಗೌರಿಬಿದನೂರಿನ ಭಾನುವಾರದ ಸಂತೆಯ ದಿನ ಕುರಿ ಕೋಳಿ ಹರಾಜು ಹಾಕುವ ಚಿತ್ರಣದ ಹಾಗೆ ಮೂಡಿ,ಮುಗಿಲಿಗೆರಿತ್ತು.

   ಆಗ ಬಂದ್ರು ನೋಡಿ, ನಮ್ಮ ಶಾಲೆಯ ಹೆಡ್ ಮೇಡಂ , ಆಕೆ ಬಂದು ಎದುರಿಗೆ ನಿಂತರೆ ಒಂದನೇ ತರಗತಿ ಮಕ್ಕಳಿಗೆ ಆ ದಿನ  ಒಂದಕ್ಕೆ ಹೋಗುವ ಅವಶ್ಯಕತೆ ಇರುತ್ತಿರಲಿಲ್ಲ , ಆಕೆ ಎರಡನೇ ತರಗತಿ ಮಕ್ಕಳಿಗೆ ಬ್ಯೆದರೆ ಆ ದಿನ ಅವಕ್ಕೆ ಚಳಿ ಜ್ವರ ಪಕ್ಕಾ , ಮೂರನೇ ತರಗತಿ ಇಂದ ಮೇಲ್ಪಟ್ಟ ಮಕ್ಕಳು ಒಂದೇ ಸಮನೆ ನಡುಗುತ್ತಿದ್ದ ಕಾಲ ಅದು. ನಮ್ಮ ಹೆಡ್ ಮೇಡಂ ಒಂದು ಹವಾ ಇಟ್ಟಿದ್ರು . ಇಗಲೂ ಆ ಕ್ಷಣ ನೆನಸಿಕೊಂಡರೆ , ಕನಸಿನಲ್ಲೂ ಎಚ್ಚರವಾಗುತ್ತದೆ. 
ನಮ್ಮ ಹೆಡ್ ಮೇಡಂ ಬಂದು ಕ್ಲಾಸಿನಲ್ಲಿ ನಿಂತಿದ್ದಾರೆ , ಆದ್ರೆ ನಮ್ಮೆಲ್ಲರ ಗಮನ ಅವರ ಬಲಗೈಯ ದಬ್ಬೆಯ ಮೇಲೇನೆ. ಈ ದಬ್ಬೆಗು ಒಂದು ಸ್ವಾರಸ್ಯ ಇದೆ . ನನ್ನ ತಾತ ನಾಯಿ ಓಡಿಸಲು ಎಂದು ತಂದಿಟ್ಟು ಕೊಂಡಿದ್ದ  ಆ ದಬ್ಬೆಯನ್ನು , ನನ್ನ ಖೋ-ಖೋ ಆಟಕ್ಕೆ ಸೇರಿಸಿಕೊಳ್ಳಲಿ ಎಂಬ ದೂರ ಆಲೋಚನಇಂದ ನಾನೇ PT ಮೇಸ್ಟ್ರಿಗೆ ಗಿಫ್ಟ್ ಮಾಡಿದ್ದೆ . ಆದರೆ ಆ ದಬ್ಬೆ ಇಂದು ನಮ್ಮ ಹೆಡ್ ಮೇಡಂ ಕೈ ಸೇರಿತ್ತು. 
ಅವರು ಬಂದ ತಕ್ಷಣ ಲಗು ಬಗನೆ ಬೋರ್ಡ್ ಕ್ಲೀನ್ ಮಾಡಿ ನನ್ನ ಜಾಗಕ್ಕೆ ಬಂದು ನಿಂತೆ, ಅವರ ಮುಖ ನೋಡುವ ಧೈರ್ಯ ಅಲ್ಲಿದ್ದ ೭೦ ವಿಧ್ಯಾರ್ಥಿಗಳಲ್ಲಿ ಯಾರಿಗೂ ಇರಲಿಲ್ಲ. ಆಗ ಅವರ ಬಾಯಲಿ ಬಂದ ಪ್ರಥಮ ವಾಕ್ಯ,
"ಇದೇನು ಕ್ಲಾಸೋ ಇಲ್ಲ ಮಾರ್ಕೆಟ್ಟೋ" , ನಮಗೆಲ್ಲ ಈ ಸಂಭಾಷಣೆ ಮುಂಚೆನೇ ತಿಳಿದಿದ್ದರಿಂದ ಯಾರಲ್ಲೂ ಅದನ್ನು ಕೇಳಿಸಿಕೊಳ್ಳುವ ಹುಮ್ಮಸ್ಸು  ಇರಲಿಲ್ಲ  , ನಾವೆಲ್ಲರೂ ಭಾರತ ಕ್ರಿಕೆಟಿಗರು ೨೦೦೭ ವಿಶ್ವ ಕಪ್ ನಲ್ಲಿ ಹೊರಬಿದ್ದಾಗ ತಲೆ ಬಗ್ಗಿಸಿದ್ದರಲ್ಲ ಹಾಗೆ ನಮ್ಮ ತಲೆಯು ಇಳಿಮುಖವಾಗಿತ್ತು , ಆದರೆ ಕೆಲವರು ಹುಡುಗಿಯರು ಮಾತ್ರ ಇನ್ನು ತಮ್ಮ ಜಡೆಗಳನ್ನು ಸರಿ ಮಾಡಿ ಕೊಳ್ಳುತ್ತಲೇ ಇದ್ದರು .

ಅವರು ದಣಿವಾರುವವರೆಗೂ ತಮಗೆ ತಿಳಿದಸ್ತು ಮತ್ತು ನಮ್ಮ ದೆಸಇಂದ ಕಲಿತಿದ್ದ ಅಷ್ಟು ವಾಕ್ ಚಾತುರ್ಯವನ್ನು ಮುಗಿಸಿ 
"ಕುಕ್ಕರಿಸಿ" ಎಂದು ತಮ್ಮ ಕೈಲಿದ್ದ ದಬ್ಬೆಯನ್ನು ಮೇಜಿನ ಮುಖಕ್ಕೆ ಟಪ್ಪನೆ ಬಡಿದರು. ಆ ರಭಸಕೆ ಮೇಜಿನ ಬಲಗಾಲು ನೆಲಕ್ಕೆ ಬಡಿದು , ತನ್ನ ಅಭಿ ಮುಖವಾದ ಇನ್ನೊಂದು ಕಾಲನ್ನು ಮೇಲೆತ್ತಿಸಿ , ನೃತ್ಯವಾಡ ತೊಡಗಿತ್ತು , ಆ ಚಿತ್ರಣ ನಮ್ಮೆಲ್ಲರ ಗಮನ ಅತ್ತ  ಕೊಂಡೊಯ್ಯಿತು , ಅಲ್ಲೇ ಪಕ್ಕದಲ್ಲಿ ಕುಳಿತಿದ್ದ "ಮುನಿ ಕೃಷ್ಣ " ಅದನ್ನು ಸುಮ್ಮನಿರಿಸಿದನು.

 ಹೆಡ್ ಮೇಡಂ ವಿಷಯಕ್ಕೆ ಬಂದರು ,
"ಯಾರಡ್ರೋ ಕ್ಲಾಸ್ ಇವಾಗ ?" ,
ನಾವೆಲ್ಲರೂ ಚ ಕಾರ ವೆತ್ತದೆ ತಲೆ ಬಗ್ಗಿಸಿಯೇ ಮುನಿಕ್ರಿಷ್ಣನ ಬಗ್ಗೆ ಬೈದು ಕೊಳ್ಳುತಿದ್ದೆವು.
ಮತ್ತೊಮ್ಮೆ ತಮ್ಮ ಕೈಲಿದ್ದ ದಬ್ಬೆಯನ್ನು ಮೇಜಿಗೆ ಜೋರಾಗಿ ಬಡಿದರು , ಆದ್ರೆ ಈ ಬಾರಿ ಮುನಿಕೃಷ್ಣ ಮುಂದಾಲೋಚನೆಇಂದ ಮೇಜಿನ ಕಾಲನ್ನು ಎತ್ತಿ ಹಿಡಿದಿದ್ದ.
ಆಗ ನಮ್ಮ ಕ್ಲಾಸಿನ ಅತಿ ಬುದ್ದಿವಂತೆ ಎಂದು ಹೆಸ್ರು ಮಾಡಿಕೊಂಡಿದ್ದ ಅಥವಾ ಹೆಸರಿಸಿಕೊಂಡಿದ್ದ , ಪೋಲಿಸಪ್ಪನ ಮಗಳು ಬೃಂದಾ " ಈಗ ಸಮಾಜ ಕ್ಲಾಸು ಮಿಸ್ " ಅಂಥ ಹೇಳಿದಳು .
"ಸಮಾಜ ಅಂದ್ರೆ ಸಿದ್ದಪ್ಪ ತಾನೇ" ಎಂದು ಮೇಡಂ ಸ್ವಲ್ಪ ಗಟ್ಟಿಯಾಗಿ ಕೇಳಿದರು.
ಎಲ್ಲರು ಒಂದೇ ಸಮನೆ "ಊನೀ ಮಿಸ್" ಎಂದೆವು.
ಈ ಊನೀ ಎಂದರೆ , ನಮಗೆ ತಿಳಿದಿದ್ದ ಕನ್ನಡಿಕರಿಸಿದ್ದ OK ಎಂದರ್ಥ, ಆದರೆ ಸಂಸ್ಕೃತದಲ್ಲಿ ಊನೀ ಎಂದರೆ ಬೆಕ್ಕು ಅಂಥ ಆಮೇಲೆ ಗೊತ್ತಾಯ್ತು.

ಇಷ್ಟು ಸೀನ್ ಗಳು ನಡೆಯುತ್ತಿದ್ದ ಹಾಗೆ , ಮಾನ್ಯ ಮತ್ತು ನನ್ನ ನೆಚ್ಚಿನ ಮೆಸ್ಟ್ರಾಗಿದ್ದ ಸಿದ್ದಪ್ಪನವರು ,
ಶಾಲೆಯ ಹಿಂದೆ ಹೋಗಿ ಸರಸ್ವತಿ ಬಿಡಿ ಕುಡಿದು ಆರಾಮಾಗಿ ,ಒಂದು ನಿಂಬೆ ಹುಳಿ ಚಪ್ಪರಿಸುತ್ತ ,ಕೊಠಡಿಯ ಮುಂದೆ ಬಂದು ಹೆಡ್ ಮೇಡಂನಾ ನೋಡಿ ತಪ್ಪೆಸಗಿದ ಬುದ್ದಿವಂತನಂತೆ ನಗೆ ಬೀರಿದರು. ಆದ್ರೆ ಮೇಡಂ ಇದಕ್ಕೆಲ್ಲ ಸೊಪ್ಪು ಹಾಕದೆ , ಕ್ಲಾಸ್ ಮುಗಿದ ನಂತರ ನನ್ನ ರೂಮಿಗೆ ಬನ್ನಿ ಎಂದು ಹೇಳಿ ದಬ್ಬೆಯನ್ನು ಅಲ್ಲೇ ಬಿಟ್ಟು ಕಾಲ್ಕಿತ್ತರು.

ಶ್ರೀ ಸಿದ್ದಪ್ಪನವರು ಎಂದಿನಂತೆಯೇ , ಒಂದೆರಡು ಹಿತವಚನಗಳನ್ನು ಹೇಳ ತೊಡಗಿದರು, ಈ ಪಿರೇಡ್ಗಳ ಮದ್ಯದ ಸಮಯವನ್ನ, ನೆನ್ನೆ ನಾನು ಹೇಳಿದ ಪಾಠವನ್ನ ಮೆಲುಕು ಹಾಕೋಕೆ ಉಪಯೋಗಿಸಿಕೊಳ್ಳಿ , ಹಾಗೆ , ಹೀಗೆ ಎಂದು ತಮ್ಮ ಹಿತ ವಚನ ಕಾರ್ಯಕ್ರಮ ಮುಗಿಸಿದರು. ಇಷ್ಟೆಲ್ಲಾ ಸಮಾರಾಧನೆ ನಡೆಯುವ ಹೊತ್ತಿಗೆ ೪:೧೦ ನಿಮಿಷ ವಾಗಿತ್ತು.
ಎಂದಿನಂತೆ ಪಾಠಕ್ಕೆ  ಹಾರಿದರು ಮೇಸ್ಟ್ರು, ಅಂದು  "ಭೂಗೋಳ" ವಿಷಯದಲ್ಲಿ "ಶ್ರೀಲಂಕ" ಎಂಬ ಪಾಠದ   ಬಗ್ಗೆ , ಸಿದ್ದಪ್ಪನವರು ಚಾಕ್ ಪೀಸ್  ತೆಗೆದುಕೊಂಡು , ಆಗ ತಾನೆ ನಾನು ಸ್ವಚ್ಛ ಗೊಳಿಸಿದ್ದ ಬೋರ್ಡ್ ಮೇಲೆ "ಶ್ರೀಲಂಕ" ಎಂದು ಕೊರೆದರು.
ನಾನು ಮತ್ತು ಸುನಿಲ ಮಾತ್ರ " ಜಯಸೂರ್ಯ , ರಣತುಂಗ, ಅಟಪಟ್ಟು , ಮುತ್ತಯ್ಯ ಮುರಳೀಧರನ್, ಡಿ ಸಿಲ್ವ , ಧರ್ಮಸೇನ " ಎಂದು ಒಂದಷ್ಟು ಹೆಸರುಗಳನ್ನೂ 
ನಮ್ಮ ಹತ್ತಿರ ಕುಳಿತಿದ್ದ ಕ್ರಿಕೆಟ್ ಅಜ್ಞಾನಿಗಳ ಬಳಿ ನಮ್ಮ ಕ್ರಿಕೆಟ್ ಜ್ಞಾನವನ್ನ ಪ್ರದರ್ಶಿಸಿದೆವು. ಸಿದ್ದಪ್ಪನವರು ಅವರ ಪಾಡಿಗೆ ಅವರು ಶ್ರೀಲಂಕಾದ ಇಡೀ  ಬೌಗೋಳಿಕ ವಿಷಯಗಳಾದ ವಿಸ್ತಿರಣ , ವಾತಾವರಣ , ನಕ್ಷೆ , ರಾಜಧಾನಿ , ಜನ ಜೀವನ ಎಂಬಿತ್ಯಾದಿ ವಿಷಯಗಳ ಬಗ್ಗೆ ಬೋರ್ಡ್ ತುಂಬಿಸಿ ಬಿಟ್ಟಿದ್ದರು, ಅದನ್ನು ಹಾಗೆಯೇ ನಮ್ಮ ಕ್ಲಾಸಿನ ಹುಡುಗಿಯರು ಪೆನ್ಸಿಲ್  ಮತ್ತು ರಬ್ಬರ್ ಸಹಾಯದಿಂದ ನೊಣ ಕಾಪಿ ಮಾಡಿದರು.

ಹಿಂದಿನ ಸಾಲಿನಲ್ಲಿ ಕುಂತಿದ್ದ ವೆಂಕಟ ಸ್ವಾಮಿ ಮತ್ತೊಂದು ನಿದ್ದೆಗೆ ಜಾರಿ ಬಹಳ ಹೊತ್ತಾಗಿತ್ತು , ಆಗ ಸಮಯ ೪:೩೦ ನಿಮಿಷ , ಇನ್ನು ಕೇವಲ ೧೦ ನಿಮಿಷಕ್ಕೆ ಕೊನೆಯ ಬೆಲ್ಲು ,ಹಾಗಾಗಿ ನಾವೆಲ್ಲರೂ ನಮ್ಮ ನಮ್ಮ ಅಸ್ತ್ರ ಮತ್ತು ಶಾಸ್ತ್ರಗಳನ್ನು ಬ್ಯಾಗಿಗೆ ತುಂಬಿಕೊಂಡು, ಟುಪ್ ಟುಪ್ ಎಂದು ಬಟನ್  ಏರಿಸಿ ಖೋ-ಖೋ ಆಟದಲ್ಲಿ ಖೋ ಗೆ ಕಾಯುತ್ತಿರುವ ಆಟಗಾರರಂತೆ ಸಜ್ಜಾದೆವು. ಕೆಲವರು ಹುಡುಗಿಯರು ಸಹ ತಮ್ಮ ಟಿಫನ್ ಬಾಕ್ಸ್ , ಸೌಂದರ್ಯ ಸಲಕರಣೆ ಮತ್ತು ಬೈಂಡ್ ಹಾಕಿದ ಪುಸ್ತಕಗಳನ್ನು ಅಚ್ಚು ಕಟ್ಟಾಗಿ ಬ್ಯಾಗಿಗೆ ಇಳಿಸಿದರು . ಆದ್ರೆ ಮುಂದಿನ ಬೆಂಚಿನ ಹುಡುಗರು ಮತ್ತು ಹುಡುಗಿಯರು ಮಾತ್ರ ಇನ್ನು ಸಿದ್ದಪ್ಪನವರ ಪಾಠ ವನ್ನು ಕೇಳುತ್ತಲೇ ಇದ್ದರು.

ಆಗ ಬಂದ್ರು ನೋಡಿ ಪ್ರಕಾಶಣ್ಣ, ಇವರು ನಮ್ಮ ಶಾಲೆಯಲ್ಲಿ ಮಾಡದ ಕೆಳಸಗಳಿರಲಿಲ್ಲ ಒಂಥರಾ ಇವರು ನಮ್ಮ ಶಾಲೆಯ ಮೇಕೆ ಇದ್ದ ಹಾಗೆ , ಅದು ತಿನ್ನದ ಸೊಪ್ಪು ಇಲ್ಲ ಇವರು ಮಾಡದ ಕೆಲಸಗಳು ಇರ್ತಿರಲಿಲ್ಲ , ಹಾಗು ಹೀಗೂ ಎಲ್ಲರು ಇವರ್ನ ಬಕ್ರ ಮಾಡ್ತಾ ಇರೋವ್ರು .
ಇವರು ಕ್ಲಾಸಿಗೆ ಬಂದ್ರೆ ನಮಗೆಲ್ಲ ಒಂದು ಸಂತೋಷ ಮತ್ತು ಅಚ್ಚರಿ , ಅಂದು ಪ್ರಕಾಶಣ್ಣ ತಂದಿದ್ದ ಅಚ್ಚರಿ "ಮೆಮೋ"  , ಆ ಮೆಮೋ ಪುಸ್ತಕವನ್ನು ಸಿದ್ದಪನ ಕೈಗಿಟ್ಟ ಪ್ರಕಾಶಣ್ಣ ಕೊಠಡಿಯ  ಆಚೆ ಹೋಗಿ ನಿಂತರು. ಆಗ ನಾವೆಲ್ಲರೂ ಅದರಲ್ಲಿ ಏನು ಇದೆಯೋ , ಏನು ಕತೆನೋ ಎಂಬಂತೆ " ಶ್ರೀಶಾಂತ್  ಎದುರಾಳಿ ಬ್ಯಾಟ್ಸಮನ್ ನಾ ಗುರಾಯಿಸುವ  ಹಾಗೆ ನಾವು ವಾರೆಗಣ್ಣಲ್ಲಿ ಸಿದ್ದಪ್ಪರ ಕಡೆ ನೋಡಿದೆವು",
"ನಾಳೆ ಗಾಂಧಿ ಜಯಂತಿ , ನೀವೆಲ್ಲರೂ ತಪ್ಪದೆ ಸಮವಸ್ತ್ರ ಧರಿಸಿ ಬೆಳಗ್ಗೆ ೭:೩೦ ಕ್ಕೆ ಸರಿಯಾಗಿ ಶಾಲೆಯ ಆವರಣದಲ್ಲಿ ಇರಬೇಕು , ಯಾರಾದ್ರೂ ತಪ್ಪಿಸಿಕೊಂಡರೆ ಅವರು ತಮ್ಮ ಪೋಷಕರನ್ನು ಶುಕ್ರವಾರ ಶಾಲೆಗೇ ಬರುವ ಮುಂಚೆ ಕರೆತರಬೇಕು" ಎಂದು ಓದಿ ಮುಗಿಸಿ ಸಹಿ ಹಾಕಿದರು .

ಈ ಸನ್ನಿವೇಶ ನಡೆದದ್ದು ಅಕ್ಟೋಬರ್ ೧ , ೧೯೯೭ ರಲ್ಲ್ಲಿ , ಆಗ ನಾನು ೬ನೆ ತರಗತಿಯಲ್ಲಿದ್ದೆ, ತಕ್ಷಣವೇ ೪:೪೦ ನಿಮಿಷದ ಕೊನೆಯ ಬೆಲ್ ಅನ್ನು ಪ್ರಕಾಶಣ್ಣನ ಮಗ ಅನಿಲ , ಧಣ ಧಣ ಎಂದು ಬಾರಿಸಿದ , ನಾವು ಕೂಡ ಜೈಲಿನಿಂದ ತಪ್ಪಿಸಿಕೊಂಡ ಕೈದಿಗಳಂತೆ ಕಾಲ್ಕಿತ್ತು, ಯಥಾ ಪ್ರಕಾರ "ಬೌಂಡರಿ ಕ್ರಿಕೆಟ್ " ಅಡಲು ಸಜ್ಜಾದೆವು .

ಈಗಲೂ ನನಗೆ ಗಾಂಧಿ ಜಯಂತಿಯಂದರೆ , ನನ್ನ ತತ್ಕ್ಷಣದ ಚಿಂತನೆ ಈ ಪ್ರಸಂಗ , ನಮ್ಮ ಶಾಲೆಯಲ್ಲಿ ಅಕ್ಟೋಬರ್ ೨ ರಂದು , ಬೆಳಗ್ಗೆ ೮ ರಿಂದ ೧೦ ರವರೆಗೆ ಮಾಡಿಸುತ್ತಿದ್ದ  , ಶಾಲೆಯ ಮೈದಾನದ ಸ್ವಚ್ಚ್ಹಗೊಳಿಸುವಿಕೆ , ಶಾಲೆಯ ಅಷ್ಟು  ಕೊಠಡಿ , ಬೆಂಚು , ಮೇಜುಗಳನ್ನು ಸ್ವಚ್ಛ ಮಾಡುವುದು , ಮತ್ತು ನಮ್ಮ ಶಾಲೆಯ ಮೈದಾನದಲ್ಲಿ ಬೆಳೆದ ಪಾರ್ತೆನಿಯುಂನಾ  ಬುಡಮಟ್ಟ ಕೀಳುವುದು , ಇವೆ ಮೊದಲಾದುವ ನಮ್ಮ ಕೆಲಸಗಳು.
ಇಷ್ಟು ಕೆಲಸದ ನಂತರ , ಮಹಾತ್ಮ ಗಾಂಧೀ ಅವರ ಬಗ್ಗೆ ಅಂದಿನ ಕಾರ್ಯಕ್ರಮದ ಅಧ್ಯಕ್ಷರು , ನಮ್ಮ ಹೆಡ್ ಮೇಡಂ , ಪ್ರೌಢ ಶಾಲೆಯ ಹೆಡ್ ಮಾಸ್ತರರು , ಒಂದಷ್ಟು ವಿಧ್ಯಾರ್ಥಿಗಳು ಒಳ್ಳೆಯ ವಿಷಯಗಳನ್ನ ಹೇಳುತಿದ್ದರು , ಮತ್ತು ನಾವೆಲ್ಲರೂ ತಪ್ಪದೆ "ರಘುಪತಿ ರಾಘವ ರಾಜಾರಾಮ್ " ಹಾಡನ್ನು ರಾಗವಾಗಿ ಹೇಳಲು ಪ್ರಯತ್ನಿಸುತ್ತಿದ್ದೆವು . ಅಂದು ನಾವು ಪಟ್ಟ ದೈಹಿಕ ಶ್ರಮ ,ನಮ್ಮ ಗುರುಗಳು ಹೇಳಿದ ಒಳ್ಳೆಯ ವಿಷಯಗಳು ಇಂದು ನಮ್ಮ ಜೀವನದಲ್ಲಿ ಅಳವಡಿಕೊಳ್ಳಲು ಪ್ರಯತ್ನಿಸಿದ್ದೇವೆ ಮತ್ತು ಕೆಲವೊಮ್ಮೆ ಪಾಲಿಸಿದ್ದೇವೆ . 
ಆದ್ರೆ ಈಗ , ಗಾಂಧೀ ಜಯಂತಿ ಒಂದು ಕೇವಲ ರಜಾದಿನವಾಗಿದೆ , ಸುಮಾರು  ಶಾಲೆಗಳು ಗಾಂಧೀ ಜಯಂತಿಯನ್ನ  ಆಚರಿಸುವ ಗೋಜಿಗೂ ಹೋಗುವುದಿಲ್ಲ ಅಥವಾ ಅಪ್ಪಿ ತಪ್ಪಿ ಆಚರಿಸಿದರು ಪೋಷಕರು ಅಂದು ತಮ್ಮ ಮಕ್ಕಳನ್ನು ಶಾಲೆಗೇ ಕಳಿಸುವುದಿಲ್ಲ.
ಈಗಿನ ಮಕ್ಕಳಿಗೆ ಗಾಂಧೀಜಿ ಎಂದರೆ ಕೇವಲ ನೋಟಿನ ಮೇಲೆ ಇರೋ ಯಾರೋ  ವ್ಯಕ್ತಿ ಅಷ್ಟೇ  ಅಥವಾ ಅವರ ಜ್ಞಾನಕ್ಕೆ "may be he is first reserve bank governer"  ಎಂದೋ ಕಲ್ಪಿಸಿಕೊಳ್ಳುವ ಸ್ಥಿತಿಗೆ,ನಮ್ಮ ಭವ್ಯ sorry ಭ್ರಷ್ಟ ಭಾರತವನ್ನ ತರಬೇಡಿ ಎಂದು ವಿಜ್ಞಾಪಿಸಿಕೊಳ್ಳುತ್ತ ,
ಇಂತಿ ನಿಮ್ಮ
ಗಂಗರಾಜು .ಕು.ಸಿ .




Thursday, September 29, 2011

ಮತ್ತೆ ನಾಳೆ ಬರುವೆ


ಭಾವ ಬೆಳಕ ಚೆಲ್ಲಿ ಬರುತಿಹನು 
ಮೂಡಣದ ಬಾಗಿಲ ಇಣುಕಿ 
ತನುವ ಸಂತೈಸಿ ನಡೆದಿಹನು
ಪಡುವಣದ ಪರದೆ ಹಿಂದೆ 
ಮತ್ತೆ ನಾಳೆ ಬರುವೆ ಎಂದು 

ನೋಡ ನೋಡುತ ಮರೆಯಾಗಿಹನು 
ಸಜೀವ ಶಕ್ತಿ ಸುರಿದು 
ಜೀವ ಜೀವ ಬೆಸೆದು
ಸಮುದ್ರದಲಿ ಮಿಂದು ,ಸರ್ವರನ್ನು ಮಿಡಿದು 
ಮತ್ತೆ ನಾಳೆ ಬರುವೆ ಎಂದು 

ಆಗಸದಲಿ ಉದಯಿಸಿದ ಚೆಲುವು
ಕಿರಣ ರಾಶಿಗಳು  ಕೇಶ ರೂಪದಿ
ದಿನವೆಲ್ಲ ನಮ್ಮೆಡೆ ನಡೆದು 
ಗೋ ಧೂಳಿ ಸಮಯಕೆ ,ಚಂದ್ರನಿಗೆ ಕರೆಯನಿಟ್ಟು
ಮತ್ತೆ ನಾಳೆ ಬರುವೆ ಎಂದು 

ಉದಯವು ನಮ್ಮ ಜೀವನದ ಪಾಠ
ಅಸ್ಥಮವು ನಮ್ಮ ನೆನಪಿನ ಗುಚ್ಚ್ಹ 
ಹಗಲು ರಾತ್ರಿ ನಡುವೆಯಲ್ಲಿ
ನಡೆಯುತಿಹುದು  ನಮ್ಮ ಜೀವನ
ಮತ್ತೆ ನಾಳೆ ಬಂದೆ ಬರುವ ನಮ್ಮ ರವಿ 

ಇಂತಿ ನಿಮ್ಮ
ಗಂಗ

Wednesday, August 10, 2011

ಪಯಣ ಪಲ್ಲವಿ


ಹುಡುಕುತ  ಪಲ್ಲವಿಯ  ಬೆದಕುತ
ನಡೆದಿದೆ  ನನ್ನ  ಜೀವನ ||ಪ||

ದಿನದಿನವು ಮರು ಪಲ್ಲವಿ  ,
ಪ್ರತಿ  ಪಯಣವು  ನವ  ಗಾನ ಲಹರಿ ,
ಕ್ಷಣಕ್ಷಣಕೂ ಏರಿಳಿತಗಳ  ಧ್ವನಿಯು 
ಭಾವನೆಗಳು  ಬಾಡದ  ಸುಮವು  ........

ಈ  ರಾಗ  ಜೀವನವು  ನೇರ  ಕಾಲುವೆಯು 
ತಾಳ ತಪ್ಪಿದರೆ ,ಹಳೆಯ ಕೆರೆಯ ಸೇರ್ವುದು 
ಬದಲಾಗುವ  ಲೋಕದಲ್ಲಿ , ನನ್ನ  ಪಲ್ಲವಿಯು  ಪಯಣಿಸಿದೆ 
ಎದುರಿಗೆರಗುವ  ಪ್ರತಿ ಹಂತಕು  ಸಿದ್ದವಾಗಿ  ಹೊರಟಿದೆ  ...

ಪ್ರತಿ  ಪಲ್ಲವಿಯು  ನನ್ನ  ಜೀವನಕೆ  ಪಾಠವು 
ಎದೆ  ಗುಂದದೆ  ನಡೆವೆ  ಮರು  ಗಾನವ   ಹಾಡಲು 
ಹೆಜ್ಜೆ ಹೆಜ್ಜೆಗೂ  ಗಾನಾಮೃತವೆ  ದಿಕ್ಸುಚಿಯು  
ತತ್ ಕ್ಷಣಕೆ  ನೆನಪಿನಂಗಳಕೆ  ನೂಕಿತು  ಎನ್ನ  ಮನವು  ,

ಹುಡುಕುತ  ಪಲ್ಲವಿಯ  ಬೆದಕುತ 
ನಡೆದಿದೆ  ನನ್ನ  ಜೀವನ ||ಪ||

--- ಗಂಗ 

Sunday, August 7, 2011

ನನ್ನ ಒಲವಿನ ಹೂವೆ


ನನ್ನ  ಒಲವಿನ  ಹೂವೆ  ,
ಒಲಿದು  ಬಾ  ,ಎನ್ನ  ಮನವ  ತಣಿಸು  ಬಾ  ||ಪ||

ನಿನ್ನ  ಉಸಿರ  ಜೊತೆ  ಬೆರೆವೆ ,
ಹರಸಿ  ಬರುವೆ  , ನಿನ್ನ  ಮನದ  ಸಿರಿ  ಸೇರುವೆ ,
ನಿನ್ನ  ಅಕ್ಕರೆ  ನುಡಿಗಳಿಗೆ  ನನ್ನ  ನಾ  ಮರೆವೆ ,
ವಿಧಿಯೇ   ಎನ್ನ  ಮನದನ್ನೆಯಡೆ ನನ್ನ  ಸೇರಿಸು  ....

ನಿನ್ನ  ಸ್ನೇಹ  ಸ್ಪರ್ಷಕೆ ನನ್ನ  ಮನ  ತಣಿದಿದೆ
ಆ  ಕಣ್ಣ  ನೋಟಕೆ  ನನ್ನ  ನಾ  ಮರೆತಾಗಿದೆ
ಮೌನವೇ  ನನ್ನ  ಮಾತು  ಸೇರಿದೆ ,
ನೋಡ  ನೋಡುತ  ನನ್ನ  ನೀ  ಅವರಿಸಿರುವೆ  .....

ಹುಣ್ಣಿಮೆ  ಚಂದ್ರಮನ ಮುಖದಲ್ಲೂ  ನೀ  ಕಾಣುತಿರುವೆ,
ಮುಂಜಾನೆ  ಅರಳಿದ  ಹೂಗಳಲ್ಲಿ , ನಿನ್ನ  ರೂಪವೇ  ತೋರುತಿದೆ ,
ನಾ  ಕಾಣೋ ಪ್ರತಿ  ಮುಖದಲ್ಲೂ,  ನಿನ್ನ  ಪ್ರತಿ  ರೂಪವೇ  ,
ನಾ  ಕಾಣೋ  ಪ್ರತಿ  ಕನಸುಗಳು  ನಿನ್ನವೇ  .....

ನನ್ನ  ಒಲವಿನ  ಹೂವೆ  ,
ಒಲಿದು  ಬಾ  , ಎನ್ನ  ಮನವ  ತಣಿಸು  ಬಾ  ||ಪ ||

Friday, July 29, 2011

ನಿಧಾನದಿ ವಿಧಾನದಿ (ಹಾರೈಕೆ )


ನಿಧಾನದಿ ವಿಧಾನದಿ   
ನಡೆ ಮುಂದೆ  ನೀ  ನಡೆ  ಮುಂದೆ  ||ಪ ||

ವಿವೇಕ  ,ವಿವರಗಳು
ನಿನ್ನೆಡೆ  ಇರಲಿ
ಭವನ , ಭಾಗ್ಯ ಗಳು
ನಿನ್ನಿಂದೆ ಬಂದು  ಉಳಿವವು  

ಚೇತನ , ಚಹರೆ , ಛಾಯೆ    
ನಿನ್ನ ಪ್ರತಿ  ಹೆಜ್ಜೆಯಲ್ಲೂ  ಇರಲಿ
ಬೇಸರ  , ಬವಣೆ  , ಭಯಗಳು
ನಿನ್ನ  ಹಿಂದೆ  ಅಳಿವುವು  

ಮೌಡ್ಯ ರಹಿತ  ಮುಗ್ಹ್ದಥೆ , ಆಲೋಚನೆ   ರಹಿತ    ಭಾವನೆ    
ಪರರ  ನೋಯಿಸುವ  ಮಾತು   , ನನ್ನಿಷ್ಟ ಎಂಬ  ನುಡಿ , ನಿನ್ನ  ಮನಸ್ಸಿನ  ಹೊರಗಿರಲಿ  
ಸ್ನೇಹ , ಸೌಹಾರ್ದ , ಸಾಮರಸ್ಯ  
ಸ್ವಾರಸ್ಯ   ನಿನ್ನ  ಮನ ಸೇರುವುವು  

ಇಚ್ಛೆ  ಇಂದ  ದುಡಿ   , ಸ್ವೇಚ್ಚೆ  ಇಂದ  ಬದುಕು
ದುಡುಕು   , ದುಃಖ   , ದುಮ್ಮಾನ , ದುರಹಂಕಾರ ಇತರ  ದುರ್ನಡೆಗಳು  
ನಿನ್ನ  ನೆನಪಿನ   ಸಾಗರದಲ್ಲಿ    ಅಲೆಯಾಗದಿರಲಿ  
ಬದುಕು  , ಬದುಕಲು ಬಿಡು  


ನಿಧಾನದಿ ವಿಧಾನದಿ   
ನಡೆ ಮುಂದೆ  ನೀ  ನಡೆ  ಮುಂದೆ  ||ಪ ||

ಎಂದು ಹಾರೈಸುವ 
ಗಂಗ


Tuesday, July 26, 2011

ನನ್ನ ಅಂದಾವ ,ನಾ ತೋರೋ ಚೆಂದಾವ


ನೋಡ್ಕೊಂಡು  ಹೋಗು  ನೋಡ್ಕೊಂಡು  ಹೋಗು
ನನ್ನ  ಅಂದಾವ  ,ನಾ  ತೋರೋ  ಚೆಂದಾವ  ||ಪ ||

ಊರಿಂದ  ಊರಿಗೆ  ಅಂದವ  ಸಾರುವ  ಸುಂದರಿ  ನಾನು  ,
ಕೊರೆವ  ಚಳಿಯಲ್ಲೂ  ಬಿಸಿ  ಮುಟ್ಟಿಸುವ  ಬಂಗಾರಿ  ನಾನು  ,
ಹೋದಲ್ಲೆಲ್ಲ  ಅಭಿಮಾನಿಗಳ  ಸಾಗರ   ಸೇರಿಸುವ  ಸೃಷ್ಟಿ  ನಾನು ,
ಬಯಸದೆ  ಬಂದಾಗ  , ಬೇಡವೆನ್ನುವೆ  ಏತಕೆ   ||

ಮದನನೊಂದಿಗೆ  ಮೋಹಿಸಲು  ಹಾತೊರೆವೇನು ,
ಮುಗುಳ್ನಗೆಗೆ  ಮೌನಿಯಾಗಿ  ಮಡಿಲ  ಸೇರುವೆನು ,
ನಿನ್ನ  ಪ್ರೀತಿಯೇ  ನನಗೆ  ದಕ್ಷಿಣೆ ,
ನಾ  ಬಯಸಿ  ಬಂದಾಗ  , ನೀ  ಏಕೆ  ದೂರ  ನಡೆವೆ  ||

ವಯಸಿಗೆ  ಮಿತಿ  ಬೇಡ  ,ಬಯಕೆಗೆ  ಮೋಸ  ಬೇಡ
ಹರಸಿ  ಅರಸಿ  ಬಂದಾಗ  ಒಲ್ಲೆ ಎನ್ನಬೇಡ
ನಿನ್ನ  ಅಪ್ಪುಗೆಗೆ  ಅಡಿಯಾಳಗುವ  ಆಸೆಗೆ , ನೀರರೇಯ ಬೇಡ
ವಿರಹದಿ  ಬೆಂದ  ಪ್ರೀತಿಗೆ  ನಿನ್ನ  ಅಪ್ಪುಗೆಯ  ಸಾಂತ್ವನ  ನೀಡು  ||

ನೋಡ್ಕೊಂಡು  ಹೋಗು  ನೊಂದ್ಕೊಂದು  ಹೋಗು
ನನ್ನ ಅಂದಾವ  ,ನಾ  ತೋರೋ  ಚೆಂದಾವ  ||ಪ ||

ಇಂತಿ ನಿಮ್ಮ ,
ಗಂಗ

Saturday, July 23, 2011

ನಿನ್ನ ರೂಪದಿ ನಿನ್ನ ಸ್ನೇಹದಿ


ನಿನ್ನ  ರೂಪದಿ  ನಿನ್ನ  ಸ್ನೇಹದಿ 
ಕುಣಿಯುತಿದೆ  ನನ್ನ  ಮನವು  ||ಪ ||

ಕೇಳಲು  ನಿನ್ನ  ದನಿಯು
ಮೂಡಿತು  ನನ್ನ  ಮನವು
ನಿನ್ನ  ದನಿಯೇ  ನನ್ನ  ಪ್ರಾಣ  ಧನವು
ನಿನ್ನ  ರೂಪದಿ  ನಿನ್ನ  ಸ್ನೇಹದಿ  ,ಕುಣಿಯುತಿದೆ  ನನ್ನ  ಮನವು  ..

ನನ್ನ  ಮನದಿ  ಮೂಡಿದೆ  ನಿನ್ನ  ರೂಪ
ದಿನವು ತಣಿಸಿದೆ  ಪ್ರೇಮ  ದಾಹ
ನಿನ್ನ  ರೂಪವೇ  ನನ್ನ  ಬಾಳ  ಬೆಳಕು
ನಿನ್ನ  ರೂಪದಿ  ನಿನ್ನ  ಸ್ನೇಹದಿ  ,ಕುಣಿಯುತಿದೆ  ನನ್ನ  ಮನವು  ..

ನಿರಂತರ  ನಿನ್ನೆಡೆಗೆ  ನನ್ನ  ಪ್ರೀತಿ
ನಿತ್ಯ  ನೂತನ  ನಿನ್ನೆಡೆಗೆ  ನನ್ನ  ಪ್ರೇಮ
ನಿನ್ನ  ಪ್ರೇಮಕೆ  ನನ್ನ  ಜೀವನ  ಪಥವು
ನಿನ್ನ  ರೂಪದಿ  ನಿನ್ನ  ಸ್ನೇಹದಿ  ,ಕುಣಿಯುತಿದೆ  ನನ್ನ  ಮನವು  ..

ಈ  ಆಸೆಗಳ  ಲೋಕದಲ್ಲಿ
ಕಣ್ಣಿಗೆ  ಕಾಣೋದೆಲ್ಲಾ ಬಯಸುವ ಈ  ಜಗದಲ್ಲಿ .
ಭಾವೆನಗಳಿಗೆ ಬೆಲೆ  ಇಲ್ಲದ  ಕಾಲದಲ್ಲಿ  ,
ನನ್ನ  ಯೋಚನೆಗಳು  ನಿನ್ನ  ಮಡಿಲಲ್ಲಿ  , ನಿನ್ನ  ಒಲವಲ್ಲಿ  ..

ನಿನ್ನ  ರೂಪದಿ  ನಿನ್ನ  ಸ್ನೇಹದಿ
ಕುಣಿಯುತಿದೆ  ನನ್ನ  ಮನವು  ||ಪ ||

Wednesday, June 29, 2011


ಮರೆಯಾಗಿವೆ   ನನ್ನಲ್ಲಿ
ಕನಸುಗಳು  ಮರೆಯಾಗಿವೆ  , ನನಸುಗಳು  ನೆಪವಾಗಿವೆ  ||ಪ ||

ಉಹಿಸದ  ರೀತಿಗೆ
ನನ್ನ  ಜೀವನ  ಸಾಕ್ಷಿಯಾಗಿದೆ
ಉರುಳಿದ  ಭಾವನೆಗಳು
ನನ್ನ  ಮನವ   ಕದಡಿವೆ ||

ನೂರಾರು  ಆಸೆಗಳು
ದುಗುಡಗತ್ತಿವೆ  ,
ಅರಿತು  ಬಾಳಬೇಕೆಂಬ
ಹಟವು  ಮಂಕಾಗಿದೆ  ||

ಉಳಿದಷ್ಟು  ದಿನಗಳು
ಉಳ್ಳವರಿಗೆಂಬ ತೀರ್ಪು  ಮನಸು  ಮುಟ್ಟಿದೆ  ,
ಮೌನವೆಂಬ  ಮಾತಿಗೆ
ಮನವು  ನಿಲುಕಿದೆ  ||

ನಿಲ್ಲಬೇಕೆಂಬ ಛಲವು  ಹೆದರಿದೆ  ,
ಓಡಬೇಕೆಂಬ ಬಯಕೆ  ಭಯದಿ  ಬೆಂದಿದೆ ,
ಇರುಳಿಗೂ ಹಗಲಿಗೂ  ಕಣ್ಣು  ಕದಡಿದೆ
ವಯಸ್ಸಿಗೂ  ವಿವೇಕಕ್ಕೆ  ಭಾವನೆ  ಮಡಿದಿವೆ ||

ನನ್ನ  ಜೀವನ   ಬೆಳಗಿಸಲು  ಬರುವೆಯ
ನನ್ನ  ಸ್ವರ ರಹಿತ ಭಾವನೆಗಳ  ಬದುಕಿಸೆಯ
ನಿನ್ನ  ರೂಪವೇ  ನನಗೆ  ವೃದ್ಧಿ
ನಿನ್ನ  ಆಸರೆ  ನನ್ನ  ಜೀವ  ಶುದ್ಧಿ

ಮರೆಯಾದ  ಜೀವನಕ್ಕೆ
ಜೀವಿಸುವ  ಅವಕಾಶ  ಕೊಡೆಯಾ ......

ಇಂತಿ ,
ಗಂಗ


Monday, June 20, 2011

ಆಶಯ ಶುಭಾಶಯ


ಆಶಯ  ಶುಭಾಶಯ ,
ಶುಭದ  ದಿನಕೆ  ಶುಭಾಶಯ  ||ಪ ||

ವಸಂತ   ಕಳೆದು
ವಯಸ್ಸನು  ತಳೆದು
ಒಲವಿಗೂ  , ಚೆಲುವಿಗು ಅರ್ಥವ  ಹುಡುಕುವ  ಬಾಳ್ವೆಗೆ,
ಆಶಯ  ಶುಭಾಶಯ ,

ಯುಗ  ಯುಗಗಳು  ಸಾಗಿ
ದೇಹವು  ಹೊಂದಾಣಿಕೆಗೆ  ತಾಗಿ
ಭಾವನೆ , ಯೋಚನೆ , ಪ್ರೌಢಿಮೆ  ಬೆಳಕಿಗೆ  ಬಾಗಿ,
ಆಶಯ  ಶುಭಾಶಯ ,

ಲೆಕ್ಕಚಾರದ   ತೊಡಕು  ಬೇಡ
ಬಳಲಿದೆ  ಎಂಬ  ಭಾವನೆ  ಬೇಡ
ಮುಗುಳ್ನಗೆ  , ಹರುಷಕ್ಕೆ ತೊಡಕು  ಬೇಡ
ಬೇಕು  - ಬೇಡಗಳು  , ಈಡೇರಿಸಿಕೊಳ್ಳುವ  ಛಲವು  ನಿನಗಿರಲಿ ,
ಆಶಯ  ಶುಭಾಶಯ  ,

ನಿಜವಾದ  ವ್ಯಕ್ತಿಯ  ಅನಾವರಣ  ನಿನದಾಗಲಿ
ಆಚಾರ  ವಿಚಾರಗಳ  ಸೊಬಗು  ಮರೆಯಾಗದಿರಲಿ
ಪ್ರೀತಿ , ಪ್ರೇಮ  , ಉತ್ಸಾಹ  ಇನ್ನಷ್ಟು ಉತ್ಕ್ರುಷ್ಟವಾಗಲಿ
ನೆನಪಗಳು  ಸದಾ  ನಿನಗೆ  ಪ್ರೇರಣೆಯಾಗಿರಲಿ  ,

ಎಂದು  ಹಾರೈಸುವ  ಸ್ನೇಹದ  ಕಡಲು .....

ಆಶಯ  ಶುಭಾಶಯ ,
ಶುಭದ  ದಿನಕೆ  ಶುಭಾಶಯ  ||ಪ ||

ನನ್ನ ಸ್ನೇಹಿತನ ಜನ್ಮ ದಿನಕ್ಕೆ ನನ್ನ ಉಡುಗೊರೆ
ಇಂತಿ ನಿಮ್ಮ,
ಗಂಗ

Sunday, May 8, 2011

ಒಂದು ಅಸ್ಪಷ್ಟ ಲೇಖನ - ಭಾಗ ೧

ಏನೋ  ಮಾಡಲು ಹೋಗಿ ,
ಏನು ಮಾಡಿದೆ ನೀನು ..... ಈ ಸಾಲುಗಳು ನಮ್ಮ ದಿನ ನಿತ್ಯದ ಕೈಂಕರ್ಯ ಗಳನ್ನು  ನೆರವೇರಿಸುವಾಗ , ನಮ್ಮ ಮನಸಿನಲ್ಲಿರುವ ಪಕ್ಷಿ ಹೇಳಿರುತ್ತದೆ ಆಲ್ವಾ ? , ಆ ಸ್ಥಿತಿ ಹೇಗೆ ಒಂದು ಪರಿಸ್ಥಿತಿಯಾಯಿತು ಎಂದು ನಾವು ಊಹಿಸಲು ಸಾಧ್ಯವಿಲ್ಲದಷ್ಟು , ಹಳಸಿಹೋಗಿದ್ದಾಗ , ಈ ಎರಡು ಸಾಲುಗಳು ಮನದ ಪಟಲದಲ್ಲಿ ರಾಗವಾಗುತ್ತ ದೂರವಾಗುವುದು ಆಲ್ವಾ ?

   ಚಿತ್ರ ವಿಚಿತ್ರಗಳ ತಾಣವಾಗಿರುವ ನಮ್ಮ ಮನ , ಪ್ರಾಣ ಎಂಬ ಮಾಯಾ ಜಿಂಕೆಯನು ಉಳಿಸಲು ,ರಕ್ಷಿಸಲು , ಬೆಳೆಸಲು , ಇಲ್ಲದ - ಸಲ್ಲದ - ಒಲ್ಲದ ಎಲ್ಲ ಕೆಲಸಗಳನ್ನು ಮಾಡಿಸುವುದು . ಕೊನೆಗೆ ನೊಂದು-ಬೆಂದು , ನಾವು ನಮ್ಮ ತಾಣವನ್ನು ಕಳೆದುಕೊಂಡಿರುವ ಮಾದರಿಗಳೆಸ್ತೋ .

    ಗಳಿಸಲು - ಗೆಲ್ಲಲು - ಲೋಭದಿ - ಮೋಹದಿ ,ನಮ್ಮ ಮನ ತನ್ನ ಮಡದಿಯಾದ ದೇಹದಿಂದ ದುಷ್ಟ- ಅಸ್ಪಷ್ಟ ಕಾಯಕ ಗಳನ್ನೂ ಮಾಡಿಸಲು ಹಿಂಜರೆಯುವುದಿಲ್ಲ .  ಮಾದರಿಯಾಗಬೇಕದವನೇ/ಳೇ ಮಾನ - ಮರ್ಯಾದೆ ಕಳೆದುಕೊಂಡು , ಮೌನದಿ ಮರೆಯಾಗಬೇಕಾಗುವ ಪ್ರಸಂಗಗಳನ್ನು ನಾವು ಕಂಡಿದ್ದೇವೆ , ನೋಡಿದ್ದೇವೆ ಅಥವಾ ಮೀರಿ ಅನುಭವಿಸಿರುತ್ತೇವೆ .
   
    ಅಲ್ಲಿಗೆ ನಮ್ಮ ಮನವೇ ,ನಮ್ಮ ನಾಶಕ್ಕೆ ಕಾರಣವೇ ?
ನಮ್ಮ ಕರ್ಮದಿ, ನಮ್ಮ ಕಾಯಕದಿ , ನಮ್ಮ ಉಳಿವು -ಗೆಲುವು -ಒಲವು , ಅಡಗಿದೆಯೇ ?
ಅರಿಷಡ್ವರ್ಗಗಳು , ನಮ್ಮನ್ನು ಮಣ್ಣ ಸೇರಿಸಲು ಹೊಂಚು ಹಾಕುತ್ತಿರುತ್ತವೆಯೇ ?
ಈ ಮೇಲಿನ ತ್ರಿಪದಿಗೆ ನನ್ನಲ್ಲಿ ಉತ್ತರವಿದೆಯೇ ? , ಎಂದು ಒಮ್ಮೆ ಯೋಚಿಸಿದಾಗ ................................
ಉದರದ ಮೇಲ್ಭಾಗದಲ್ಲಿ ಒಂದು ಸಣ್ಣ ಆತಂಕದ ಛಾಯೆ .  ಅಸೂಯೆ ,ಕಿಚ್ಚು ಎಂಬ ಎಲ್ಲ ಹೊಲಸುಗಳು , ನಮ್ಮಲ್ಲಿ ಭಯ ಎಂಬ ಭೂತವನ್ನು ಅರಸನನ್ನಾಗಿಸುತ್ತವೆ.

ಏನಿದು ಭಯ , ಎಲ್ಲಿಯದು ಭಯ , ಹೇಗಿರುವುದು ಈ ಭಯ , ಎಂದು ಯಾರು ಪ್ರಶ್ನೆ ಕೇಳಿಕೊಳ್ಳಲು ಸಾಧ್ಯವಿಲ್ಲ , ಕಾರಣ
ಎಲ್ಲರಿಗು ಉತ್ತರ ತಿಳಿದೇ ಇರುತ್ತದೆ .

ಭವನವಿಲ್ಲದವ ಭಯವ ಗೆದ್ದಾನು ,
ಭಯವಿಲ್ಲದವ ಭೂಮಿಯ ಗೆದ್ದಾನು ...

ಭವನ ಎಂದರೆ ಆಸೆ , ಲೋಭ , ಮೋಹ ಎಲ್ಲವು ಅಡಗಿರುವ ಒಂದು ಮಾಯಾಲೋಕ .

ಬಹಳಸ್ಟು ಸ್ನೇಹಿತರು (ನನ್ನನು ಸೇರಿಸಿಕೊಂಡು ), ಭಯದಿ ಭರವಸೆಯ ಕಳೆದುಕೊಂಡು , ದುಷ್ಟ  ಕಾರ್ಯಗಳಲ್ಲಿ ಕೈ ಜೋಡಿಸಿಕೊಂಡು , ಆತಂಕದಿ - ಅವಸರದಿ ಕಾರ್ಯಗಳ ಮಾಡಿಕೊಂಡು ನಾಟಕೀಯ ಜೀವನವನ್ನು ನಡೆಸುತ್ತಿದ್ದಾರೆ .

ಅಲ್ಲಿಗೆ ಮನುಷ್ಯನಿಗೆ ಭಯದ ಅವಶ್ಯಕತೆ ಇಲ್ಲವೇ ?
ಅಂದರೆ ಭಯವೇ ಬೇಕಾಗಿಲ್ಲವೇ ?
ಈ ಕ್ಷಣಕ್ಕೆ ನನ್ನ ಉತ್ತರ ಕೂಡ ಭಯದಿಂದಲೇ ಹೇಳಬೇಕಾಗಿದೆ .

ಭಯ ಬೇಕು ,ಭಯ ಬೇಕು
ಬೆಳಕನ್ನು ಸೇರಲು , ಭಯದ ನೆರಳು ಬೇಕು .
ಭರವಸೆಯ ನೀರಲು , ಭಯದ ಬಯಕೆ ಬೇಕು .
ಬದಲಾಗಲು , ಭಯದ ಜೊತೆ ಬೇಕು .
ಭಯ ಬೇಕು ,ಭಯ ಬೇಕು .
ಹುಟ್ಟುತ್ತಲೇ ಎಲ್ಲರು ಬುದ್ದಿವಂತರಾಗಿದ್ದರೆ , ಸ್ವತಂತ್ರ ವಾಗಿ ಜೀವಿಸಲು ಸಾಧ್ಯವಿದ್ದಿದ್ದರೆ , ನಮ್ಮ ಸುತ್ತಮುತ್ತಲಿನ ಪರಿಸರವೂ ಸತ್ಯಾ-ನಿಷ್ಟೆ ಇಂದ ಕೂಡಿದ್ದರೆ , ಭಯವೇತಕೆ ಭೂಮಿಯ ಮೇಲೆ ಜೀವಿಸಲು ಎಂದು ಹೇಳಬಹುದಿತ್ತು .  ಆದರೆ ಇಲ್ಲಿ ಇರುವುದು , ಮೂಢರು ತುಂಬಿದ ಸಮಾಜ , ಮೌದ್ಯಥೆಯ ಮಡಿಲು ನಮ್ಮ ಸುತ್ತ ಮುತ್ತಣಗಳು. ಅವಸರ - ಐಶ್ವರ್ಯಕ್ಕೆ , ಆರ್ಯರು -ಅರಸರು ದುರುಳರಾಗುವ ಕಾಲವಿರುವಾಗ , ಭಯ ಬೇಕಲ್ಲವೇ ?

ಅದು ಎಂಥಹ ಭಯ , ಭಯ ಹೇಗಿರಬೇಕು ?

ಆಗ ತಾನೇ ತಾಯಿಯ ಗರ್ಭ ಕೋಶದಿಂದ , ತಾಯಿಯ ಮಡಿಲು ಸೇರಿದ ಮಗು , ಕಿರುಚುತ್ತದೆ . ಅದು ಕೂಡ ಒಂದು ಲೋಕದಿಂದ , ಇನ್ನೊಂದು ಹೊಸ ಮರ್ಮ ಲೋಕಕ್ಕೆ ಬಂದೆನೆಂಬ ಭಯದಿಂದ , ಈ ಭಯ ನಮಗೆ ಬೇಕು , ಈ ಭಯದಲ್ಲಿ ಒಂದು ಸಣ್ಣ ಅರಿವಿದೆ ಮತ್ತು ಮುಗ್ಧತೆಯ ಮೂಲರೂಪವಿದೆ .

ಭಯ ಬಹುರೂಪಿ .

ಬೆಳಕಿಗೆ ಬಂದ ಮಗು , ಭಯವೇ ಇಲ್ಲದ ಹಾಗೆ ಬೆಳಯಲು-ಬೆಳೆಸಲು ಸಾಧ್ಯವಿಲ್ಲ .
ಮಗುವಾದ್ದರಿಂದ ಒಂದು ಆರೋಗ್ಯಕರ ಭಯವೆಮ ವಾತವರಣದಲ್ಲಿ ಬೆಳೆಯಬೇಕಾಗಿರುತ್ತದೆ , ಆದರೆ ಈಗ , ಆರೋಗ್ಯಕರ ಮಾಯವಾಗಿ , ಮಕ್ಕಳು ಮೂಧರಾಗಿ ಬೆಳೆಯುತ್ತಿದ್ದಾರೆ . ನಮ್ಮ ನಾಳೆಯ ಪ್ರಜೆಗಳು ಒಂದು ಸಣ್ಣ ಗತಿಯನ್ನು ಎದುರಿಸಲು ಕಣ್ಣಲ್ಲಿ ಕೊಡಿ ಹರಿಸುತ್ತಿದ್ದಾರೆ.

ಈ ಭಯ ಬೇಡ ನಮಗೆ .
ಮುಂದುವರೆಯುವುದು ....
ನಿಮ್ಮ ಅಭಿಪ್ರಾಯ(ಸದಾಭಿಪ್ರಾಯ  ಅಥವಾ ದುರಾಭಿಪ್ರಾಯ :)ಗಳನ್ನು  ತಿಳಿಸಿ .
 
ಇಂತಿ ನಿಮ್ಮ 
ಗಂಗ




Thursday, April 28, 2011

ಅಭಿಮಾನಿಯ ಮನದಲ್ಲಿ ...

  ಏನೋ  ಮನಸ್ಸಿಗೆ ನಿರಾಳ, 
ಬೇಸರದಲ್ಲೂ ಸಂತಸದ ಅವಸರ ಬಂದಿತು ಇವರ ನೆನೆದರೆ ,
ಉತ್ಸಾಹದ ಸೆಲೆ ಆ ರೂಪ ,
ನಮ್ಮೆಲರ ಕಥಾನಾಯಕ , 
ಅವರು ಏನೇ ಹೇಳಲಿ , ಅದು ನಮಗೆ ಸಾರ್ವಕಾಲಿಕ ಸತ್ಯ ,
ಅವರೇ ನಮ್ಮ ಪ್ರೀತಿಯ ರಸಿಕರ ರಾಜ ಡಾ  || ರಾಜ್ ಕುಮಾರ್ .

ಸಿಂಗನಲ್ಲುರ್ ಮುತ್ತುರಾಜ್  ಮುಂದೆ ಪ್ರತಿ ಕಲಾ ರಸಿಕನ ,ಮನದ ಕಲಾ ರಾಜನಾಗುತ್ತರೆಂದು ಯಾರು ಭಾವಿಸಿರಲಿಲ್ಲ , ಆದರೆ ಪ್ರಸ್ತುತ ನಮ್ಮ ಭಾಗ್ಯ , ಅವರು ಈಗ ನಟ ಸಾರ್ವಭೌಮ .

ರಾಜಣ್ಣ ನಮಗೆಲ್ಲರಿಗೂ ದ್ರೋಣ ಚಾರ್ಯ ರಂತೆ , ಅವರ ಚಿತ್ರಗಳೇ , ಅವರ ಸಾರ್ಥಕ  ಜೀವನವೆ  . ಅವರ ಹಾವ ಭಾವವೇ , ಅವರ ಮಾತು  ಮತ್ತು  ಅವರ ಕನ್ನಡ ಪ್ರೇಮವೇ ನಮಗೆ ಪರಿಮಿತಿ ಇಲ್ಲದ ಪಾಠ ಗಳು .

ಅವರ ಈ ಚಿತ್ರ ಸರಿ ಇಲ್ಲ ,  ಇದು ಸುಮಾರಾಗಿದೆ , ಅಂತ ಹೇಳಲು ಚಿತ್ರಗಳನ್ನು ನೋಡಿರುವ ಯಾವ ಅಭಿಮಾನಿಯೂ ಒಪ್ಪಲ್ಲ . ಇಂದಿಗೂ ಆ ಎಲ್ಲ ಚಿತ್ರಗಳೇ ನಮ್ಮ ಟಿವಿ ಪರದೆಯ ಹೂ ಗಳು .

ಒಮ್ಮೆ ನನಗೆ ಬೇಜಾರಾಗುತ್ತದೆ , ದುಖ ವಾಗುತ್ತದೆ , ಕಾರಣ ನಾನು ಸ್ವತಂತ್ರ ನಾಗಿ ಸಿನೆಮ ನೋಡೋಹೊತ್ತಿಗೆ  ರಾಜ್ ರ ಯಾವ ಹೊಸ ಚಿತ್ರವೂ ಬಿದುಗಡೆಯಗಲಿಲ್ಲವಲ್ಲ ಎಂಬ ಕೊರಗು . ಅವರ ಕೊನೆ ಚಿತ್ರ ಶಬ್ದವೇಧಿ ಬಿಡುಗಡೆಯಾದಾಗ ನಾನು ೭ ನೆ ತರಗತಿಯಲ್ಲಿ ಓದುತಿದ್ದೆ , ಆಗ first day  first  show ಅಂದ್ರೆ ಮನೆಯಲ್ಲಿ ಬೈಗುಳದ ಮಂತ್ರಾಕ್ಷತೆ ಬೀಳುತ್ತಿದ್ದವು .
ಆದರೆ ನಾನು ಪದವಿ ಓದುವ ಸಂದರ್ಭದಲ್ಲಿ "ಸತ್ಯ ಹರಿಶ್ಚಂದ್ರ " ಚಿತ್ರವನ್ನು ನವರಂಗ್ ಚಿತ್ರಮಂದಿರದವರು "ಕಲರ್ ಸ್ಕೋಪೆ" ಗೊಳಿಸಿ ಮರು ಬಿಡುಗಡೆ ಮಾಡಿದರು . ಆಗ ನನ್ನ ಕೊರಗು , ಕೋರಿಕೆ ಯಾದ , ಅಣ್ಣನ ಚಿತ್ರವನ್ನು   first day  first  show  ನೋಡಿ ಆನಂದಿಸಿದೆ . ಆ ದಿನ ನನ್ನ ಸಂತೋಷಕ್ಕೆ ಪಾರವೇ ಇಲ್ಲ .

ನಾನು ರಾಜ್ ರ ಎಲ್ಲ ಚಿತ್ರ ಗಳ ಬಗ್ಗೆ ಬರೆಯಬಹುದು , ಆದರೆ ಈ blogspot ನವರ ಬಳಿ ಅಸ್ತು ಮಾಹಿತಿ ಇಟ್ಟುಕೊಳ್ಳಲು , ಇವರ ಬಳಿ ಸ್ಥಳದ  ಅಭಾವ ಇದೆ :) , ಹಾಗಾಗಿ ಅವರ ಮೂರ ಚಿತ್ರಗಳ ಬಗ್ಗೆ , ನನ್ನ ಅಭಿಮಾನದ  ದೃಷ್ಟಿ ಇಂದ ಬರೆಯುತ್ತೇನೆ .

ಚಿತ್ರ ೧ )  ರಾಜ್ ರ ಈ ಚಿತ್ರ ಎಂದರೆ ನನಗೆ ಬಹಳ ಇಷ್ಟ , ನನ್ನ ಬ್ಯಾಗಿನಲ್ಲಿ ಈ ಚಿತ್ರದ ಸಿಡಿ ಸದಾ ಇರುತ್ತದೆ . ಈ ಚಿತ್ರದಲ್ಲಿ ರಾಜ್ ರವರ ಪ್ರಸ್ತಾಪಿಸದ ವಿಷಯವಿಲ್ಲ .
ಚಿತ್ರ "ಕಾಮನಬಿಲ್ಲು" ,
ಸ್ನೇಹಿತರೆ , ನೀವು ಯಾರಾದರು ಈ ಚಿತ್ರ ನೋಡಿರದೆ ಇದ್ದರೆ ದಯವಿಟ್ಟು ಇಂದೇ ಸಿಡಿ ಖರಿದಿಸಿ ನೋಡಿ. ಚಿತ್ರ ನೋಡಿದ ಮೇಲೆ ,ನಿಮ್ಮಲ್ಲಿ ಒಂದು ಸುಂದರ ಸ್ವಪ್ನ ಕಂಡಂತಹ ಭಾವನೆ ಮೂಡುತ್ತದೆ .
ಚಿತ್ರದಲ್ಲಿ ರಾಜಣ್ಣನ ಅಭಿನಯ , ಅದು ಪ್ರತಿಯೊಬ್ಬ ಮನುಷ್ಯನ ಸಹಜ  ಸ್ಥಿತಿ ಮತ್ತು ಸ್ವಾಭಾವಿಕ .
ಈ ಚಿತ್ರದಲ್ಲಿ "ಸ್ನೇಹದ " ಬಗ್ಗೆ , "ಯೋಗ ಬ್ಯಾಸದ" ಬಗ್ಗೆ , "ನೇಗಿಲ ಯೋಗಿಯ" ಬಗ್ಗೆ , "ಪ್ರೀತಿಯ " ಬಗ್ಗೆ ,
"ತ್ಯಾಗದ " ಬಗ್ಗೆ , "ಪರೋಪಕಾರದ " ಬಗ್ಗೆ , "ಪ್ರತಿಭಾ ಪಲಯಾನದ "   ಬಗ್ಗೆ , ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಮನ ಮಿಡಿಯುವ ಚಿತ್ರ ಕಥೆ ಇಂದ , ಸಿನೆಮ ನೋಡುಗನ ಮನಕ್ಕೆ  ಓರೆ ಹಚ್ಚಲಾಗಿದೆ .  
ಚಿತ್ರದಲ್ಲಿ ರಾಜಣ್ಣನ ಪಾತ್ರವಾದ "ಸೂರಿ " , ನಮ್ಮೆಲರ ಜೀವನದಲ್ಲಿ ಹೊಸ ಚೇತನ ವಾಗಿ ಉಗಮವಾಗುವನೆಂದರೆ  ತಪ್ಪಾಗಲಾರದು . 
ರಾಷ್ಟ್ರ ಕವಿ ಕುವೆಂಪು ರವರ "ನೇಗಿಲ ಯೋಗಿ " ಹಾಡು ಮನ ಮುಟ್ಟುತ್ತದೆ , ಮತ್ತು ಅರ್ಥ ಪೂರ್ಣ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ.

ಚಿತ್ರ ೨ ) ಇದು ರಾಜಣ್ಣ ನಮಗೆಲ್ಲರಿಗೂ ಕೊಟ್ಟಿರುವ ಒಂದು ಉಡುಗೊರೆ ,ಚಿತ್ರದ ಶೀರ್ಷಿಕೆ "ಎರಡು ಕನಸು " .
ಇದು ತ್ರಿವೇಣಿ ಯವರ  ಕಾದಂಬರಿ ಆಧಾರಿತ  ಚಿತ್ರ , ಮೂಲ ಕಥೆಯನ್ನ ಚಿತ್ರದಲ್ಲಿ ಕೊಂಚ ಮಾರ್ಪಾಟು ಮಾಡಲಾಗಿದೆ , ಕಾದಂಬರಿಯಲ್ಲಿ ನಾಯಕನ ಜೀವನದಲ್ಲಿ ,ಎರಡು ಕನಸುಗಳಾಗಿಯೇ ಉಳಿಯುತ್ತವೆ , ಆದ್ರೆ ಚಿತ್ರದಲ್ಲಿ , happy ending ನೀಡಲಾಗಿದೆ , ಆದರು ಚಿತ್ರದ ಹೆಸರು ಸೂಕ್ತ ವಾಗಿಯೇ ಇದೆ.
ರಾಜಣ್ಣ ನ ಅಭಿನಯವನ್ನ  , ಈಗಿನ ಕಾಲದ ಎಲ್ಲ ಭಗ್ನ ಪ್ರೇಮಿಗಳು ನೋಡಲೇ ಬೇಕು . ತೆರೆಯ ಮೇಲೆ ರಾಜಣ್ಣ ನಮ್ಮೆಲರ ಮನ ತುಂಬುತ್ತಾರೆ . ಒಂದು ಉತ್ತಮ ಚಿತ್ರ ನೋಡಿದೆವೆಂಬ ಹಿರಿಮೆ ನಮ್ಮದು .
ನಾನು ಈ ಚಿತ್ರವನ್ನು ಪ್ರಥಮ ಬಾರಿಗೆ ನೋಡಿದ್ದು " ಡಿಡಿ ೧" ರ ಕೃಪಯಿಂದ , ಅದು ಆಗ ಪ್ರಸಾರವಾಗಿದ್ದು ಮಧ್ಯ ರಾತ್ರಿ ೨ ರಿಂದ ೫ ಗಂಟೆ ಯವರೆಗೆ ಎಂದು ನನ್ನ  ಸ್ಮೃತಿ ಈ ಕ್ಷಣಕ್ಕೆ ಹೇಳುತ್ತಿದೆ . ಏನಪ್ಪಾ ಈ ಹೊತ್ತಿನಲ್ಲಿ ಈ ಬಡ್ಡಿ ಮಗ , ಈ ಚಿತ್ರ ಯಾಕೆ ನೋಡಿದ ಅಂತಿರ , ಕಾರಣ ಇಸ್ಟೇ . ಆಗ ಮತ ಎಣಿಕೆ ಕಾರ್ಯ ನಡೀತಾ ಇತ್ತು , ಹಾಗಾಗಿ ಜನರೆಲ್ಲಾ ತಮ್ಮ ತಮ್ಮ ಕ್ಷೇತ್ರದ ಶಾಸಕರ ಬಗ್ಗೆ ತಿಳಿಯಲಿ ಎಂಬ ದೂರದೃಸ್ತಿ ಇಂದ  ಚಿತ್ರ ಪ್ರಸಾರ  ಮಾಡಿದ್ದರು , ಈ ಸನ್ನಿವೇಷ ನಡೆದದ್ದು ೧೯೯೬ ರಲ್ಲಿ :) 

ಚಿತ್ರ ೩) ರಾಜಣ್ಣ ರ ಈ ಚಿತ್ರ ದ ಬಗ್ಗೆ ನಾನು ಬರೆಯಲೇ ಬೇಕು . ಈ ಚಿತ್ರದ ಬಗ್ಗೆ ಎಲ್ಲರು , ಇದು ಇಷ್ಟು ದಿನ ಚಿತ್ರ ಮಂದಿರದಲ್ಲಿ ಓಡಿದೆ , ಇದು ಇಂಥಹ ದಾಖಲೆ , ಅಂಥಹ ದಾಖಲೆ ಎಂದು ಬೀಗುತ್ತಾರೆ .
 ನನ್ನ ಪ್ರಕಾರ , ಈ ಚಿತ್ರ ಒಂದು ಸಾರ್ವಕಾಲಿಕ  ಸತ್ಯ , ಮರಳಿಗೂಡಿಗೆ   ಎಂದು .
ಬಹುಷಃ ಚಿತ್ರದ ಹೆಸರು , ನಿಮಗೆ ಗೊತ್ತಾಗಿದೆ , ಹೌದು ಇದು " ಬಂಗಾರದ ಮನುಷ್ಯ " .
ಇದು ಕೂಡ ಕಾದಂಬರಿ ಆಧಾರಿತ ಚಿತ್ರ , ಅತ್ಯುತ್ತಮ ಚಿತ್ರ ಕಥೆ ಇಂದ ರೂಪು ಗೊಂಡ ಒಂದು ಉತ್ತಮ ಚಿತ್ರ .
ಈ ಚಿತ್ರ ದಲ್ಲಿ "ರಾಜೀವ " ನಾಗಿ ರಾಜಣ್ಣ ನಮ್ಮ ಕಣ್ಣು ಕಟ್ಟುತ್ತಾರೆ .
ರಾಜಣ್ಣ , ಬಾಲಣ್ಣ ಮತ್ತು ಭಾರತಿ ಯವರು ಉತ್ತಮವಾದ ಅಭಿನಯ ನಮ್ಮ ಮನಸೂರೆ ಗೊಳ್ಳುತ್ತದೆ .
ಪಟ್ಟಣದಲ್ಲಿ ಕೆಲಸ ಮಾಡುತಿದ್ದ ಎಸ್ಟೋ ರೈತರ ಮಕ್ಕಳು , ಮರಳಿ ಬೇಸಾಯಕ್ಕೆ ಮರಳಿದರು ಎಂಬುದು  , ಈ ಚಿತ್ರದ ಪರಿಣಾಮ .

ಎಂತಹ ಅದ್ಭುತ ಚೇತನ ಅಣ್ಣಾವ್ರ ಚಿತ್ರಗಳು , 
ಪ್ರತಿ ಅಭಿಮಾನಿಯ ಚಿಂತನೆ ಗಳೆಲ್ಲವೂ , ರಾಜ್ ರವರ ಯಾವುದೋ ಚಿತ್ರದಿಂದ ಪ್ರೇರೇಪಿತವಾಗಿಯೇ ಇರುತ್ತವೆ .

ನೀವು ದಯವಿಟ್ಟು ಈ ವೀಡಿಯೊ ಗಳನ್ನೂ ನೋಡಿ , ರಾಜರ ಚಿತ್ರಗಳು ಏನು , ಹೇಗೆ , ಎಂದು ತಿಳಿಯುತ್ತದೆ .
ದಯವಿಟ್ಟು ಈ ಸಂಚಿಕೆಯನ್ನ  , ಪೂರ್ತಿಯಾಗಿ ನೋಡಿ .
ರಾಮ್ ಪ್ರಸಾದ್ ರನ್ನು  ಉತ್ತಮ ಮನುಷ್ಯರನ್ನಾಗಿಸಿದ ರಾಜ್ ಮತ್ತು ರಾಜ್ ರ ಚಿತ್ರಗಳು .

ಅಭಿಮಾನಿಗಳು ರಾಜ್ ರನ್ನು ತಮ್ಮ ಮನಸ್ಸಿನಲ್ಲಿ  ಪ್ರತಿಷ್ತಾಪಿಸಿಕೊಂಡಿದ್ದಾರೆ    , ಮತ್ತು ನಿತ್ಯವು  ಪೂಜಿಸುತ್ತಾರೆಂಬುದಕ್ಕೆ         ಇದೊಂದು ಉತ್ತಮ ಸಾಕ್ಷಿ .    

ಸರಳತೆಯ ಪ್ರತಿರೂಪ  Dr ರಾಜ್ ರವರ ಜೀವನ ಶ್ಯಲಿ  ಮತ್ತು ಅವರ ಮಾತುಗಳು  , ಎಂಬುದು  ಅವರ ಬೃಹತ್  ಬೆಳವಣಿಗೆಗೆ ಸೂತ್ರ  ಎಂದರೆ ತಪ್ಪಾಗಲಾರದು . ಅವರ ಸರಳತೆ, ನಮಗೆಲ್ಲ  ಬದುಕ ಕಲಿಸುವ ಪಾಠವಾಗಬೇಕೆಂಬುದು  ನನ್ನ ಆಶಯ  .
ಒಂದು ಮುತ್ತಿನ ಕಥೆ , ಸಾಕ್ಷಾತ್ಕಾರ  , ಬೇಡರ ಕಣ್ಣಪ , ಚಲಿಸುವ ಮೋಡಗಳು , ಮಯೂರ  , ನಾಂದಿ , ಜೀವನ ಚೈತ್ರ , ಹುಲಿಯ ಹಾಲಿನ ಮೇವು , ಬಬ್ರು ವಾಹನ, ಸಂಪತ್ತಿಗೆ ಸವಾಲ್ , ಗಿರಿ ಕನ್ಯೆ  ಚಿತ್ರಗಳ ಬಗ್ಗೆ ಇಲ್ಲಿ ನಮೂದಿಸಲು ನಾನು ಇಷ್ಟ ಪಡುತ್ತೇನೆ .

ಅದು ನಾನು ೮ ನೆ ತರಗತಿಯಲ್ಲಿ ಓದುತ್ತಿದ್ದೆ , ನಮಗೆ english grammer ಗೆ ಸಂಬಂಧ ಪಟ್ಟ ಹಾಗೆ " How to use phrases "not only" and "but also " in combining two sentences " ಎಂಬ ವಿಷಯದ ಬಗ್ಗೆ ಪಾಠ ಮಾಡುತ್ತಿದರು . ನಮ್ಮ ಶಿಕ್ಷಕಿ ಹೇಳಿದ ಮಾದರಿ , ಈಗಲೂ ನನ್ನ ಮನದಲ್ಲಿ ಇದೆ .
"Dr RajKumar is not only an actor ,but also a singer." ಎಂದು , ಆಗಲೇ ನನ್ನ ಮಂಕು ದಿಣ್ಣೆ ಗೆ ತಿಳಿದಿದ್ದು ಅಣ್ಣ ಹಾಡುತ್ತರೆಂದು .ನನ್ನ ಈ ಅಜ್ಞಾನಕ್ಕೆ ಕಾರಣ , ರಾಜ್ ಮತ್ತು ಪಿ ಬಿ ಶ್ರೀನಿವಾಸ್ ರ ಕಂಠ  ದಲ್ಲಿ ಹೋಲಿಕೆಗಳಿವೆ . ಇದು ಸ್ವತಃ ರಾಜ್ ಕೂಡ ಒಪ್ಪಿಕೊಂಡಿದ್ದಾರೆ , ಇದು ರಾಜ್ ರ ದೊಡ್ಡ ಗುಣ .

Dr  ರಾಜ್ ಎಂತಹ ಗಾಯಕರೆಂದರೆ , ದಯವಿಟ್ಟು ಈ ಮೂರು ಹಾಡುಗಳನ್ನು ಕೇಳಿ ,
೧) ನಾದಮಯಾ ಈ ಲೋಕವೆಲ್ಲಾ ...   Song - click here
೨) ದೇಹ ವೆಂದರೆ ಓ ಮನುಜ ..   Song - click here
೩) ಮೇಘಮಾಲೆ ... Song - click here
 ಈ ಮೂರು ಹಾಡುಗಳಲ್ಲಿ , ರಾಜ್ ರ  ಕಂಠ ಸ್ಥಿತಿ , ಗಾನ ಪ್ರೌಢಿಮೆ ಬಗ್ಗೆ , ವಾಹ್ ಎಂದು ಹೇಳುತ್ತಿರಿ .
ರಾಜ್ ರ ಚಿತ್ರದ ಗೀತೆಗಳಲ್ಲಿ ಸಾಹಿತ್ಯ ಉತ್ತಮ , ಅತ್ಯುತ್ತಮ . ಎಲ್ಲ ಗೀತೆಗಳು ನಮಗೆ ಜೀವನವನ್ನ ಕಲಿಸುತ್ತವೆ .
ಇಲ್ಲಿ ನಾವು ಚಿ. ಉದಯಶಂಕರ್ ರವರನ್ನು  ನೆನಪಿಸಿಕೊಳ್ಳಲೇಬೇಕು. 
ಕನ್ನಡಕ್ಕೆರಾಜ್ ರ ಕೊಡುಗೆ ಅಪಾರ , ಈ ಅಪಾರತೆ ಗೆ ಪಾರದರ್ಶಕ ನಮ್ಮ ಮನಸ್ಸುಗಳಾಗಬೇಕು. ಇದಕ್ಕೆ ಸೂಕ್ತ ಉದಾಹರಣೆ ಗೋಕಾಕ ಚಳುವಳಿ ಯಲ್ಲಿ ರಾಜ್ ರ ಸಕ್ರಿಯ ಪಾತ್ರ  . 

ಕನ್ನಡಕ್ಕೆ ಇವರು ಕೊಟ್ಟ ಗೌರವ ಹೇಗಿತ್ತೆಂದರೆ , ಇವರು ಅಭಿನಯಿಸಿದ ಎಲ್ಲ ಚಿತ್ರಗಳು ಕನ್ನಡ ಚಿತ್ರಗಳೇ ಆಗಿದ್ದವು , ಎಂಬುದು ನಮಗೆಲ್ಲ ಸಂತೋಷ ಕೊಡುವ ಸಂಗತಿ .
ನಾವು ಕೂಡ ರಾಜ್ ರಂತೆ ಕನ್ನಡ ದ ಬಗ್ಗೆ ಅಭಿಮಾನ ಇಮ್ಮಡಿ ಗೊಳಿಸಿಕೊಳ್ಳಬೇಕು.
ದಯವಿಟ್ಟು  ಮಕ್ಕಳಿಗೆ , ಡಾ ರಾಜ್ ಕುಮಾರ್ ರಂತಹವರ ಬಗ್ಗೆ ತಿಳಿಸಿ , ಕನ್ನಡ ಭಾಷೆಯಲ್ಲಿ ನಿಮ್ಮ ಮಕ್ಕಳು ಕಲಿಯಲು ಅವಕಾಶ ಮಾಡಿಕೊಡಿ . 

ನನ್ನ ಈ ಪುಟ್ಟ ವ್ಯಾಖ್ಯಾನದ ಕೊನೆಯ ಮಾತು ,
ರಾಜ್ ರ ಚಿತ್ರಗಳು ನಮಗೆ ಮಾದರಿ ,
ರಾಜ್ ರ ಸರಳ ಜೀವನ ನಮಗೆ ದಾರಿ ,
ನಿಮಗಾಗಿ , ಜನುಮದ ಜೋಡಿ ಚಿತ್ರದ ಡಾ|| ರಾಜ್‍ ಹಾಡಿರುವ ಗೀತೆಯ ಸಾಹಿತ್ಯ .

ಚಿತ್ರ: ಜನುಮದ ಜೋಡಿ
ಹಾಡಿರುವವರು: ಡಾ|| ರಾಜ್‍ಕುಮಾರ್
ಸಂಗೀತ: ವಿ.ಮನೋಹರ್
ಸಾಹಿತ್ಯ: ವಿ.ಮನೋಹರ್

ದೇಹವೆಂದರೆ ಓ ಮನುಜ ಮೂಳೆ ಮಾಂಸಗಳ ತಡಿ ಖನಿಜ
ಮನಸು ಆಸೆ ತುಂಬಿದ ಕಣಜ ಮೋಹದಿಂದ ದುಃಖವು ಸಹಜ
ನಶ್ವರ ಕಾಯ ನಂಬದಿರಯ್ಯ ಈಶ್ವರನೇ ಗತಿ ಮರೆಯದಿರಯ್ಯ
ತ್ಯಾಗದಿ ಪಡೆಯೋ ಸುಖವು ಶಾಶ್ವತ
ಕಟ್ಟಿರುವ ಗುಡಿಯಲ್ಲಿ ಉಟ್ಟಿರುವ ಮಡಿಯಲ್ಲಿ
ಸುಟ್ಟ ಧೂಪ ದೀಪದಿ ಶಿವನಿಲ್ಲ
ಬಗೆ ಬಗೆ ಮಂತ್ರದಲ್ಲಿ ಯಾಗ ಯಜ್ಞಗಳಲ್ಲಿ
ಜಪ ತಪ ವ್ರತದಲ್ಲಿ ಅವನಿಲ್ಲ
ಮಣ್ಣ ಕಣ ಕಣದಲ್ಲು ಜೀವ ಜೀವಗಳಲ್ಲು
ಒಳಗಿನ ಕಣ್ಣಿಗೆ ಕಾಣುವಾತನು
ದೇಹವೆಂದರೆ....
ಮೇಳು ಕೀಳಿನ ನಡತೆ ಹಾದಿ ತಪ್ಪಿದ ಜಡತೆ
ಕುಲ ವ್ಯಾಕುಲಗಳು ಸರಿಯೇನು
ರೋಷ ದ್ವೇಷದ ಉರಿಯು ಲೋಭ ಮೋಸದ ಪರಿಯು
ಸಾಗುವ ದಾರಿಗೆ ಬೆಳಕೇನು
ಅನ್ಯರ ಗುಣದಿ ಸನ್ಮತಿ ಹುಡುಕು
ಸತ್ಯದ ಪಥವೇ ಬೆಳ್ಳಿ ಬೆಳಕು
ಕರುಣೆ ಪ್ರೇಮವೆ ಉಲ್ಲಾಸ ನಿತ್ಯ ಕಾಯಕವೇ ಕೈಲಾಸ
ಚಿತ್ತ ನಿರ್ಮಲದಿ ಸಂತೋಷ ನೀತಿ ಮಾರ್ಗವೇ ಭವನಾಶ
ವೈಭೋಗ ಜೀವನ ತ್ಯಾಗವ ಮಾಡಿ ವೈರಾಗ್ಯ ಯೋಗದ ಸಾಧನೆ ಮಾಡಿ
ಕೈವಲ್ಯ ಹೊಂದುವ ಪರಮ ಸಂಪದ
ಕರುಣೆ ಪ್ರೇಮವೆ ಉಲ್ಲಾಸ ನಿತ್ಯ ಕಾಯಕವೇ ಕೈಲಾಸ
ಚಿತ್ತ ನಿರ್ಮಲದಿ ಸಂತೋಷ ನೀತಿ ಮಾರ್ಗವೇ ಭವನಾಶ
ಇಂತಿ  ನಿಮ್ಮ ,
ಗಂಗ.