Monday, December 31, 2012

ಹೊಸ ಹರುಷ

ವರುಷ ಕಳೆ ಹರುಷ ತಳೆ
ನವ ನವೀನ ಹೊಸತು ಎಳೆ ।।ಪ ।।

ಇಳೆಗೆ ಇಂದು ಚಂದ ಮಳೆ
ಚಿಗುರು
ತಂದ  ಭಾವ ಸೆಳೆ
ಸುಗ್ಗಿ ತಂದ ಬಾಳ ಮಳೆ
ಫಲವು ನಮಗೆ ಇಂದು ನಾಳೆ ।।

ಬಯಕೆ ಹೊತ್ತ ಹಳೆಯ ಹಾಸು
ದುಡಿಮೆ ಗೈವ ಶ್ರದ್ದೆ ಸೂಸು
ಪ್ರತಿ ಕ್ಷಣ ಭಯದ ಮಾಸು
ಕರ್ಮ ಪಠಣ ನಿತ್ಯ ಕಾಸು ।।

ಹೊಲಸ ಭಾವ ದೂಡಿ ಇಂದು
ಮಂದಹಾಸ ನಿತ್ಯ ಬಂಧು
ಸರಳತನವೇ ಸತ್ಯ ಎಂದು
ಜ್ಞಾನಸೆಲೆಯೆ ಏಳ್ಗೆ ಬಿಂದು ।।

ವಿಶ್ವ ಮಾನವ ಭಾವ ಬೆಳೆಯಲಿ
ಮುಕ್ತ ಮನ ನಮ್ಮದಾಗಲಿ
ದ್ವೇಷ ಭಾವ ಅಂತ್ಯ ಕಾಣಲಿ
ಹೊಸ ವರುಷ ಹರುಷ ತರಲಿ ।।

--
ಎಲ್ಲರಿಗು ಹೊಸ ವರುಷದ ಹಾರ್ದಿಕ ಶುಭಾಶಯಗಳು
ಗಂಗರಾಜು .ಕು.ಸಿ.

Thursday, December 27, 2012

ಅತಿ- ಶಯನ- ಉಕ್ತಿ

ಅತಿ ಆದ್ರೆ ಅಮೃತ ಕೂಡ ವಿಷ ಅಲ್ಲವೇ ? ಎಂಬ ಮಾತು ನನ್ನ ಮನದಲ್ಲಿ ನುಡಿಯುತ್ತಲೇ ಇತ್ತು .
ಏನು ಅತಿ ಮಾಡ್ತಾ ಇದೀನಿ ಎಂದು ಅವಲೋಕನ ಮಾಡಿಕೊಳ್ಳುವ ತಾಳ್ಮೆ ಕೂಡ ನನ್ನಲ್ಲಿ ಮೂಡುತ್ತಿಲ್ಲ.
ಎಂಥಾ ಭಾವ ಇದು ,ನನ್ನ ವರ್ತಮಾನದ ಭಾವನೆಗಳನ್ನ ನನ್ನವೇ ಆದ ಹಳೆಯ ಮಾಸಿದ ನೆನಪುಗಳೆಂಬ ನಿಂತ ನೀರಲ್ಲಿ ಜಾಲಿಸಿ ನೋಡುವುದು,
ಎಂಥಾ ವಿಚಿತ್ರ ಪರಿ ನನ್ನದು ಎಂದು ಚುಚ್ಚುತ್ತಲೇ ಇತ್ತು .

ನನ್ನ ವರ್ತಮಾನಕ್ಕೆ ಭೂತವಿಡಿದಿದೆಯೇ ಹೊರತು ಭವಿಷ್ಯದ ಸ್ಪರ್ಶ ತುಸು ಕೂಡ ಆಗಿಲ್ಲ ಅಂಥಾ,ನನ್ನ ಕೆಲವು ಭಾವನೆಗಳು ಕಲಸಿಹೊಗುತ್ತಿದ್ದವು.
ಇಷ್ಟೆಲ್ಲಾ ಕರ್ಮಕಾಂಡ ನನ್ನ ತಲೆಯಲ್ಲಿ ನಡೆಯುವ ಹೊತ್ತಿಗೆ ,"ಈವಾಗಲೇ ಅರ್ಧ ತಲೆ ಮೇಲೆ ಕೂದಲು ಇಲ್ಲ ,ಇನ್ನು ಹಿಂಗೆ ಹುಚ್ಚನ ಥರ ಆಡುದ್ರೆ ...."ಎಂದು ಆಗತಾನೆ
ಜನಿಸಿದ ಭಾವಶಿಶು ಅತ್ತು ನಕ್ಕಿತು.

--
ಗಂಗರಾಜು .ಕು.ಸಿ.