Monday, November 7, 2011

ಸಣ್ಣ ವ್ಯಥೆ - 11

ಅವನ ಮನಸ್ಸೇ ಹಾಗೆ , ಯಾವುದೇ ಒಳ್ಳೆಯ ವಿಚಾರ,ಕೆಲಸಗಳನ್ನು ಸಹಿಸಿಕೊಳ್ಳುತ್ತಿರಲಿಲ್ಲ. ಅವನು ಬೆಳೆದ ವಾತಾವರಣದಲ್ಲಿ ಎಲ್ಲಿ ದೋಷವಿತ್ತೋ ತಿಳಿಯದು.ಆದರೆ ಒಳ್ಳೆಯ ವಿಚಾರಗಳು ಅವನ ಮೂಗಿನ ನೇರಕ್ಕೆ ಅಸಮಂಜಸ ಮತ್ತು ಕೆಟ್ಟದಾಗಿ ಕಾಣುತ್ತಿದ್ದವು. ಒಮ್ಮೆ ನಮ್ಮ ಮನಸ್ಕನ ಸ್ನೇಹಿತ ತನ್ನ ವಿಚಾರಗಳನ್ನು ಮುದ್ರಿಸಿ ಹಂಚಿದನು ಮತ್ತು ಆ ವಿಚಾರಗಳು ಮನುಷ್ಯನ ಜೀವನವನ್ನು ಕನ್ನಡಿಯಂತೆ ಹಿಡಿಯಲು ಪ್ರಯತ್ನಿಸಿದ್ದವು . ಬಹಳ ಜನರಿಗೆ ಆ ವಿಷಯಗಳು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಣೆ ಯಾಗಿದ್ದವು. ಆದರೆ ನಮ್ಮ ಮನಸ್ಕನಿಗೆ ಈ ವಿಚಾರಗಳು ಯಾವು ಹಿಡಿಸಲಿಲ್ಲ ಮತ್ತು ಇವನ ವಾದವು ಬೇರೆಯದೇ ಆಗಿತ್ತು.
ಆದರೆ ನಮ್ಮ ಮನಸ್ಕ ಒಂದು ಹೆಜ್ಜೆ ಮುಂದೆ ಹೋಗಿ , ಸ್ನೇಹಿತನ ವಿಚಾರಗಳನ್ನು ಅಲ್ಲಗೆಳೆದನು,ದೂಷಿಸಿದನು ಮತ್ತು ಅಸಮಂಜಸ ಎಂದು ತನ್ನ ಪತ್ರಿಕೆಯಲ್ಲಿ ಬರೆದುಕೊಂಡ. ನಮ್ಮ ಹಿರಿಯರು ಕೂಡ ಮನಸ್ಕನ ವಾದವನ್ನು ಸರಿಯಾಗಿ ಪರಿಶೀಲಿಸದೆ ಒಪ್ಪಿಕೊಂಡರು ಮತ್ತು ಮನಸ್ಕನ ಸ್ನೇಹಿತನ ವಿಚಾರ ಧಾರೆಯ ಮೇಲೆ ನಿಷೇಧ ಹೇರಿದರು.
ಹಿರಿಯರು ಏಕೆ ಪರಿಶೀಲಿಸದೆ ನಿಷೇಧ ಹೇರಿದರು , ಇದೇ ತಪ್ಪಲ್ಲವೇ ಖ್ಯಾತ ಖಗೋಳ ಶಾಸ್ತ್ರಜ್ಞ ಕೋಪರ್ನಿಕಸ್ ನ ಸಾವಿಗೆ ಕಾರಣವಾಗಿದ್ದು?
ಪರರ ಮೇಲೆ ಕಲ್ಲೆಸೆಯುವಾಗ , ಮೊದಲು ನಾವು ಗಾಜಿನ ಮನೆಯಲ್ಲಿ ಇದ್ದೇವೆ ಎಂದು ಏಕೆ ಮರೆಯುತ್ತೇವೆ ?
ದಯವಿಟ್ಟು ಸೂಕ್ತವಾದ ಮಾಹಿತಿ ಇಲ್ಲದೆ ತೀರ್ಮಾನ ತೆಗೆದುಕೊಳ್ಳಬೇಡಿ ಮತ್ತು ಯಾರನ್ನು ನೋಯಿಸಬೇಡಿ.

- ಗಂಗರಾಜು.ಕು.ಸಿ.

Friday, November 4, 2011

ಸಣ್ಣ ವ್ಯಥೆ - 10

ಆ ಊರಿಗೊಬ್ಬ ಕವಿಯಿದ್ದ, ಆ ಕವಿಗೆ ಅವನ ಹಳೆಯ ನೆನಪುಗಳೇ ಕಾವ್ಯ ವಸ್ತು. ಆ ನೆನಪಿನಂಗಳದಲ್ಲಿ ನಮ್ಮ ಕವಿಯ ಕವಿತೆಗಳು ಮೀಯುತ್ತಿದ್ದವು."ನೆನೆವ ಮನ" ಎಂಬ ಕವನ ಸಂಕಲನವನ್ನು ಆ ಊರಿನ ಹಿರಿಯರು ಸೇರಿಕೊಂಡು ಪ್ರಕಟಿಸಿದರು ಮತ್ತು ಹಲವಾರು ಬಾರಿ ಮರು ಪ್ರಕಾಶನ ಕೂಡ ಕಂಡಿತು.ಆದರೆ ಈಗ ಕವಿಯ ನೆನೆವ ಮನ ಮತ್ತು ದೇಹ ಆ ಊರನ್ನು ಮರೆತು ಪಟ್ಟಣ ಸೇರಿಯಾಗಿದೆ . ಈಗ ಪಟ್ಟಣದ ಸುಖದ ನನಸುಗಳು, ಬದುಕು ಕಟ್ಟಿಕೊಟ್ಟ ನಲಿವಿನ ನೆನಪುಗಳನ್ನು ಮರೆಸಿ ."ನಾನು ಮತ್ತು ನನ್ನ ಸುಖಿ ಜೀವನ" ಎಂಬ ಕವನ ಸಂಕಲನವನ್ನು ಅವನೇ ಹುಟ್ಟುಹಾಕಿದ ಪ್ರಕಾಶನದಿಂದ ಹೊರಬಂದು ವಿಮರ್ಶಕರಿಂದ ದೊಡ್ಡ ಪೆಟ್ಟುಗಳನ್ನು ಗಳಿಸಿದೆ.
ಈಗ ಕವಿಗೆ ನೆನೆವ ಮನ ಕೊಟ್ಟ ಊರು ಗಣಿ ಧೂಳಿನಿಂದ ಮುಚ್ಚಿ ಹೋಗಿದೆ , ಕವಿಯ ತಂದೆ ತಾಯಿ ದಿನ ನಿತ್ಯ ಗಣಿ ಧೂಳಿನಿಂದ ಬಂದ ಕೂಲಿಯಲ್ಲಿ ಜೀವನ ನೂಕುತ್ತಿದ್ದಾರೆ.
ಐಶ್ವರ್ಯ ಯಾರನ್ನು ಬಿಡುವುದಿಲ್ಲ ಅಲ್ಲವೇ ? ಅದು ಕವಿಯಾಗಲಿ ಅಥವಾ ರವಿಯಾಗಲಿ , ಮೋಹಿಸಿದ ಮೇಲೆ ಮಸಣವೇ ಉತ್ತರವೇ ?

- ಗಂಗರಾಜು.ಕು.ಸಿ.

Wednesday, November 2, 2011

ಸಣ್ಣ ವ್ಯಥೆ - 9

ಪಿ.ಯು.ಸಿ ಯಲ್ಲಿ ಉನ್ನತ ದರ್ಜೆ ಮತ್ತು ಸಿ.ಇ.ಟಿ. ಪರೀಕ್ಷೆ ಯಲ್ಲಿ ಉತ್ತಮ ಶ್ರೇಣಿ ಪಡೆಯಲೇ ಬೇಕೆಂದು ಭರತ ಹಗಲು ರಾತ್ರಿ ಕಷ್ಟ ಪಟ್ಟು ಓದಿದ , ಭರತನ ಇಚ್ಚೆಯಂತೆ ಉತ್ತಮ ಶ್ರೇಣಿಯನ್ನು ಪಡೆದು ರಾಜ್ಯದ ಅತ್ಯುನ್ನತ ವಿದ್ಯಾಸಂಸ್ಥೆಯಲ್ಲಿ ಇಂಜಿನಿಯರಿಂಗ್ ವ್ಯಾಸಂಗಕ್ಕೆ ಸೇರಿಕೊಂಡ. ಇಂಜಿನಿಯರಿಂಗ್ ನಲ್ಲೂ ಕೂಡ, ಅತಿ ಹೆಚ್ಚು ಸಂಬಳ ಕೊಡುವ ಕಂಪನಿ ಗೆ ಸೇರಬೇಕೆಂದು ಕಷ್ಟ ಪಟ್ಟು ಓದಿದ , ಪ್ರತಿ ಫಲವಾಗಿ ೬ ನೆ ಸೆಮೆಸ್ಟರ್ ನಲ್ಲೆ ಒಂದು ಅಂತರ್ ರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡ. ಇಂಜಿನಿಯರಿಂಗ್ ಪದವಿಧರನಾದಮೇಲೆ ಅಂತರ್ ರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡ , ಆದರೆ ಕೇವಲ ೬ ತಿಂಗಳುಗಳಲ್ಲಿ ವೃತ್ತಿ ಜೀವನಕ್ಕೆ ಒಗ್ಗಿಕೊಳ್ಳದೆ , ತಾನೆ ಸ್ವತಃ ಕಂಪನಿ ತೆಗೆಯುತ್ತೇನೆ ಎಂದು ಹೊರಬಂದ . ತನ್ನಲ್ಲಿದ್ದ ಹಣ , ಅಪ್ಪನ ಆಸ್ತಿ ಮತ್ತು ಒಂದಷ್ಟು ಸ್ನೇಹಿತರನ್ನು ಸೇರಿಸಿಕೊಂಡು ಉದ್ಯಮಿಯಾಗಲು ಹೊರಟ, ಆ ಕಂಪನಿ ಕೂಡ ಚೆನ್ನಾಗಿಯೇ ನಡೆಯುತ್ತಿತ್ತು ,ಆದರೆ ಸ್ನೇಹಿತರೊಡನೆ ಗುದ್ದಾಟ ಮಾಡಿಕೊಂಡು ಕಂಪನಿಯನ್ನು ಉನ್ನತ ಬೆಲೆಗೆ ಮಾರಿದ. ಈಗ ಕೇವಲ ಬ್ಯಾಂಕ್ ಬ್ಯಾಲನ್ಸ್ ಮಾತ್ರ ಭರತನ ಬಳಿ ಉಳಿದಿತ್ತು. ತಂದೆ ತಾಯಿಯೂ ಕೂಡ ವೃದ್ಧಾಶ್ರಮದ ಪಾಲಾಗಿದ್ದರು. ಕಾಲೇಜಿನಲ್ಲೇ ಇಷ್ಟ ಪಟ್ಟಿದ ಪ್ರೇಯಸಿ ಪ್ರೀತಿಯನ್ನು ಮದುವೆಯೂ ಆದ , ಆದರೆ ಮದ್ವೆಯಾದ ೩ ತಿಂಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿ, ನ್ಯಾಯಾಧೀಶರ ಬಳಿ ಉಗಿಸಿಕೊಂಡು , ಮುಂದಿನ ೩ ತಿಂಗಳಲ್ಲಿ ವಿಚ್ಚೇದನ ಕೂಡ ಪಡೆದ. ಇಷ್ಟೆಲ್ಲಾ ಕಾಲ ಘಟ್ಟದಲ್ಲಿ ನಡೆಯುವ ಹೊತ್ತಿಗೆ ಭರತನಿಗೆ ಬರೋಬ್ಬರಿ ೩೮ ವರ್ಷ, ಇನ್ನು ಏನು ಮಾಡುತ್ತಾನೋ ನೋಡಬೇಕು .
ಇರುವುದೆಲ್ಲವ ಬಿಟ್ಟು ಇಲ್ಲದೆಡೆಗೆ ದಾರಿ , ಅಂದ್ರೆ ಇದೇನಾ ?

- ಗಂಗರಾಜು.ಕು.ಸಿ

Tuesday, November 1, 2011

ಸಣ್ಣ ವ್ಯಥೆ - 8

ಅಂದು ಕನ್ನಡ ರಾಜ್ಯೋತ್ಸವ , ದಿನ ಪೂರ್ತಿ ಆಡಳಿತ ಪಕ್ಷದವರನ್ನು ಗೋಳು ಹೊಯ್ದುಕೊಂಡ ವಿರೋಧ ಪಕ್ಷದ ಮುಖಂಡರು,ವಿಚಿತ್ರ ರೀತಿಯಲ್ಲಿ ಪ್ರತಿಭಟನೆ ನಡೆಸಿದರು , ವಿಧಾನ ಸೌಧದ ಹತ್ತಿರ ಕನ್ನಡ ಪಟಗಳನ್ನು ಇಟ್ಟು ಜೈ ಕಾರ ಮತ್ತು ಆಡಳಿತ ಪಕ್ಷಕ್ಕೆ ಘೆರಾವ್ ಕೂಗಿದರು.ಮುಖಂಡರು ಕನ್ನಡ ಭಾಷೆಗೆ ಇಂದಿನ ಸ್ಥಾನ ಮತ್ತು ಮಾನಗಳ ಕುರಿತು ಎಲ್ಲಾ ವಾರ್ತಾ ಮಾಧ್ಯಮದವರೊಂದಿಗೆ , ವರದಿಗಾರರು ಜಾಗ ಖಾಲಿ ಮಾಡುವವರೆಗೂ ಆಡಳಿತ ಪಕ್ಷದ ವಿರುದ್ಧ ಉಚ್ಚವಾಗಿ ತೆಗಳಿದರು. ಸಂಜೆಯ ಹೊತ್ತಿಗೆ ಒಂದು ನರ ಪಿಳ್ಳೆಯು ವಿಧಾನ ಸೌಧದ ಹತ್ತಿರ ಕಾಣಲಿಲ್ಲ , ಎಲ್ಲರು ತಮ್ಮ ದಿನಚರಿ ಮುಗಿಸಿ ಬಿ.ಎಂ.ಟಿ.ಸಿ. ಬಸ್ಸು ಹತ್ತಿ ಮನೆ ಸೇರಿಕೊಂಡರು.ಇದೇ ಶಾಸಕರು ಸರಿಯಾಗಿ ೫ ತಿಂಗಳ ಸಮಯದಲ್ಲಿ ಅಂದರೆ ಏಪ್ರಿಲ್ ತಿಂಗಳಲ್ಲಿ , ತಮ್ಮ ಮೊಮ್ಮಗನಿಗೆ ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರವೇಶ ಕೊಡಲಿಲ್ಲ ಎಂದು ,ಮಂದಿಯ ಜೊತೆ ವಿಧಾನ ಸೌಧದ ಬಳಿ ಸಂಜೆಯವರೆಗೂ ಪ್ರತಿಭಟಿಸಿದರು. 

- ಗಂಗರಾಜು.ಕು.ಸಿ.