Friday, August 31, 2012

ಸಣ್ಣ ವ್ಯಥೆ 25 (ಶೂನ್ಯ )

ವಾನ ಪ್ರಸ್ಥದಲ್ಲಿ ಹಾಯಾಗಿ ಕಾಲ ಕಳೆಯಲು ಸುಂದರ ನೆನಪುಗಳನ್ನ ನಿಮ್ಮ ವಯಸ್ಸಿನಲ್ಲಿ ಅಣಿ ಮಾಡಿಕೊಳ್ಳಿ ಎಂದು
ಅಂದಿನ ಆಕಾಶವಾಣಿಯಲ್ಲಿ ಕೇಳಿದ ತಕ್ಷಣ ರಂಗಜ್ಜನ ಕಣ್ಣಾಲಿ ಚಳಿಗಾಲದ ಮಂಜು ಸೂರ್ಯನ ತಾಪಕೆ ಹರಿಯುವಂತೆ ಇಳಿಯ ತೊಡಗಿತು.ಹುಟ್ಟುವಾಗಲೇ ತಂದೆಯ ಕಳೆದುಕೊಂಡು ಆಮೇಲೆ ತಾಯಿ ಕೂಡ ಪ್ಲೇಗ್ ಮಾರಿಗೆ ತುತ್ತಾಗಿ ಅಜ್ಜಿಯ ಲಾಲನೆಯಲ್ಲಿ ಬೆಳೆದ ರಂಗಜ್ಜನಿಗೆ, ಯೌವನವಸ್ಥೆಯ ಹೊತ್ತಿಗೆ ಅನಾಥ ಸ್ಥಿತಿಗೆ ಬಂದು ಮುಂದೆ ಮಾರಿ ಗುಡಿ ಪಕ್ಕದ ತಿಮ್ಮಕ್ಕನನ್ನು ಮದುವೆಯಾದ.
ಸುಖ ಸಂಸಾರಕ್ಕೆ ೧೨ ಸೂತ್ರಗಳು ಆದರೆ ಇವರ ಸುಖ ಸಂಸಾರಕ್ಕೆ ೧೨ ಮಕ್ಕಳಾಗಿ ,ಅವರಲ್ಲಿ ೬ ಮಕ್ಕಳು ಹಸುಳೆಯಲ್ಲೇ ನೀಗಿಕೊಂಡರೆ ಉಳಿದ ೬ ರಲ್ಲಿ ೩ಬಾಲ್ಯಾವಸ್ಥೆಯಲ್ಲಿ ಬಾವಿಗೆ ಮತ್ತು ಕೆರೆಯ ಹರಿವಿಗೆ -ಆಳಕ್ಕೆ ಸಿಕ್ಕಿ ಮರೆಯಾದವು.ಉಳಿದ ೩ ಮಕ್ಕಳು ಅಷ್ಟಾಗಿ ಓದಲಿಲ್ಲವಾದರೂ ,ಆದರೆ ರಂಗಜ್ಜನ ಪಿತ್ರಾರ್ಜಿತ ಮತ್ತು ಮಾತ್ರಾರ್ಜಿತ ಆಸ್ತಿಯ ಮೇಲೆ ಅವಲಂಬಿತರಾಗಿದ್ದರು,
ರಂಗಜ್ಜ ಕೂಡ ತನ್ನ ಚೈತನ್ಯದ ದಿನಗಳಲ್ಲಿ ಬುಟ್ಟಿಯ ಗಂಟಿನಂತಿದ್ದ ಆಸ್ತಿಯನ್ನ ಒಂದು ಪಲ್ಲ ಗೋಣಿ ಚೀಲಕ್ಕೆ ಸರಿದೂಗಿಸಿದ್ದ.ಕುಂತು ತಿನ್ನುವವರು ಹೆಚ್ಚಾಗಿ ಆ ಪಲ್ಲ ಚೀಲ ಮತ್ತೆ ಗಂಟಾಗಿತ್ತು , ಆದರೆ ಆ ಗಂಟನ್ನು ಕಿತ್ತು ತಿನ್ನಲು ಮೂರು ಮಕ್ಕಳ ಹೆಂಡತಿಯರಿಗೆ ತಲಾ ನಾಲ್ಕು ಪಿಳ್ಳೆಗಳು ಇಲಿಗಳಂತೆ ಬೆನ್ನಿಗೆ ಬಿದ್ದಿದ್ದವು. ತನ್ನ ಯೋಚನಾ ಲಹರಿ ಇಷ್ಟೆಲ್ಲಾ ಅರಿದು ಅಳುವ ಹೊತ್ತಿಗೆ ಆಕಾಶವಾಣಿಯಲ್ಲಿ "ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು " ಎಂದು ಜೋರಾಗಿಕೇಳಿಸುತ್ತಿತ್ತು.
ಬಾಗಿಲಿಗೆ ಬಂದು ಅಜ್ಜ ಎಂದು ಕೂಗಿದ ಮೊಮ್ಮಗ "ಪ್ರಕಾಶ ನೀರಿಗೆ ಬಿದ್ದವ್ನೆ" ಎಂದು ಅಳತೊಡಗಿದ .
ಆಕಾಶವಾಣಿ ಕೂಡ "ವೇದಾಂತಿ ಹೇಳಿದನು, ಈ ಬದುಕು ಶೂನ್ಯ ಶೂನ್ಯ " ಎಂದು ಅಳತೊಡಗಿತು.

--
ಗಂಗರಾಜು .ಕು.ಸಿ

Friday, August 24, 2012

ಸಣ್ಣ ವ್ಯಥೆ -24


ಮೋಹನ ಹುಟ್ಟು ಕೋಪಿಷ್ಠ ಎಂದು ಅಮ್ಮನಿಗೆ ದೊಡ್ಡಮ್ಮ ಹೇಳುತ್ತಿದಳು . ಇವನಿಗೆ ಈಗ ಮದುವೆ ಬೇರೆ ಮಾಡ್ತಾ ಇದಿವಿ ಆ ಹುಡುಗಿನ ಚೆನ್ನಾಗಿ ನೋಡ್ಕೊತ್ಹಾನೋ ಇಲ್ವೋ ಎಂದು ತಮ್ಮ ಅಳಲನ್ನು ತೋಡಿಕೊಳ್ಳುವಾಗ , ಕೋಪ ಬಹಳ ಕೆಟ್ಟ ಗುಣ ಕ್ರಮೇಣ ಎಲ್ಲಾ ಸರಿ ಹೋಗುತ್ತೆ ಎಂದು ದೊಡ್ಡಮ್ಮನನ್ನು ಅಮ್ಮ ಸಂತೈಸಿದಳು. ಮೋಹನಣ್ಣನ ಮದುವೆಯಾದ ಹುಡುಗಿ ನನ್ನ ಕ್ಲಾಸ್ ಮೇಟ್ ಪೂಜಾ ಎಂದು ಮದುವೆಯ ದಿನವೇ ತಿಳಿದಿದ್ದು,ಫೋಟೋ ತೆಗೆಸಿಕೊಳ್ಳುವಾಗ ಮೋಹನಣ್ಣ ನನ್ನನ್ನು ತಮ್ಮ ಎಂದು ಪರಿಚಯಿಸಿದಾಗ ಪೂಜಾ ಹಲೋ ಎಂದು ಹೇಳಿ ,ಇವನು ನನ್ನ ಕ್ಲಾಸ್ ಮೇಟ್ ಎಂದು ಮೋಹನಣ್ಣನ ಕಡೆ ನೋಡಿ ನಗೆ ಚೆಲ್ಲಿದಳು.
ಪೂಜಾ ಬಹಳ ಸಂಭಾವಿತೆ ,ಶಾಂತ ಸ್ವಭಾವದವಳು ಮೇಲಾಗಿ ಎಲ್ಲರೊಂದಿಗೂ ಬಹಳ ಸಹನೆಯೊಂದಿಗೆ ತನ್ನ ಕೆಲಸಗಳನ್ನು ಮಾಡುವಂಥ ಹೆಣ್ಣು ಎಂದು ನನಗೆ ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ಅಭ್ಯಾಸ ಮಾಡುವಾಗ ತಿಳಿದುಕೊಂಡಿದ್ದೆ, ಇಂಥ ಶಾಂತ ಮೂರ್ತಿಗೆ ಈ ಕೋಪಿಷ್ಠ ಗಂಡನೇ ಎಂದು ನನ್ನ ಉಬ್ಬು ಕೂಡ ಏರಿತ್ತು.
ಮೋಹನಣ್ಣ ಉದ್ಯೋಗದ ನಿಮಿತ್ತ ಅಲ್ಲ ಶೀಘ್ರ ಹಣ ಸಂಪಾದನೆಯ ನಿಮಿತ್ತ ಅಮೆರಿಕಕ್ಕೆ ಹೋದ,ಹಾಗಾಗಿ ಪೂಜಾ ಕೂಡ ಅಮೆರಿಕದಲ್ಲೇ ಉಳಿದಳು.
ಸುಮಾರು ಐದು ವರ್ಷಗಳ ನಂತರ ನನ್ನ ಮದುವೆಗೆಂದು ಮೋಹನಣ್ಣ ತವರಿಗೆ ಹಿಂದಿರುಗಿದ ,ನನ್ನ ಜೀವನ ಕೂಡ ಪ್ರೀತಿ ಪ್ರೇಮಕ್ಕೆ ಹೊರತಾಗಿ ಇರಲಿಲ್ಲ ಹಾಗಾಗಿ ಅಮ್ಮ ಅಪ್ಪ ಏನಾದರು ಮಾಡಿಕೊ ಎಂದು ಮದುವೆಯ ಪ್ರಸ್ತಾವನೆಗೆ ಗೋಣು ಆಡಿಸಿದರು. ಮದುವೆಯ ದಿನ ಮೋಹನಣ್ಣ, ಪೂಜಾಳ ಪ್ರತಿ ಮಾತಿಗೂ ಆಗ
ತಾನೆ ಘಂಟೆ ಕಟ್ಟಿದ ಸೀಮೆ ಹಸದ ಕರುವಿನ ಹಾಗೆ ಗೋಣು ಆಡಿಸುತ್ತಿರುವುದನ್ನ ಕಂಡು ನಾನು ,ಅಮ್ಮ ,ದೊಡ್ಡಮ್ಮ ಸುಸ್ತು ಹೊಡೆದಿದ್ದವು.
ಮೂರ ದಿನದ ಮುಂಚೆ ಅಮ್ಮ ,ಪಕ್ಕದ ಮನೆಯ ಭಾಗ್ಯಮ್ಮನವರಿಗೆ ನಾನು ಬಹಳ ಕೋಪಿಷ್ಠ ,ಮದುವೆಯಾದ ಮೇಲೆ ಪ್ರೀತಿಸಿದ ಆ ಹುಡುಗಿಯನ್ನ ಹೇಗೆ ನೋಡ್ಕೊತ್ಹಾನೋ
ಎಂಬ ಮಾತು ಚಕ್ಕನೆ ಮನದಲ್ಲೇ ಹಾದುಹೋಯಿತು.

--
ಗಂಗರಾಜು.ಕು.ಸಿ

Wednesday, August 1, 2012

ಸಣ್ಣ ವ್ಯಥೆ -23

ಮೂಲೆ ಮನೆ ಮಾದೇವಿ ರಾಗಿ ಬಿಸುತ್ತ  ತನ್ನ ಹಳೆ ರಾಗದಲ್ಲಿ ಪಕ್ಕದಲ್ಲಿ ಕುಳಿತು ತಲೆ ಆಡಿಸುತ್ತಿದ್ದ ಮೊಮ್ಮಕ್ಕಳ ಮುಖ ನೋಡಿ ಕೊಂಡು "ನಿಂಬೀಯಾ ವನದ ಮ್ಯಾಗಳ ಚಂದ್ರಮಾ ಚೆಂಡಾಡಿದ.." ಎಂದು
ಹಾಡಿ ಕೆಲಸ ಮತ್ತು ಮಕ್ಕಳ ಆರೈಕೆ ಮಾಡುತ್ತಿದ್ದಳು.
ಬಾವಿ ಮನೆ ರಂಗಪ್ಪ ಮುಂಜಾನೆ ೩:೩೦ ಕ್ಕೆ ಸರ್ಕಾರ ಕೊಡುವ ಮೂರು ಫೆಸು ಕರೆಂಟಿಗೆ ,ಹೋದ ವರುಷ ಕೊರೆಸಿದ್ದ ಕೊಳವೆ ಬಾವಿ ಇಂದ ತನ್ನ ಹೊಲಕ್ಕೆ ನೀರು ಹಾಯಿಸಲು ಎದ್ದು ಹೊರಟ,ಇದ್ದ ಹಳೆ ಬಾವಿ ಬತ್ತಿ ಬಹಳಷ್ಟು ವರ್ಷಗಳೇ ಕಳೆದಿದ್ದವು , ಹೋದ ವರ್ಷ ಅಳಿಯ ಮಾದೇಶ  ಹೆಂಡತಿಯ  ಇಚ್ಚೆಯ ಮೇರೆಗೆ ಮಾವ ರಂಗಪ್ಪನಿಗೆ ಕೊಳವೆ ಬಾವಿ ಕೊರೆಸಿ ಕೊಟ್ಟಿದ್ದ.
ಕಂಡಕ್ಟರ್ ಸಿದ್ದಪ್ಪನ ಮಗ ಪರಮೇಶ ೯ ನೆ ತರಗತಿಯಲ್ಲಿ ಪಾಸಾಗಿ ಊರಿನಲ್ಲಿ ಅತಿ ಹೆಚ್ಚು ಓದಿದವನೆನಿಸಿಕೊಂಡಿದ್ದ, ಊರಿಂದ ಸುಮಾರು ೪ ಮೈಲಿ ದೂರ ಇದ್ದ ಹೊಸೂರಿನ ನ್ಯಾಷನಲ್ ಹೈ ಸ್ಕೂಲ್ ನಲ್ಲಿ
೧೦ ನೆ ತರಗತಿ ಗೆ ಹೋಗುತ್ತಿದ್ದ. ಸಂಜೆ ೬ ಗಂಟೆಗೆ ಹಟ್ಟಿಗೆ ಬರುವ ಪರಮೇಶ ಬುಡ್ಡಿ ದೀಪದಲ್ಲಿ ಓದಿ ಪ್ರತಿದಿನ  ಮುಂಜಾನೆ ೬ ಕ್ಕೆ ಮನೆ ಬಿಡುತಿದ್ದ, ಶಾಲೆಯ ಪ್ರಾರ್ಥನೆ ವೇಳೆಗೆ ಸೇರಿಕೊಳ್ಳಲು.
 "ರಾಜಧಾನಿ ಬೆಂಗಳೂರಿನಲ್ಲಿ ಜನ ವಿಧಾನ ಸೌಧದ ಮುಂದೆ ನಮಗೆ ತಡೆ ರಹಿತ ವಿದ್ಯುತ್ ಬೇಕೆಂದು ಜನರೆಟರ್ ಬೆಳಕಿನಲ್ಲಿ ಪ್ರತಿಭಟಿಸಿದರು" ಎಂದು ಊರಿನ ಶಾನಭೋಗ ಸುಬ್ಬಣ್ಣ ಬುಡ್ಡಿ ದೀಪದ ಬೆಳಕಿನಲ್ಲಿ ಪತ್ರಿಕೆ  ಓದಿಕೊಂಡ.

--
ಗಂಗರಾಜು.ಕು.ಸಿ