Friday, December 23, 2011

ಸಣ್ಣ ವ್ಯಥೆ -15

ನಿಂತ ನೀರಿದು ನಿಂತ ನೀರಿದು
ಹರೆಯ ಬಾಳು ಹೊರೆಯ ಹಾಗೆ 
ಒಲವ ಮರೆತು ಒಡಲ ಸುಖಕೆ 
ನಿಂತ ನೀರಿದು ನಿಂತ ನೀರಿದು ||ಪ||

ಕಲಿವ ಶಿಕ್ಷಣ ಊಟಕಂತೆ
ಕಲಿತ ವಿದ್ಯೆ ಆಟದಂತೆ
ನೆರೆಯ ಪ್ರೀತಿ ಪಾತ್ರಕಾಗಿ 
ಸ್ವಂತ ದೇಹ ತೊರೆವರಂತೆ ||ನಿಂತ||

ತಂದೆ ತಾಯಿಯ ಹೊರಗಿನವರು 
ತವರ ಬಾಳ್ವೆ ರುಚಿಸದವರು 
ಮೂರು ದಿನದ ಬದುಕಿನಲ್ಲಿ 
ಯಾರಿಗೂ ನಿಲುಕದೆ ಓಡ್ವರು||ನಿಂತ||

ಮೌನ ಮಂತ್ರ ಮರೆವಿಗೆ 
ಮಾತೇ ತಂತ್ರ ಇವರಿಗೆ 
ಅಳಿಸಿ ಹೋಗುವ ಬಾಳ್ವೆಯಲ್ಲಿ 
ಅಂಧಕಾರದಿ ಮೆರೆವರು ||ನಿಂತ||

ಹಣವೇ ಎಲ್ಲವು ಆಗಿದೆ 
ಸ್ನೇಹ ಸರಸವು ಮಾಯವು 
ಉಸಿರು ಉಸಿರಿಗೂ ಮಧ್ಯದಲ್ಲಿ 
ಸುಳ್ಳ ಹೇಳಿ ಜೀವಿಪರು ||ನಿಂತ|

-- ಗಂಗರಾಜು.ಕು.ಸಿ.

Wednesday, December 21, 2011

ಸಣ್ಣ ವ್ಯಥೆ -14

ದೂರ ದೂರಕೆ ,ತೀರದ ಆಚೆಗೆ 
ಬಾಲ್ಯವ ಮರೆತು , ದುಡಿಮೆಯ ಬಯಸಿ||

ಜನನವೇ ಇವರಿಗೆ ಮೃತ್ಯುವಾಗಿದೆ
ಸಲಹುವವರು ಸುಳಿವಿಲ್ಲದೆ ಸರಿದಿದ್ದಾರೆ
ಬದುಕ ಕಟ್ಟಲು ಬಯಕೆಗಳಿಲ್ಲ 
ಹೊತ್ತಿನ ತುತ್ತಿಗೆ ಹವಣಿಸುತ್ತಿದ್ದಾರೆ 

ಮರೆಯಲು ಇವರಲಿ ನೆನಪುಗಳಿಲ್ಲ 
ಸವಿಯಲು ಸುಂದರ ಸಂಜೆಗಳಿಲ್ಲ
ದಿನವು ಕಣ್ಣಿರಲಿ ಮಿಂದು 
ಕಂಠದಲಿ ದುಃಖವ ಮಿಡಿದಿಹರು 


ದಿನದ ಕೂಲಿಯೇ ಇವರ ಶಿಕ್ಷಣ
ಬೈಗುಳವೇ ಇವರಿಗೆ ಪಾಠ ಪ್ರವಚನ 
ಆಡಲು ಒಡನಾಡಿಗಳಿಲ್ಲ 
ಅಗುಳು ಲೆಕ್ಕಿಸಿ ಉಣ್ಣುವ ಬದುಕು 


ಹುಟ್ಟಿಸಿದ ಅಪ್ಪ ಸಾರಾಯಿ ಅಂಗಡಿಯ ಖಾಯಂ ಸದಸ್ಯ 
ಅಮ್ಮನೋ ಇನ್ನೊಂದು ಅನರ್ಥ ಶಿಶುವಿನ ಗರ್ಭಿಣಿ 
ದಾಯಾದಿಗಳೋ ದಿಕ್ಕು ದಿಕ್ಕಿಗೆ ಓಡಿ ಹೋಗಿದ್ದಾರೆ 
ನೆರಹೊರೆಯವರ ಮೆಚ್ಚಿನ ಸೇವಕನಾಗಿಹನು 

ಬಡತನವ ಬಣ್ಣಿಸಲು ಇವನೇ ಆಗಿಹನು 
ಇವನ ದಾಸ್ಯದ ದಣಿವ ತೀರಿಸಲು ಯಾರಿಹರು 
ಇಂತಹವರ ಬಾಲ್ಯಕ್ಕೆ ಬೆಳಕನಿರ್ವರು ಯಾರು
ನೆಲೆಯೇ ಇಲ್ಲದವರ ನಲಿವು ಹೇಗೆ 
ಬಾಲ್ಯವೇ ನೀನೇಕೆ ಈ ಮಕ್ಕಳಿಗೆ ಸುಂದರವಾಗಿಲ್ಲ ?

ದೂರ ದೂರಕೆ ,ತೀರದ ಆಚೆಗೆ 
ಬಾಲ್ಯವ ಮರೆತು , ದುಡಿಮೆಯ ಬಯಸಿ||

-- ಗಂಗರಾಜು.ಕು.ಸಿ

Friday, December 9, 2011

ಸಣ್ಣ ವ್ಯಥೆ -13

ಅಂದು ಸೂರ್ಯೋದಯ ಕೊಂಚ ತಡವಾಗಿಯೇ ಆದ ಹಾಗೆ ತಿಮ್ಮನಿಗೆ ಅನ್ನಿಸಿತು,ಎದ್ದವನೇ ಗೋ ಶಾಲೆಗೆ ಹೋಗಿ ಬಸಪ್ಪನ ಕಾಲಿಗೆ ಬಿದ್ದು ,ಅಮ್ಮಿ ಮಾಡಿದ್ದ ಇಟ್ಟು ತಿಂದು ಮಡಿಕೆ ಕಟ್ಟಿದ.ಎಂದೂ ಟೈಮ್ ಗೆ ಬಾರದ ಉದಯ ರಂಗ ಬಸ್ಸು ಪೂಮು ಪೂಮು ಎಂದು ಸದ್ದು ಮಾಡುತ್ತಾ ಧೂಳು ಎಬ್ಬಿಸಿಕೊಂಡು ಪಟೇಲರ ಮನೆ ಮುಂದಿನ ಖಾಲಿ ಜಾಗದಲ್ಲಿ ನಿಂತಿತು.ತಿಮ್ಮ ಚುರಾಕಾಗಿ ಮೊದಲ ಸಾಲನ್ನು ಚಕ್ಕನೆ ಉತ್ತು ಬಿಟ್ಟು , ಎರಡನೇ ಸಾಲಿಗೆ ಅಣಿಯಾಗುತ್ತಿದ್ದ.ಬಸ್ಸಿನಿಂದ ಇಳಿದ ಟಪಾಲಪ್ಪ , ನೇರವಾಗಿ ಪಟೇಲಪ್ಪನ ಮನೆಗೆ ನುಗ್ಗಿದ . ತಿಮ್ಮನ ಮಕ್ಕಳು ಅಮ್ಮಿ ಮಾಡಿದ ಅದೇ ಇಟ್ಟನ್ನು ನುಂಗಿ, ಹರಿದ ನಿಕ್ಕರಿಗೆ ಪಿನ್ ಹಾಕಿಕೊಂಡು, ಕೆರೆ ಪಕ್ಕದ ಈರಪ್ಪನ ಗುಡಿಗೆ ಸ್ಲೇಟ್ ಹಿಡಿದು ಕೊಂಡು ಹೋದರು .ಟಪಾಲಪ್ಪ ಕೊಟ್ಟ ಉತ್ತರವನ್ನ ಓದಿದ ಪಟೇಲಪ್ಪ, ಹುಂಜನಿಗೆ ಊರಿನ ಎಲ್ಲರಿಗು ತಕ್ಷಣ ಬುಲಾವ್ ಕೊಡಲು ಹೇಳಿದ. ತಿಮ್ಮ ಅಷ್ಟು ನೆಲವನ್ನು ಹಸನು ಮಾಡಿ , ಬದಿಗಳಲ್ಲಿ ಬೆಳೆದ ಕಾಂಗ್ರೆಸ್  ಗಿಡಗಳನ್ನು ಕೀಳ ತೊಡಗಿದ್ದ . 
ಊರಿನ ಹಿರಿಯರೆಲ್ಲ ಪಟೇಲಪ್ಪನ ಮನೆ ಮುಂದೆ ಸಭೆ ಸೇರಿದರು. 
"ಇನ್ನು ಮ್ಯಾಲೆ ನಮ್ಗೆ ಸರ್ಕಾರ ಬೀಜ , ಗೊಬ್ಬರ ರಿಯಾಯಿತಿ ಧರದಲ್ಲಿ ಕೊಡಾಕಿಲ್ಲ" ಅಂಥ ಮಾತು ಮುಗಿಸಿದರು.
ತಿಮ್ಮ ಎಷ್ಟು ಕಿತ್ತರು ಕಾಂಗ್ರೆಸ್ ಗಿಡಗಳು ಮಾತ್ರ ನೆಲಸಮವಾಗಲಿಲ್ಲ.

--
ಗಂಗರಾಜು .ಕು.ಸಿ.

Thursday, December 1, 2011

ಸಣ್ಣ ವ್ಯಥೆ -12

ಈ ದಿನಕೆ ಇವು ಸೂಕ್ತ ಎನಿಸಿ ಬರೆದಿದ್ದೇನೆ ,

1) ಹಸಿದ ದೇಹಕೆ 
ಉಸಿರ ಬೆರೆಸುವ ನಲ್ಲೆಯ ಕನಸು 
ನಲ್ಲೆಯು ಸಿಗದೇ 
ಉಸಿರ ಬೆರೆಸಲು ಪರ ಸತಿಯ ನನಸು

2) ಹುಚ್ಚು ಮಗನಿಗೆ
ಮುಚ್ಚು ಮರೆ ಇಲ್ಲ 
ಮೆಚ್ಚಿಸಲು ಮಡದಿ ಇಲ್ಲ
ಬೀಸಿದನು ಊರ ವೈಶ್ಯೆಯ ಸಂಗ 

3) ಕಾದೂ ಕಾದು
ವಿರಹಕೆ ಕರಗಿ 
ಗೂಡ ಸೇರಲು ಹಪಿಸಿ 
ಹೊಸಲು ದಾಟಿದ 

--
ಗಂಗರಾಜು .ಕು.ಸಿ