Monday, December 31, 2012

ಹೊಸ ಹರುಷ

ವರುಷ ಕಳೆ ಹರುಷ ತಳೆ
ನವ ನವೀನ ಹೊಸತು ಎಳೆ ।।ಪ ।।

ಇಳೆಗೆ ಇಂದು ಚಂದ ಮಳೆ
ಚಿಗುರು
ತಂದ  ಭಾವ ಸೆಳೆ
ಸುಗ್ಗಿ ತಂದ ಬಾಳ ಮಳೆ
ಫಲವು ನಮಗೆ ಇಂದು ನಾಳೆ ।।

ಬಯಕೆ ಹೊತ್ತ ಹಳೆಯ ಹಾಸು
ದುಡಿಮೆ ಗೈವ ಶ್ರದ್ದೆ ಸೂಸು
ಪ್ರತಿ ಕ್ಷಣ ಭಯದ ಮಾಸು
ಕರ್ಮ ಪಠಣ ನಿತ್ಯ ಕಾಸು ।।

ಹೊಲಸ ಭಾವ ದೂಡಿ ಇಂದು
ಮಂದಹಾಸ ನಿತ್ಯ ಬಂಧು
ಸರಳತನವೇ ಸತ್ಯ ಎಂದು
ಜ್ಞಾನಸೆಲೆಯೆ ಏಳ್ಗೆ ಬಿಂದು ।।

ವಿಶ್ವ ಮಾನವ ಭಾವ ಬೆಳೆಯಲಿ
ಮುಕ್ತ ಮನ ನಮ್ಮದಾಗಲಿ
ದ್ವೇಷ ಭಾವ ಅಂತ್ಯ ಕಾಣಲಿ
ಹೊಸ ವರುಷ ಹರುಷ ತರಲಿ ।।

--
ಎಲ್ಲರಿಗು ಹೊಸ ವರುಷದ ಹಾರ್ದಿಕ ಶುಭಾಶಯಗಳು
ಗಂಗರಾಜು .ಕು.ಸಿ.

Thursday, December 27, 2012

ಅತಿ- ಶಯನ- ಉಕ್ತಿ

ಅತಿ ಆದ್ರೆ ಅಮೃತ ಕೂಡ ವಿಷ ಅಲ್ಲವೇ ? ಎಂಬ ಮಾತು ನನ್ನ ಮನದಲ್ಲಿ ನುಡಿಯುತ್ತಲೇ ಇತ್ತು .
ಏನು ಅತಿ ಮಾಡ್ತಾ ಇದೀನಿ ಎಂದು ಅವಲೋಕನ ಮಾಡಿಕೊಳ್ಳುವ ತಾಳ್ಮೆ ಕೂಡ ನನ್ನಲ್ಲಿ ಮೂಡುತ್ತಿಲ್ಲ.
ಎಂಥಾ ಭಾವ ಇದು ,ನನ್ನ ವರ್ತಮಾನದ ಭಾವನೆಗಳನ್ನ ನನ್ನವೇ ಆದ ಹಳೆಯ ಮಾಸಿದ ನೆನಪುಗಳೆಂಬ ನಿಂತ ನೀರಲ್ಲಿ ಜಾಲಿಸಿ ನೋಡುವುದು,
ಎಂಥಾ ವಿಚಿತ್ರ ಪರಿ ನನ್ನದು ಎಂದು ಚುಚ್ಚುತ್ತಲೇ ಇತ್ತು .

ನನ್ನ ವರ್ತಮಾನಕ್ಕೆ ಭೂತವಿಡಿದಿದೆಯೇ ಹೊರತು ಭವಿಷ್ಯದ ಸ್ಪರ್ಶ ತುಸು ಕೂಡ ಆಗಿಲ್ಲ ಅಂಥಾ,ನನ್ನ ಕೆಲವು ಭಾವನೆಗಳು ಕಲಸಿಹೊಗುತ್ತಿದ್ದವು.
ಇಷ್ಟೆಲ್ಲಾ ಕರ್ಮಕಾಂಡ ನನ್ನ ತಲೆಯಲ್ಲಿ ನಡೆಯುವ ಹೊತ್ತಿಗೆ ,"ಈವಾಗಲೇ ಅರ್ಧ ತಲೆ ಮೇಲೆ ಕೂದಲು ಇಲ್ಲ ,ಇನ್ನು ಹಿಂಗೆ ಹುಚ್ಚನ ಥರ ಆಡುದ್ರೆ ...."ಎಂದು ಆಗತಾನೆ
ಜನಿಸಿದ ಭಾವಶಿಶು ಅತ್ತು ನಕ್ಕಿತು.

--
ಗಂಗರಾಜು .ಕು.ಸಿ.

Friday, August 31, 2012

ಸಣ್ಣ ವ್ಯಥೆ 25 (ಶೂನ್ಯ )

ವಾನ ಪ್ರಸ್ಥದಲ್ಲಿ ಹಾಯಾಗಿ ಕಾಲ ಕಳೆಯಲು ಸುಂದರ ನೆನಪುಗಳನ್ನ ನಿಮ್ಮ ವಯಸ್ಸಿನಲ್ಲಿ ಅಣಿ ಮಾಡಿಕೊಳ್ಳಿ ಎಂದು
ಅಂದಿನ ಆಕಾಶವಾಣಿಯಲ್ಲಿ ಕೇಳಿದ ತಕ್ಷಣ ರಂಗಜ್ಜನ ಕಣ್ಣಾಲಿ ಚಳಿಗಾಲದ ಮಂಜು ಸೂರ್ಯನ ತಾಪಕೆ ಹರಿಯುವಂತೆ ಇಳಿಯ ತೊಡಗಿತು.ಹುಟ್ಟುವಾಗಲೇ ತಂದೆಯ ಕಳೆದುಕೊಂಡು ಆಮೇಲೆ ತಾಯಿ ಕೂಡ ಪ್ಲೇಗ್ ಮಾರಿಗೆ ತುತ್ತಾಗಿ ಅಜ್ಜಿಯ ಲಾಲನೆಯಲ್ಲಿ ಬೆಳೆದ ರಂಗಜ್ಜನಿಗೆ, ಯೌವನವಸ್ಥೆಯ ಹೊತ್ತಿಗೆ ಅನಾಥ ಸ್ಥಿತಿಗೆ ಬಂದು ಮುಂದೆ ಮಾರಿ ಗುಡಿ ಪಕ್ಕದ ತಿಮ್ಮಕ್ಕನನ್ನು ಮದುವೆಯಾದ.
ಸುಖ ಸಂಸಾರಕ್ಕೆ ೧೨ ಸೂತ್ರಗಳು ಆದರೆ ಇವರ ಸುಖ ಸಂಸಾರಕ್ಕೆ ೧೨ ಮಕ್ಕಳಾಗಿ ,ಅವರಲ್ಲಿ ೬ ಮಕ್ಕಳು ಹಸುಳೆಯಲ್ಲೇ ನೀಗಿಕೊಂಡರೆ ಉಳಿದ ೬ ರಲ್ಲಿ ೩ಬಾಲ್ಯಾವಸ್ಥೆಯಲ್ಲಿ ಬಾವಿಗೆ ಮತ್ತು ಕೆರೆಯ ಹರಿವಿಗೆ -ಆಳಕ್ಕೆ ಸಿಕ್ಕಿ ಮರೆಯಾದವು.ಉಳಿದ ೩ ಮಕ್ಕಳು ಅಷ್ಟಾಗಿ ಓದಲಿಲ್ಲವಾದರೂ ,ಆದರೆ ರಂಗಜ್ಜನ ಪಿತ್ರಾರ್ಜಿತ ಮತ್ತು ಮಾತ್ರಾರ್ಜಿತ ಆಸ್ತಿಯ ಮೇಲೆ ಅವಲಂಬಿತರಾಗಿದ್ದರು,
ರಂಗಜ್ಜ ಕೂಡ ತನ್ನ ಚೈತನ್ಯದ ದಿನಗಳಲ್ಲಿ ಬುಟ್ಟಿಯ ಗಂಟಿನಂತಿದ್ದ ಆಸ್ತಿಯನ್ನ ಒಂದು ಪಲ್ಲ ಗೋಣಿ ಚೀಲಕ್ಕೆ ಸರಿದೂಗಿಸಿದ್ದ.ಕುಂತು ತಿನ್ನುವವರು ಹೆಚ್ಚಾಗಿ ಆ ಪಲ್ಲ ಚೀಲ ಮತ್ತೆ ಗಂಟಾಗಿತ್ತು , ಆದರೆ ಆ ಗಂಟನ್ನು ಕಿತ್ತು ತಿನ್ನಲು ಮೂರು ಮಕ್ಕಳ ಹೆಂಡತಿಯರಿಗೆ ತಲಾ ನಾಲ್ಕು ಪಿಳ್ಳೆಗಳು ಇಲಿಗಳಂತೆ ಬೆನ್ನಿಗೆ ಬಿದ್ದಿದ್ದವು. ತನ್ನ ಯೋಚನಾ ಲಹರಿ ಇಷ್ಟೆಲ್ಲಾ ಅರಿದು ಅಳುವ ಹೊತ್ತಿಗೆ ಆಕಾಶವಾಣಿಯಲ್ಲಿ "ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು " ಎಂದು ಜೋರಾಗಿಕೇಳಿಸುತ್ತಿತ್ತು.
ಬಾಗಿಲಿಗೆ ಬಂದು ಅಜ್ಜ ಎಂದು ಕೂಗಿದ ಮೊಮ್ಮಗ "ಪ್ರಕಾಶ ನೀರಿಗೆ ಬಿದ್ದವ್ನೆ" ಎಂದು ಅಳತೊಡಗಿದ .
ಆಕಾಶವಾಣಿ ಕೂಡ "ವೇದಾಂತಿ ಹೇಳಿದನು, ಈ ಬದುಕು ಶೂನ್ಯ ಶೂನ್ಯ " ಎಂದು ಅಳತೊಡಗಿತು.

--
ಗಂಗರಾಜು .ಕು.ಸಿ

Friday, August 24, 2012

ಸಣ್ಣ ವ್ಯಥೆ -24


ಮೋಹನ ಹುಟ್ಟು ಕೋಪಿಷ್ಠ ಎಂದು ಅಮ್ಮನಿಗೆ ದೊಡ್ಡಮ್ಮ ಹೇಳುತ್ತಿದಳು . ಇವನಿಗೆ ಈಗ ಮದುವೆ ಬೇರೆ ಮಾಡ್ತಾ ಇದಿವಿ ಆ ಹುಡುಗಿನ ಚೆನ್ನಾಗಿ ನೋಡ್ಕೊತ್ಹಾನೋ ಇಲ್ವೋ ಎಂದು ತಮ್ಮ ಅಳಲನ್ನು ತೋಡಿಕೊಳ್ಳುವಾಗ , ಕೋಪ ಬಹಳ ಕೆಟ್ಟ ಗುಣ ಕ್ರಮೇಣ ಎಲ್ಲಾ ಸರಿ ಹೋಗುತ್ತೆ ಎಂದು ದೊಡ್ಡಮ್ಮನನ್ನು ಅಮ್ಮ ಸಂತೈಸಿದಳು. ಮೋಹನಣ್ಣನ ಮದುವೆಯಾದ ಹುಡುಗಿ ನನ್ನ ಕ್ಲಾಸ್ ಮೇಟ್ ಪೂಜಾ ಎಂದು ಮದುವೆಯ ದಿನವೇ ತಿಳಿದಿದ್ದು,ಫೋಟೋ ತೆಗೆಸಿಕೊಳ್ಳುವಾಗ ಮೋಹನಣ್ಣ ನನ್ನನ್ನು ತಮ್ಮ ಎಂದು ಪರಿಚಯಿಸಿದಾಗ ಪೂಜಾ ಹಲೋ ಎಂದು ಹೇಳಿ ,ಇವನು ನನ್ನ ಕ್ಲಾಸ್ ಮೇಟ್ ಎಂದು ಮೋಹನಣ್ಣನ ಕಡೆ ನೋಡಿ ನಗೆ ಚೆಲ್ಲಿದಳು.
ಪೂಜಾ ಬಹಳ ಸಂಭಾವಿತೆ ,ಶಾಂತ ಸ್ವಭಾವದವಳು ಮೇಲಾಗಿ ಎಲ್ಲರೊಂದಿಗೂ ಬಹಳ ಸಹನೆಯೊಂದಿಗೆ ತನ್ನ ಕೆಲಸಗಳನ್ನು ಮಾಡುವಂಥ ಹೆಣ್ಣು ಎಂದು ನನಗೆ ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ಅಭ್ಯಾಸ ಮಾಡುವಾಗ ತಿಳಿದುಕೊಂಡಿದ್ದೆ, ಇಂಥ ಶಾಂತ ಮೂರ್ತಿಗೆ ಈ ಕೋಪಿಷ್ಠ ಗಂಡನೇ ಎಂದು ನನ್ನ ಉಬ್ಬು ಕೂಡ ಏರಿತ್ತು.
ಮೋಹನಣ್ಣ ಉದ್ಯೋಗದ ನಿಮಿತ್ತ ಅಲ್ಲ ಶೀಘ್ರ ಹಣ ಸಂಪಾದನೆಯ ನಿಮಿತ್ತ ಅಮೆರಿಕಕ್ಕೆ ಹೋದ,ಹಾಗಾಗಿ ಪೂಜಾ ಕೂಡ ಅಮೆರಿಕದಲ್ಲೇ ಉಳಿದಳು.
ಸುಮಾರು ಐದು ವರ್ಷಗಳ ನಂತರ ನನ್ನ ಮದುವೆಗೆಂದು ಮೋಹನಣ್ಣ ತವರಿಗೆ ಹಿಂದಿರುಗಿದ ,ನನ್ನ ಜೀವನ ಕೂಡ ಪ್ರೀತಿ ಪ್ರೇಮಕ್ಕೆ ಹೊರತಾಗಿ ಇರಲಿಲ್ಲ ಹಾಗಾಗಿ ಅಮ್ಮ ಅಪ್ಪ ಏನಾದರು ಮಾಡಿಕೊ ಎಂದು ಮದುವೆಯ ಪ್ರಸ್ತಾವನೆಗೆ ಗೋಣು ಆಡಿಸಿದರು. ಮದುವೆಯ ದಿನ ಮೋಹನಣ್ಣ, ಪೂಜಾಳ ಪ್ರತಿ ಮಾತಿಗೂ ಆಗ
ತಾನೆ ಘಂಟೆ ಕಟ್ಟಿದ ಸೀಮೆ ಹಸದ ಕರುವಿನ ಹಾಗೆ ಗೋಣು ಆಡಿಸುತ್ತಿರುವುದನ್ನ ಕಂಡು ನಾನು ,ಅಮ್ಮ ,ದೊಡ್ಡಮ್ಮ ಸುಸ್ತು ಹೊಡೆದಿದ್ದವು.
ಮೂರ ದಿನದ ಮುಂಚೆ ಅಮ್ಮ ,ಪಕ್ಕದ ಮನೆಯ ಭಾಗ್ಯಮ್ಮನವರಿಗೆ ನಾನು ಬಹಳ ಕೋಪಿಷ್ಠ ,ಮದುವೆಯಾದ ಮೇಲೆ ಪ್ರೀತಿಸಿದ ಆ ಹುಡುಗಿಯನ್ನ ಹೇಗೆ ನೋಡ್ಕೊತ್ಹಾನೋ
ಎಂಬ ಮಾತು ಚಕ್ಕನೆ ಮನದಲ್ಲೇ ಹಾದುಹೋಯಿತು.

--
ಗಂಗರಾಜು.ಕು.ಸಿ

Wednesday, August 1, 2012

ಸಣ್ಣ ವ್ಯಥೆ -23

ಮೂಲೆ ಮನೆ ಮಾದೇವಿ ರಾಗಿ ಬಿಸುತ್ತ  ತನ್ನ ಹಳೆ ರಾಗದಲ್ಲಿ ಪಕ್ಕದಲ್ಲಿ ಕುಳಿತು ತಲೆ ಆಡಿಸುತ್ತಿದ್ದ ಮೊಮ್ಮಕ್ಕಳ ಮುಖ ನೋಡಿ ಕೊಂಡು "ನಿಂಬೀಯಾ ವನದ ಮ್ಯಾಗಳ ಚಂದ್ರಮಾ ಚೆಂಡಾಡಿದ.." ಎಂದು
ಹಾಡಿ ಕೆಲಸ ಮತ್ತು ಮಕ್ಕಳ ಆರೈಕೆ ಮಾಡುತ್ತಿದ್ದಳು.
ಬಾವಿ ಮನೆ ರಂಗಪ್ಪ ಮುಂಜಾನೆ ೩:೩೦ ಕ್ಕೆ ಸರ್ಕಾರ ಕೊಡುವ ಮೂರು ಫೆಸು ಕರೆಂಟಿಗೆ ,ಹೋದ ವರುಷ ಕೊರೆಸಿದ್ದ ಕೊಳವೆ ಬಾವಿ ಇಂದ ತನ್ನ ಹೊಲಕ್ಕೆ ನೀರು ಹಾಯಿಸಲು ಎದ್ದು ಹೊರಟ,ಇದ್ದ ಹಳೆ ಬಾವಿ ಬತ್ತಿ ಬಹಳಷ್ಟು ವರ್ಷಗಳೇ ಕಳೆದಿದ್ದವು , ಹೋದ ವರ್ಷ ಅಳಿಯ ಮಾದೇಶ  ಹೆಂಡತಿಯ  ಇಚ್ಚೆಯ ಮೇರೆಗೆ ಮಾವ ರಂಗಪ್ಪನಿಗೆ ಕೊಳವೆ ಬಾವಿ ಕೊರೆಸಿ ಕೊಟ್ಟಿದ್ದ.
ಕಂಡಕ್ಟರ್ ಸಿದ್ದಪ್ಪನ ಮಗ ಪರಮೇಶ ೯ ನೆ ತರಗತಿಯಲ್ಲಿ ಪಾಸಾಗಿ ಊರಿನಲ್ಲಿ ಅತಿ ಹೆಚ್ಚು ಓದಿದವನೆನಿಸಿಕೊಂಡಿದ್ದ, ಊರಿಂದ ಸುಮಾರು ೪ ಮೈಲಿ ದೂರ ಇದ್ದ ಹೊಸೂರಿನ ನ್ಯಾಷನಲ್ ಹೈ ಸ್ಕೂಲ್ ನಲ್ಲಿ
೧೦ ನೆ ತರಗತಿ ಗೆ ಹೋಗುತ್ತಿದ್ದ. ಸಂಜೆ ೬ ಗಂಟೆಗೆ ಹಟ್ಟಿಗೆ ಬರುವ ಪರಮೇಶ ಬುಡ್ಡಿ ದೀಪದಲ್ಲಿ ಓದಿ ಪ್ರತಿದಿನ  ಮುಂಜಾನೆ ೬ ಕ್ಕೆ ಮನೆ ಬಿಡುತಿದ್ದ, ಶಾಲೆಯ ಪ್ರಾರ್ಥನೆ ವೇಳೆಗೆ ಸೇರಿಕೊಳ್ಳಲು.
 "ರಾಜಧಾನಿ ಬೆಂಗಳೂರಿನಲ್ಲಿ ಜನ ವಿಧಾನ ಸೌಧದ ಮುಂದೆ ನಮಗೆ ತಡೆ ರಹಿತ ವಿದ್ಯುತ್ ಬೇಕೆಂದು ಜನರೆಟರ್ ಬೆಳಕಿನಲ್ಲಿ ಪ್ರತಿಭಟಿಸಿದರು" ಎಂದು ಊರಿನ ಶಾನಭೋಗ ಸುಬ್ಬಣ್ಣ ಬುಡ್ಡಿ ದೀಪದ ಬೆಳಕಿನಲ್ಲಿ ಪತ್ರಿಕೆ  ಓದಿಕೊಂಡ.

--
ಗಂಗರಾಜು.ಕು.ಸಿ

Friday, July 27, 2012

ಸಣ್ಣ ವ್ಯಥೆ -22


ಹತ್ತಿರ ದೂರ ಆದಂಗೆ ,ದೂರ ಹತ್ತಿರ ಆಗುತ್ತೆ ಆಲ್ವಾ ? ಅಂಥ ನನ್ನ ಮನಸ್ಸು ತನ್ನಲ್ಲೇ ಒಂದು ಪ್ರಶ್ನೆಯನ್ನು ಹಾಕಿಕೊಳ್ಳುವಷ್ಟು ಪುರುಸೊತ್ತು ನನ್ನ ಮನಸ್ಸಿಗೆ ಕೊಟ್ಟಿದ್ದೆ. ಎಂಥಾ ವಿಚಿತ್ರ ಇದು , ಹತ್ತಿರ ದೂರ ಆಗ್ತಾ ಇದ್ರೆ ನಾನು ಏನು ಮಾಡಬೇಕು ?ಎಂದು ನನ್ನ ಬುದ್ದಿ ಹೇಳೋಕೆ ಶುರು ಮಾಡಿದಾಗ ಏನೋ ಒಂಥರಾ ಮನದಲ್ಲೇ ಒಂದು ತರ್ಕ ಅಲ್ಲ ಜಿಜ್ಞಾಸೆ ಅಯ್ಯೋ ಅಲ್ಲ ಒಂದು ಸಣ್ಣ ಅಳಲು. ಏನು ಮಾಡಬೇಕು ಎಂದು ತಿಳಿಯದೆ ಮುಖ ಪುಟ (facebook) ವೆಬ್
ಸೈಟ್ ಅನ್ನು ಕ್ಲೋಸ್ ಮಾಡಿದೆ.ತಕ್ಷಣಕ್ಕೆ ಏನೋ ಒಂಥರಾ ಹಗುರ ಭಾವ ಮೂಡಿದ ಹಾಗೆ ಆಯಿತು , ಬುದ್ದಿಗೆ ಸ್ವಲ್ಪ ತ್ರಾಣ ದೊರೆಯಿತು.
ಎಷ್ಟು ವಿಚಿತ್ರ ,ನನ್ನ ಮನಸ್ಸು ನನ್ನ ಬುದ್ದಿಯನ್ನೇ ಮಂಕು ಬಡಿಸುವಷ್ಟು ದೊಡ್ಡದು ಎಂದು ತಿಳಿದ ಹಾಗಾಯಿತು.
ಮುಖಪುಟದ ಯಾರದೋ ಭಾವನೆಗಳನ್ನ , ಅವರ ಸೊಬಗುಗಳನ್ನ , ಸಂಭ್ರಮಗಳನ್ನ , ನಿರಾಶೆಗಳನ್ನ , ಅಳಲನ್ನ ,ಅಂಧಕಾರವನ್ನ ಅಥವಾ ಇತಿಹಾಸವನ್ನ ನಾನೇಕೆ ನನ್ನ ಮನಸ್ಸಿಗೆ ತಂದುಕೊಂಡು ಕೊರಗತೊಡಗಿದೆ ಎಂದು ಒಂದು ಪ್ರಶ್ನೆ ಮೂಡಿತು. ಪಕ್ಕದಲ್ಲೇ ಕುಳಿತಿದ್ದ ಕಣ್ಣನ್ ನನಗೆ ತಿಳಿಯದ ತಮಿಳಿನಲ್ಲಿ ಯಾರನ್ನೋ ಬೈಯುತ್ತ , ಶುಕ್ರವಾರ ಇವತ್ತು ಎದ್ದೇಳು ಪಾರ್ಟಿ ಮಾಡೋಣ ಎಂದು ಇಂಗ್ಲೀಷಿನಲ್ಲಿ ಆಜ್ಞಾಪಿಸಿದ.

--
ಗಂಗರಾಜು.ಕು.ಸಿ.

Thursday, July 19, 2012

ಸುಖಾ ಸುಮ್ಮನೆ

ಪ್ರತಿ ಕ್ಷಣದಲ್ಲೂ ಭೂಮಿಯ ಮೇಲೆ ಅನೇಕ ಜೀವಿಗಳು ಅಳಿಯುತ್ತಿರುತ್ತವೆ ಹಾಗೆಯೇ ನಮ್ಮ ದೇಹದಲ್ಲಿಯೂ ಕೂಡ
ಅನೇಕ ಜೀವಕೋಶಗಳು ಸಾಯುತ್ತಿರುತ್ತವೆ ಮತ್ತು ಹೊಸ ಜೈವಿಕ ಕ್ರಿಯೆಗಳು ನಡೆಯುತ್ತಿರುತ್ತವೆ .ಹೇಗೆ ಜೈವಿಕ ಅಂಶಗಳಿಗೆ ಹುಟ್ಟು -ಸಾವು ಇದೆಯೋ , ಹಾಗೆ ನಮ್ಮ ಮನಸ್ಸಿನಲ್ಲಿ ಹುದುಗೋ ಭಾವನೆಗಳಿಗೂ ಕೂಡ .ನಮ್ಮ ಮನಸ್ಸಿನ ಯೋಚನಾ ಲಹರಿಯ ಆಧಾರದ ಮೇಲೆ  ಅನೇಕ ಭಾವನೆಗಳು ಜೀವ ಪಡೆಯುತ್ತವೆ  ಮತ್ತು ನಮ್ಮ ಲ್ಲಿರುವವಿವೇಕವೆಂಬ ಅಂಶದಿಂದ ಅನೇಕ ಭಾವನೆಗಳು ಭ್ರೂಣವಸ್ಥೆಯಲ್ಲಿಯೇ ಅಸು ನೀಗುತ್ತವೆ.ಈ ವಿವೇಕದ ರಚನೆ ನಮ್ಮ ಬಾಳಿನಲ್ಲಿ ನಡೆದ -ನೋಡಿದ ಘಟನಇಂದಲೋ ಅಥವಾ ನಮ್ಮ ಪೂರ್ವಗ್ರಹದ  ಆಧಾರದ ಮೇಲೆ ರೂಪುಗೊಂಡಿರುತ್ತದೆ.
ಅಂದರೆ ಪ್ರತಿ ಭಾವನೆಯ ಹುಟ್ಟಿಗೆ ಕಾರಣವಿದೆ ಹಾಗೆಯೇ ಅದರ ಸಾವಿಗೂ ಒಂದು ಕಾರಣ ವಿರುತ್ತದೆ .

ನನ್ನ ಕೆಲವು ಜಿಜ್ಞಾಸೆಗಳನ್ನು ಇಲ್ಲಿ ಬರೆಯುತ್ತೇನೆ , ಪ್ರತಿ ಭಾವನೆಯ ಹುಟ್ಟಿಗೆ ಒಂದು ಕಾರಣವಿದ್ದರೆ,ಭ್ರೂಣವಸ್ಥೆಯಲ್ಲಿ ಇರುವ ಮಗುವಿನ ಭಾವನೆಗಳ ಮೂಲ ಏನು  ? ತಾಯಿಯ ವಿವೇಕದಿಂದಲೇ ,ಹಾಗೆಂದು ಯೋಚನೆ ಮಾಡಿದರೆ ನನ್ನಲ್ಲಿ
ಇನ್ನೊಂದು ತರ್ಕ ಉದ್ಭವಿಸುತ್ತದೆ , ಮಗುವಿಗೆ ಹಸಿವಾದಾಗ ತಾಯಿಗೂ ಹಸಿವಾಗುತ್ತದೆ ಎಂದು ಎಲ್ಲೋ ಓದಿದ ನೆನಪು .
ಹಾಗಾದರೆ ವಿವೇಕ ಇಲ್ಲಿ ವರ್ತಿಸುವುದಿಲ್ಲವೇ?

ಕೆಲವೊಮ್ಮೆ , ಭಯ ಎಂಬುದು ಅತಿ ದೊಡ್ಡ ವಿವೇಕವಾಗಿ ವರ್ತಿಸಿ ,ಎಷ್ಟೋ ಭಾವನೆಗಳನ್ನು ಹೊಸಕಿ ಹಾಕುತ್ತದೆ ,
ಏಕೆಂದರೆ ಭಯ ಹುಟ್ಟುವುದು ಮೌಡ್ಯದಿಂದ ಅಲ್ಲವೇ ?

ತರ್ಕಕ್ಕೆ ಕೊನೆ ಇಲ್ಲ?

--
ಗಂಗರಾಜು.ಕು.ಸಿ .





Tuesday, July 17, 2012

ಹೊಗೆ ಮಾನವ

ಹೊಗೆ ಮಾನವ
ಇವನು ಹೊಗೆ ಮಾನವ ||

ಬೆಂಕಿ ಜೊತೆಗೆ ಸರಸವಾಡೋ
ಪಂಕ್ತಿಯಲ್ಲಿ ಪಾನ ಮಾಡೋ
ಪವನ ಮುಕ್ತ ಸ್ಪರ್ಶ ನೀಡೋ
ಇವನು ಹೊಗೆ ಮಾನವ

ಭೂ ಅಗಲಕೆ ಚಾಚಬಹುದು
ನೇಸರೆತ್ತರ  ಏರಬಹುದು
ನಿಂತ ಜಾಗವ ಕಂಪು ವರಿಸೋ
ಇವನು ಹೊಗೆ ಮಾನವ

ಹೊಗೆಯ ಹಿಂದೆ ನಗೆಯ ಬೀರಿ
ಹರುಷದಿಂದ ಮೊಗವ ತೋರಿ
ದೇವನಿವನೆ  ಹೊಗೆಯ ಹಿಂದೆ
ಇವನು ಹೊಗೆ ಮಾನವ

ಒಡಲ ಸುಖಕೆ ತಲೆಯ ಬಾಗಿ
ಪರರ ಶ್ವಾಸ ಬಿಸಿಯ ಮಾಡಿ
ಕೈ- ಬಾಯಿ ಸುಡುವ ನಾತ
ಇವನು ಹೊಗೆ ಮಾನವ

ಧೂಮಪಾನ ಹಾನಿಕರ
ಅದು ಇವಗೆ ತಾತ್ಸಾರ
ಸರ್ಕಾರಕೆ ಸವಾಲೆಸೆವ
ಇವನು ಹೊಗೆ ಮಾನವ

ಬಾಳಿ- ಬದುಕಿಸೋ ಬಾಳ್ವೆಯಲ್ಲಿ
ನಿತ್ಯ ದೇಹ ಕಾಂಡವೇಕೆ
ಬಿಟ್ಟ ಹೊಗೆ , ಹೋದ ನಗೆ
ಹುಡುಕಿ ತರಲು ಸಾಧ್ಯವೇ ?

--
ಗಂಗರಾಜು .ಕು.ಸಿ .

Friday, July 13, 2012

ಸಣ್ಣ ವ್ಯಥೆ -21

ಮೂಲೆ ಮನೆ ಮಾದೇವಿ ಹೇಳ್ದಂಗೆ ಆಗೈತೆ ನೋಡು ಆ ಗಂಡ ಸತ್ತ ಹೆಣ್ಣು ಹೇಳ್ದಂಗೆ ಆಯ್ತದೆ ಎಲ್ಲಾ ನಮ್ಮ ಹಣೆ ಬರಹ ಎಂದು ಸಿದ್ದಪ್ಪ ಗೊಣಗ ತೊಡಗಿದ್ದ. ಪಕ್ಕದಲ್ಲಿ ಬೀಡಿ ಸೇದುತ್ತಿದ್ದ ಪರಮೇಶ ಸುಮ್ಕಿರು ತಾತ ಹಂಗೆಲ್ಲ ಅನ್ನಬೇಡ . ತಲೆಯ ಮೇಲಿದ್ದ ಹೊದಿಗೆಯನ್ನು ಬಿಗಿ ಗೊಳಿಸಿದ ತಾತ , ನೋಡು ರೇವತಿ,ಅಶ್ವನಿ,ಭರಣಿ,ಕೃತಿಕಾ, ರೋಹಿಣಿ ಮಳೆಯ ಸದ್ದೇ ಇರ್ಲಿಲ್ಲ ಮೃಗಶಿರಾ,ಆರಿದ್ರಾ,ಪುನರ್ವಸು ಬಿರುಸಾಗಿ ಬರದೆ ತುಂತುರು ಆಗಿ ಹೋಯ್ತು . ಊರಾಗಿರೋ ಚರಂಡಿ ನೀರೆ ಸರಿಯಾಗಿ ಕೊಚ್ಚಿಕೊಂಡು ಹೋಗಿಲ್ಲ ಈ ಮಳೆಗೆ ಹೋಗು ಈ ಸಲ ಮುಂಗಾರು ಮಳೆಗೆ ಬೆಳೆ ತೆಗೆದಂಗೆ  ಐತ್ಹೆ , ಆ ಸಿದ್ದೇಶ್ವರನ ದಯಾ ಇದ್ರೆ ಹಿಂಗಾರನಾಗೆ ಅವರೇನೂ ,ತೊಗರಿನೋ ಬೆಳ್ಕೋ ಬೇಕು ಅಷ್ಟೇ . ಮನೆಗೆ ತಿನ್ನಾಕೆ ಅಷ್ಟು ದವಸ ಆದರು ಆಯ್ತದೆ. ಎರಡು ಬೀಡಿ ಬೂದಿಯಾಗಲು ಬಿಡದೆ ಕುಡಿದ ಪರಮೇಶ , ಬತ್ತಿನಿ ತಾತ ದನ ಕರುಗೆ ಹುಲ್ಲು ಹಾಕಬೇಕು ಅಂಥ ಎದ್ದು ಹೊರಟ .

ಊರಲಿದ್ದ ಮನೆಗಳಲ್ಲಿ ದವಸ ಮುಗಿಯುವ  ಹಂತಕ್ಕೆ ಬಂದು , ಶೆಟ್ಟರ ಅಂಗಡಿಗೆ ಸಾಲಕ್ಕೆ ಮೊರೆ ಹೋಗಿದ್ದ ದೃಶ್ಯ ನೋಡಿ ಸಿದ್ದಪ್ಪನ ಮನ ಮಣಿದಿತ್ತು. ಇದ್ದಕಿದ್ದಂತೆ ಪುಷ್ಯ ಮಳೆಯ ಜೊತೆ ಊರಿಗೆ ಬಂದ ಶಾಸಕ ಶಿವಪ್ಪ , ನಿಮಗೆಲ್ಲ ಸರ್ಕಾರ ದಿಂದ  ಕಡಿಮೆ ಬೆಲೆಗೆ  ಬೀಜ ಕೊಡುಸ್ತೀನಿ ಎಂದು ಆಶ್ವಾಸನೆ ಕೊಟ್ಟು ಹೋದ.ಮಳೆಯ ಜೊತೆ ಶಾಸಕನ ಮಾತಿಗೆ ಊರಿನ ಜನರೆಲ್ಲಾ ಖುಷಿಯಾದರು. ಆಶ್ಲೇಷ ಮಳೆಯ ಸಮಯಕ್ಕೆ ಜನ ನೆಲ ಹದ ಮಾಡಿ , ಜೋಳ ಭೂಮಿಗೆ ಬಿಡಲು ಶಾಸಕ ಕಳಿಸುವ ಬೀಜಗಳ ದಾರಿ ನೋಡ ತೊಡಗಿದರು .ಮಖೆ ಮಳೆ ಆಗದೆ ಹೋದರು ಜನ ಕುಂದದೆ ಬೀಜದ ನೀರಿಕ್ಷೆ ಯಲ್ಲಿದರು.
ಉತ್ತರ ಮಳೆಯ ವೇಳೆಗೆ ಊರಿನ ಶಾನಭೋಗರ ಮನೆಗೆ ಒಂದು ಉತ್ತರ ಬಂದಿತ್ತು , ಪತ್ರದಂತೆ ಊರಿಗೆಲ್ಲ ಶಾನಭೋಗ  "ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನಿಂದ ಹಳೆ ಮುಖ್ಯ ಮಂತ್ರಿಗಳು ತಂದ "ಧನ ಬೀಜ " ಯೋಜನೆಯನ್ನು ಹೊಸ ಮುಖ್ಯ ಮಂತ್ರಿಗಳು ಕೈ ಬಿಟ್ಟಿದ್ದಾರೆ" ಎಂದು ಡಂಗುರ ಸಾರಿಸಿದರು.ಹಸ್ತ,ಚಿತ್ತ ಮಳೆ ಜೋರಾಗಿ ಬಂದು ಹಸನು ಮಾಡಿದ್ದ ಭೂಮಿಯಲ್ಲಿ ಊರಿನ ಜನರಲ್ಲೇ ಕಾಂಗ್ರೆಸ್ ಗಿಡಗಳನ್ನೇ ಹಿಂಗಾರು ಮಳೆಗೆ ಬೆಳೆದರು .

--
ಗಂಗರಾಜು . ಕು. ಸಿ 

Wednesday, July 4, 2012

ನುಡಿ ನಡೆ

ಜಗವ ತೊಳೆವ ಜನರು ನಾವು
ಜಪವ ತೊರೆದು ಜೀವ ನವಕೆ ಜಯಿಸುವ

ನಡೆದ ದಾರಿ ಮರೆತು ನಾವು
ನಡತೆ ದಾರಿ ಹಿಡಿಯುವ

ಬಡವ ಬಲ್ಲಿದ ಬೇಧ ಮರೆತು
ಬವಣೆ ಮಾರ್ಗವ ಹಿಡಿಯುವ

ಮಾತು ಮನವ ಹಿಡಿಯಲಿಟ್ಟು
ಮೌನ ಪಥಕೆ ಧ್ವನಿಸುವ

ಮರೆತ ದುಃಖವ ನೆನವುಗೊಡದೆ
ನೆನೆವ ಸುಖಕೆ ಶ್ರಮಿಸುವ

ರಾಗ ದ್ವೇಷವ ಬದಿಯಲಿಟ್ಟು
ಸ್ನೇಹ ಸಂಯಮ ತೋರುವ

ಬದುಕು ಕಲಿಸೋ ಪಾಠದಲ್ಲಿ
ಆಟವಾಡಿ  ಕಲಿಯುವ , ಗೆಲ್ಲುವ

--
ಗಂಗರಾಜು .ಕು.ಸಿ .

Tuesday, July 3, 2012

ಸಣ್ಣ ವ್ಯಥೆ - 20

ಸೂರ್ಯನು ಅಂದು ಬೇಗನೆ ಭುವಿಯ ಬೆಳಗಲು ಬಂದಿದ್ದ ಹಾಗೆ ಭಾಸವಾಗುತಿತ್ತು. ಎದ್ದವನೇ ಕೆರೆಯ ಕಡೆ ಹೋಗಿ ಹಿಂದಿರುಗುವಾಗ  ದಾರಿಯಲ್ಲಿ ಬೆಕ್ಕು ಬಲದಿಂದ ಎಡಕ್ಕೆ ಕೆರೆಯ ಕಡೆ ನಡೆದಿತ್ತು. ಸರಿ ಹಾಳಾಗಿ ಹೋಗಲಿ ಎಂದು ಐದು ನಿಮಿಷ ಅಲ್ಲೇ ನಿಂತಿದ್ದೆ , ನನ್ನ ದುರದೃಷ್ಟಕ್ಕೆ  ನಾ ನಿಂತಿದ್ದ ದಾರಿಯಲ್ಲಿ ಖಾಸಿಮನ ಲಾರಿ ಕೂಡ ಬಂತು ನಾನು  ಪಕ್ಕಕ್ಕೆ ಸರಿದೆ ,ಆದರೆ ಲಾರಿ ಕೂಡ ಅಲ್ಲೇ ಇದ್ದ ಕೆಸರು ಗುಂಡಿಗೆ ತನ್ನ ಚಕ್ರವ ಸರಿಸಿ ನನ್ನ ಮೈ ಮೇಲೆ ಕೆಸರಿನಿಂದ ಉಗುಳಿತು. ಮನೆಗೆ ಬಂದು ಸ್ನಾನ ಮಾಡಲು ಹೋದರೆ  ಖಾಯಿಸಿಟ್ಟ ನೀರು ತಂಡಿಯಾಗಿತ್ತು , ಮತ್ತೆ ಬಿಸಿ ಮಾಡಿ ಕೊಡೆಂದು
ಗೌರಿಯ ಕೇಳಿದರೆ ಬೆಳಗ್ಗೆಯೇ ಬೈಗುಳವಾಗುತ್ತದೆ ಎಂದು ಯೋಚಿಸಿ ಅದೇ ನೀರಿನಲ್ಲೇ ಸ್ನಾನವ ಮಾಡಿದೆ.
ಆತುರಾತುರವಾಗಿ ತಿಂಡಿ ತಿಂದು ಆಫಿಸಿಗೆ ಹೊರಟೆ , ಮತ್ತೆ ಅದೇ ಬೆಕ್ಕು ಕೆರೆ ಕಡೆ ಇಂದ ಅಡ್ಡ ಬಂತು , ಮತ್ತದೇ ಚಾಳಿಯ ಮುಂದುವರೆಸಿ ಐದು ನಿಮಿಷ ನಿಂತೆ , ಎರಡನೇ ಬಸ್ಸು ಕೂಡ ಮಿಸ್ ಆಗಿತ್ತು. ನಡೆದು ಆಫೀಸು ತಲುಪಿದಾಗ ಮಧ್ಯಾನದ ಊಟದ ಸಮಯವಾಗಿತ್ತು. ಊಟವ ಮುಗಿಸಿ, ಬಾಸ್ ಕರೆದರೂ ಎಂದು ಅವರ ಕೋಣೆಗೆ ಹೋದೆ ನನ್ನ ನೋಡಿ ಅವರು ಹೇಳಿದರು "ನನ್ನ ಹೆಂಡತಿಗೆ ಬೆಕ್ಕುಗಳೆಂದರೆ ಬಹಳ ಪ್ರೀತಿ, ನಿಮ್ಮ ಊರಿಂದ ನಾಳೆ ಒಂದು ಬೆಕ್ಕು ತಂದು ಕೊಡುವೀರ !" ,ನಾನು ತಲೆಯಾಡಿಸಿ ಬೆಳಗಿನ ಅರ್ಧ ದಿನದ ರಜೆ ಬರೆದು , ನನ್ನ ಕೆಲಸದ ಜಾಗಕ್ಕೆ ಬಂದೆ ಹಾಗೆ ನೆಗಡಿಯು ಬಂದಿತ್ತು.

--
ಗಂಗರಾಜು.ಕು.ಸಿ .

Wednesday, June 27, 2012

ಸಣ್ಣ ವ್ಯಥೆ -19

ಹೇಗೋ ಕಷ್ಟ ಪಟ್ಟು ಡಿಗ್ರಿ ಮುಗಿಸಿದ ಆಲೋಕನಿಗೆ ಒಂದು ಕೆಲಸ ಗಿಟ್ಟಿಸಿಕೊಳ್ಳುವಷ್ಟು ಸಾಮರ್ಥ್ಯ ದೊರೆತಿತ್ತು .ಹಾಗೆಯೇ ಮೈಸೂರಿನಲ್ಲಿ ಗಿಟ್ಟಿಸಿಕೊಂಡ.ಆದರೆ ಅವನು ಎಂದು ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡವನಲ್ಲ ಹಾಗೆಂದು ಬೇರೆಯವರ ಮಾತುಗಳನ್ನು ಕೇಳುವವನು ಅಲ್ಲ. ಸುಮ್ಮನೆ ಕಿರಿ ಕಿರಿ ಮಾಡಿಕೊಂಡು
ಮನದಲ್ಲೇ ಕಲಸಿ ಹೋಗುವುದು ಅವನ ದುರಾಭ್ಯಾಸ . ಹಾಗಾಗಿ ಉದ್ಯೋಗದ ವಿಷಯದಲ್ಲೂ ,ಹಾರಿ ಹಾರಿ ಸುಸ್ತಾಗಿ ಮರದ ಕೊಂಬೆ ಹುಡುಕುವ ಕಾಗೆಯಂತೆ ಅವನ ಮನಸ್ಸು ಅತಂತ್ರ ಸ್ಥಿತಿಯಲ್ಲಿತ್ತು.
ಅಲೋಕನ ಮನೆಯಲ್ಲಿ ಕಸ ಗುಡಿಸುವವನ ಮಗನಿಂದು ಹಿಡಿದು ,ಊರಿನ ಪಟೇಳಪ್ಪನ ಎರಡನೇ ಹೆಂಡತಿಯ ತಮ್ಮನ ಸಲಹೆಯೂ ಪಡೆದಿದ್ದ.ಅಂತು ಏನೋ ನಿರ್ಧರಿಸಿ ಮೈಸೂರಿಗೆ ಹೋದ , ಆದರೆ ರಿಪೋರ್ಟ್ ಆಗಬೇಕಾದ ವೇಳೆಗೆ ಸರಿಯಾಗಿ ಒಂದು ತಿಂಗಳ ನಂತರ ಹೋಗಿ ,ಮೈಸೂರಿನ ಮೃಗಾಲಯದಲ್ಲಿ ಹೊಸದಾಗಿ ಕಾಂಬೋಡಿಯ ದೇಶದಿಂದ ತರಿಸಿದ್ದ ಮಂಗನನ್ನು ನೋಡಿ ಬಸ್ಸು ಹತ್ತಿದ.

--
ಗಂಗರಾಜು .ಕು.ಸಿ.

Wednesday, June 13, 2012

ಸಣ್ಣ ವ್ಯಥೆ -18

ಮರೆತ ಹಾಡು ಅಂದು ಯಾಕೋ ಪದೆ ಪದೆ ಮನದಲ್ಲಿ ಸುಳಿಯುತ್ತಲೇ ಇತ್ತು , ಕೆಲವೊಮ್ಮೆ ತುಟಿಗಳಲ್ಲಿ ಜಿನುಗಿತ್ತು ಕೂಡ .ಆ ಹಾಡು ನಾನು ಜೀವಿಸಿದ ಕೆಲವು ಅಮೂಲ್ಯ ಕ್ಷಣಗಳ ಕನ್ನಡಿ. ಅಂದು ಕೂಡ ಅಷ್ಟೇ, ಅಮ್ಮ ಹೇಳುತ್ತಲೇ ಇದ್ದಳು ಸುಮ್ಮನೆ ಆತುರದಲ್ಲಿ ನಿರ್ಧಾರ ತಗೋ ಬೇಡ , ಮುಂದೆ ನೀನೆ ಅನುಭವಿಸಬೇಕಾಗುತ್ತೆ ಅಂಥ, ಆದರೆ ನಾನು ನನ್ನ ಮೂಗಿನ ನೇರಕ್ಕೆ ಹೋದೆ.ಆ ಅನುಭವ ಮತ್ತೆ ಈ ಹಾಡಿನ ರೂಪದಲ್ಲಿ ಇಂದು ಉದ್ಧ್ಗಾರಗೊಳ್ಳುತ್ತಿದೆ. ಹಾಂ ಆ ಹಾಡು "ಏನೋ ಮಾಡಲು ಹೋಗಿ , ಏನು ಮಾಡಿದೆ ನೀನು ..." .ಇಂದು ಏನು ತಪ್ಪು ಮಾಡ ಹೊರಟ್ಟಿದ್ದೇನೆ ಎಂದು ಮನದಲ್ಲೇ ಲೆಕ್ಕ ಹಾಕುವಾಗ ಯಾಕೋ ಆಲೋಚನೆಗಳು  ಹಾದಿ ತಪ್ಪುವ ಲಕ್ಷಣಗಳು ಕಂಡವು.
ತಕ್ಷಣ ಪಕ್ಕದಲ್ಲೇ ಮಲಗಿದ್ದ ನನ್ನ ಹೆಂಡತಿ  ತಲೆಗೆ  ಒಂದು ಮೊಟಕಿ  , "ಸಾಕು ಲೈಟ್ ಆಫ್ ಮಾಡಿ ಬಿದ್ಕೋಳಿ. ಬೆಳಗ್ಗೆ ಇಂದ ಕೆಲಸ ಇಲ್ದೆ ಸೋಮಾರಿ ಬಿದ್ರೆ, ನಿದ್ರೆ ಎಲ್ಲಿ ಬರುತ್ತೆ" .

-- ಗಂಗರಾಜು.ಕು.ಸಿ.

Thursday, March 8, 2012

ಸಣ್ಣ ವ್ಯಥೆ -17

is IT? 
----------

ನಾವೆಲ್ಲಾ ಅಂದು ಗಾಂಧೀ ಜಯಂತಿಯ ಅರ್ಧ ದಿನದ ರಜೆಯನ್ನು ಲಗೋರಿ ಆಟದಲ್ಲಿ ಕಳೆಯುತ್ತಿದೆವು. ನಮ್ಮೆಲ್ಲರ ಚಿತ್ತ ಅಲ್ಲಿ ಚೆಲ್ಲ ಪಿಲ್ಲಿಯಾಗಿದ್ದ ಕಲ್ಲುಗಳ ಮೇಲೆ ಮತ್ತು ಚೆಂಡಿನ ಹಿಂಬಾಲಕನ ಮೇಲೆ ನೆಟ್ಟಿತ್ತು.
ತತ್ಕ್ಷಣಕ್ಕೆ ನನ್ನ ಗಮನ ಆಕಾಶಕ್ಕೆ ಸೂರೆ ಇಟ್ಟಿತು. ಉಳಿದವರ ಕಣ್ಣು ಕೂಡ ನನ್ನ ಕಣ್ಣ ಹಾಗೆ ಆಗಸಕೆ ನೋಟ ಬೀರಿದವು.ಸೂರ್ಯನ ಕಿರಣಗಳ ಸೆರಗಿನಲ್ಲಿ , ಮೋಡಗಳ ಹೊದಿಕೆಯಲ್ಲಿ ಒಂದು ವಿಮಾನ ನುಸುಳಿಕೊಂಡು ಹೋಗುತಿತ್ತು. ಸರಕ್ಕನೆ ವೇಗವಾಗಿ ಬಂದ ಚೆಂಡು ನನ್ನ ಬೆನ್ನಿಗೆ ಬಡಿಯಿತು, ಎಲ್ಲರೂ ನನ್ನ ಹೆಸರಿಡಿದು ಕೂಗಿದರು.

"ರೀ, ಮ್ಯಾನೆಜೆರ್ ಕರೀತಾ ಇದಾರೆ ", ಅಂಥ ಶ್ವೇತ ಬೆನ್ನು ತಟ್ಟಿದಳು .ವರ್ತಮಾನಕ್ಕೆ ಬಂದ ಮನಸ್ಸು ಭ್ರಾಂತಿಯ ಚಿತ್ರವನ್ನು ಅವಳ ಮುಂದಿಟ್ಟವು .
ಇವನು ಉದ್ದಾರ ಆಗಲ್ಲ ಎಂದು ಜರಿದು ತನ್ನ ಕಂಪ್ಯೂಟರ್ ಪರದೆಯಡೆಗೆ ಪಲಾಯನಗೈದಳು.

ಎದ್ದವನೇ ಮುಖಕ್ಕೆ ನೀರು ಎರಚಿಕೊಂಡು, ಬೋಳ್ದಲೇಯ 16 ತಲೆಗೂದಳುಗಳನ್ನು ಸರಿಪಡಿಸಿಕೊಂಡು ಮ್ಯಾನೆಜೆರ್ ಕಾಂ ಚೋರ್ ಕಾರ್ತಿಕನ ರೂಮಿನ ಕಡೆಗೆ ನಡೆದೆ.
ಯಾವಾಗಲು ತಡವಾಗಿ ಬರುವ ಕಾರ್ತಿಕ ಅಂದು ಲಂಚ್ ಗಿಂತ ಮುಂಚೆಯ ಬಂದು ಲ್ಯಾಪ್ಟಾಪ್ ಗುಂಡಿಗಳನ್ನು ಒತ್ತುತಿದ್ದ ದೃಶ್ಯ ನೋಡಿ , ಆಶ್ಚರ್ಯ ಮತ್ತು ಸಂತೋಷ ಕೂಡ ಆಯಿತು.
ಬಾಗಿಲು ತೆಗೆದುಕೊಂಡು ಹೊರಬಂದ ವಿಘ್ನೇಶ್ ಮೂರ್ತಿಯ ಮುಖದಲ್ಲಿ ಎಳ್ಳೆಣ್ಣೆಯ ಗುಣಗಳು ಕಾಣತೊಡಗಿ ,
"ಏನಾಯ್ತುರಿ ?", ಅಂಥ ಅಂದೇ ,
ಅದಾಕೆ ಆ ಅಸಾಮಿ , ಬೇಗ ಕಂಪನಿ ಚೇಂಜ್ ಮಾಡಬೇಕ್ರಿ ಅಂಥ , ತನ್ನ ಬಳ್ಳಾರಿ ಶೈಲಿಯ ಬೈಗುಳದಲ್ಲಿ ಕಾಂ ಚೋರ್ ಕಾರ್ತಿಕನ ಕುಟುಂಬದ ಮೇಲೆ ತೀವ್ರ ವಾಗ್ದಾಳಿ ನಡೆಸಿ
ಕಾಲ್ಕಿತ್ತ .ವಿಘ್ನೇಶ್ನ ಸ್ಥಿತಿ ನೋಡಿ ನನಗೂ ಏನು ತಿಳಿಯಲಿಲ್ಲ . ಇವನ್ದು ಇದ್ದಿದ್ದೆ ಅಂದುಕೊಂಡು ಅವನ ಭಾಷೆಯಲ್ಲೇ ಬ್ಯೆದುಕೊಂಡು ಕಾಂ ಚೋರ್ ಕಾರ್ತಿಕನ ರೂಮಿಗೆ ನುಸುಳಿ , ಹಲ್ಲು ಗಿಂಜಿ 
"ಹಾಯ್ ಕಾರ್ತಿಕ್ ",ಅಂದೇ .

ಆ ಗುಣಿ ಬಿದ್ದ ಕಣ್ಣುಗಳನ್ನು ಅಗಲಿಸಿ , ಬನ್ನಿ ಅಂಥ ಅಲ್ಲಿದ್ದ ಕುರ್ಚಿಯ ಕಡೆ ಕೈ ತೋರಿದ.

"ಏನ್ ಕಾರ್ತಿಕ್ , ಬರೋದಕ್ಕೆ ಹೇಳಿದ್ರಂತೆ "
ಅದಕ್ಕೆ ಅವನ ಹಳೆ ಚಾಳಿಯಾದ ಬಿಸಿನೀರನ್ನು ತುಟಿಗೇರಿಸಿ,
"ಎಸ್, ಒಂದು ಅಪ್ಡೇಟ್ ಇದೇ".
"ಎಸ್ ಹೇಳಿ "
"ನಿಮ್ಮ ಆನ್ ಸೈಟ್ ಟ್ರಿಪ್ ಕ್ಯಾನ್ಸಲ್ ಆಗಿದೆ , ಯು.ಎಸ್ ಅಲ್ಲಿ ವೀಸಾ ಪ್ರಾಬ್ಲಮ್ ಆಗಿದೆ "
ದಿಗ್ಬ್ರಾಂತನಾದ ನನಗೆ ವಿಜ್ಞೆಶನು ನನ್ನ ಬಳಿ ಆಡಿದ ,ಅಷ್ಟು ಬೈಗುಳಗಳ ಜೊತೆಗೆ ನನ್ನ ಒಂದಷ್ಟು ಬೈಗುಳಗಳು ಮನಸ್ಸಿನಲ್ಲೇ ಕಾಂ ಚೋರ್ ಕಾರ್ತಿಕನ ರೂಪಕ್ಕೆ ಉಗುಳು ಎರಚಿದವು.
"ಒಹ್ ಇಸ್ ಇಟ್ , ಆದ್ರೆ ನಾನು ಬಹಳ ಚೆನ್ನಾಗಿ ಕೆಲಸ ಮಾಡಿದ್ದೇನೆ , ಮತ್ತೆ ನನ್ನ ಕೆಲಸ ಈಗ ಕಸ್ಟಮರ್ ಗೆ ಬೇಕಾಗಿದೆ , ಈಗ ವೀಸಾ ಇಲ್ಲ ಅಂದ್ರೆ ತುಂಬಾ ಪ್ರಾಬ್ಲಮ್ ಆಗುತ್ತೆ "
ಅವನು , ಏನೋ , ನನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡವನ ಹಾಗೆ ,
"i understand , these things are not in our hands. But your work will be deeply apperciated by company. keep up the good work" , ಎಂದು ಸೋಪು ಹಾಕತೊಡಗಿದ.
ದುಃಖದ ಊರಿಗೆ ಹತ್ತಿರವಾಗಿದ್ದ ನನ್ನ ಕಣ್ಣುಗಳ ಸೆಲೆ , ನನ್ನ ಹಳೆ ಆಸೆಗಳು ಬೂದಿಯಾಗಿರುವ ಸಮುದ್ರಕ್ಕೆ ನುಗ್ಗಿದವು .
ನಾನು "ಇಟ್ಸ್ ಓಕೆ " ಎಂದು , ಅಲ್ಲಿಂದ ಎದ್ದೆ .
ಅರ್ಧ ದಿನ ರಜೆ ತೆಗೆದುಕೊಂಡು , ಮನೆಗೆ ಬಂದು ಮಲಗಿದೆ .

ಮನಸ್ಸು ಕನಸ್ಸಿನ ಮನೆಗೆ ಓಡಿತು .
ಅದೇ ಲಗೋರಿ ಆಟದ ಕನಸ್ಸು ,ಮ್ಯಾಟನಿ ರೂಪದಲ್ಲಿ ಕಂಡಿತು.
ಆದ್ರೆ , ಈಗ ನನ್ನ ಬೆನ್ನಿಗೆ ಬಡಿದ ಚೆಂಡಿನ ಮುಖದಲ್ಲಿ ಕಾಂ ಚೋರ್ ಕಾರ್ತಿಕನ ರೂಪ ನಗುತ್ತಿತ್ತು.

-- ಗಂಗರಾಜು.ಕು.ಸಿ.

Wednesday, March 7, 2012

ಸಣ್ಣ ವ್ಯಥೆ -16


ಮಲ್ಯ 2011 
-------------
ಹಾರಿ ಬಿಟ್ಟೆ ವಿಮಾನ 
ಏರಬಲ್ಲಿರ ,ನೀವು ಏರಬಲ್ಲಿರಾ ||

ಹಣವೇ ಎಲ್ಲಾ ನನ್ನ ಬಳಿ 
ಸಂಗಡಕ್ಕೆಲ್ಲಾ ಸುಂದರಿಯರು 
ಮುಂಗಡಕ್ಕೆಲ್ಲಾ ಮಂತ್ರಿವರ್ಯರು 
ಸತ್ಯ ನಶೆಯೇ ನಿತ್ಯ ದೆಸೆಯೂ ....







ಮಲ್ಯ 2012 
--------------
ಏರಿ ಬಿಟ್ಟೆ ವಿಮಾನ 
ಹಿಡಿಯಬಲ್ಲಿರ ,ನನ್ನ ಹಿಡಿಯಬಲ್ಲಿರಾ ||

ಹಣವು ಏಕೆ ನನ್ನ ಬಳಿ 
ಸರಿದರೆಲ್ಲ ಸುಂದರಿಯರು 
ಮಾತಿಗಿಲ್ಲ ಮಂತ್ರಿವರ್ಯರು
ಸತ್ಯ ಭಿಕ್ಷೆಯೇ ನಿತ್ಯ ಭೋಜ್ಯವೂ ...







ಕೊನೆಯ ಮಾತು
------------ 
ಮದ್ಯದ ದೊರೆಗೆ ಮದ 
ಕಟ್ಟಿಟ್ಟ ಬುತ್ತಿ ಖಾಲಿ 
ಬಚ್ಚಿಟ್ಟ ಬುಟ್ಟಿಯ ಖಯಾಲಿ 
ಶೋಕಿಗೆ ಮೊರೆ 
ಹಾಗಾಗಿ ಈಗ ಕೇವಲ ಶೋಕದ ದೊರೆ ||


-- ಗಂಗರಾಜು.ಕು.ಸಿ.