Friday, July 27, 2012

ಸಣ್ಣ ವ್ಯಥೆ -22


ಹತ್ತಿರ ದೂರ ಆದಂಗೆ ,ದೂರ ಹತ್ತಿರ ಆಗುತ್ತೆ ಆಲ್ವಾ ? ಅಂಥ ನನ್ನ ಮನಸ್ಸು ತನ್ನಲ್ಲೇ ಒಂದು ಪ್ರಶ್ನೆಯನ್ನು ಹಾಕಿಕೊಳ್ಳುವಷ್ಟು ಪುರುಸೊತ್ತು ನನ್ನ ಮನಸ್ಸಿಗೆ ಕೊಟ್ಟಿದ್ದೆ. ಎಂಥಾ ವಿಚಿತ್ರ ಇದು , ಹತ್ತಿರ ದೂರ ಆಗ್ತಾ ಇದ್ರೆ ನಾನು ಏನು ಮಾಡಬೇಕು ?ಎಂದು ನನ್ನ ಬುದ್ದಿ ಹೇಳೋಕೆ ಶುರು ಮಾಡಿದಾಗ ಏನೋ ಒಂಥರಾ ಮನದಲ್ಲೇ ಒಂದು ತರ್ಕ ಅಲ್ಲ ಜಿಜ್ಞಾಸೆ ಅಯ್ಯೋ ಅಲ್ಲ ಒಂದು ಸಣ್ಣ ಅಳಲು. ಏನು ಮಾಡಬೇಕು ಎಂದು ತಿಳಿಯದೆ ಮುಖ ಪುಟ (facebook) ವೆಬ್
ಸೈಟ್ ಅನ್ನು ಕ್ಲೋಸ್ ಮಾಡಿದೆ.ತಕ್ಷಣಕ್ಕೆ ಏನೋ ಒಂಥರಾ ಹಗುರ ಭಾವ ಮೂಡಿದ ಹಾಗೆ ಆಯಿತು , ಬುದ್ದಿಗೆ ಸ್ವಲ್ಪ ತ್ರಾಣ ದೊರೆಯಿತು.
ಎಷ್ಟು ವಿಚಿತ್ರ ,ನನ್ನ ಮನಸ್ಸು ನನ್ನ ಬುದ್ದಿಯನ್ನೇ ಮಂಕು ಬಡಿಸುವಷ್ಟು ದೊಡ್ಡದು ಎಂದು ತಿಳಿದ ಹಾಗಾಯಿತು.
ಮುಖಪುಟದ ಯಾರದೋ ಭಾವನೆಗಳನ್ನ , ಅವರ ಸೊಬಗುಗಳನ್ನ , ಸಂಭ್ರಮಗಳನ್ನ , ನಿರಾಶೆಗಳನ್ನ , ಅಳಲನ್ನ ,ಅಂಧಕಾರವನ್ನ ಅಥವಾ ಇತಿಹಾಸವನ್ನ ನಾನೇಕೆ ನನ್ನ ಮನಸ್ಸಿಗೆ ತಂದುಕೊಂಡು ಕೊರಗತೊಡಗಿದೆ ಎಂದು ಒಂದು ಪ್ರಶ್ನೆ ಮೂಡಿತು. ಪಕ್ಕದಲ್ಲೇ ಕುಳಿತಿದ್ದ ಕಣ್ಣನ್ ನನಗೆ ತಿಳಿಯದ ತಮಿಳಿನಲ್ಲಿ ಯಾರನ್ನೋ ಬೈಯುತ್ತ , ಶುಕ್ರವಾರ ಇವತ್ತು ಎದ್ದೇಳು ಪಾರ್ಟಿ ಮಾಡೋಣ ಎಂದು ಇಂಗ್ಲೀಷಿನಲ್ಲಿ ಆಜ್ಞಾಪಿಸಿದ.

--
ಗಂಗರಾಜು.ಕು.ಸಿ.

Thursday, July 19, 2012

ಸುಖಾ ಸುಮ್ಮನೆ

ಪ್ರತಿ ಕ್ಷಣದಲ್ಲೂ ಭೂಮಿಯ ಮೇಲೆ ಅನೇಕ ಜೀವಿಗಳು ಅಳಿಯುತ್ತಿರುತ್ತವೆ ಹಾಗೆಯೇ ನಮ್ಮ ದೇಹದಲ್ಲಿಯೂ ಕೂಡ
ಅನೇಕ ಜೀವಕೋಶಗಳು ಸಾಯುತ್ತಿರುತ್ತವೆ ಮತ್ತು ಹೊಸ ಜೈವಿಕ ಕ್ರಿಯೆಗಳು ನಡೆಯುತ್ತಿರುತ್ತವೆ .ಹೇಗೆ ಜೈವಿಕ ಅಂಶಗಳಿಗೆ ಹುಟ್ಟು -ಸಾವು ಇದೆಯೋ , ಹಾಗೆ ನಮ್ಮ ಮನಸ್ಸಿನಲ್ಲಿ ಹುದುಗೋ ಭಾವನೆಗಳಿಗೂ ಕೂಡ .ನಮ್ಮ ಮನಸ್ಸಿನ ಯೋಚನಾ ಲಹರಿಯ ಆಧಾರದ ಮೇಲೆ  ಅನೇಕ ಭಾವನೆಗಳು ಜೀವ ಪಡೆಯುತ್ತವೆ  ಮತ್ತು ನಮ್ಮ ಲ್ಲಿರುವವಿವೇಕವೆಂಬ ಅಂಶದಿಂದ ಅನೇಕ ಭಾವನೆಗಳು ಭ್ರೂಣವಸ್ಥೆಯಲ್ಲಿಯೇ ಅಸು ನೀಗುತ್ತವೆ.ಈ ವಿವೇಕದ ರಚನೆ ನಮ್ಮ ಬಾಳಿನಲ್ಲಿ ನಡೆದ -ನೋಡಿದ ಘಟನಇಂದಲೋ ಅಥವಾ ನಮ್ಮ ಪೂರ್ವಗ್ರಹದ  ಆಧಾರದ ಮೇಲೆ ರೂಪುಗೊಂಡಿರುತ್ತದೆ.
ಅಂದರೆ ಪ್ರತಿ ಭಾವನೆಯ ಹುಟ್ಟಿಗೆ ಕಾರಣವಿದೆ ಹಾಗೆಯೇ ಅದರ ಸಾವಿಗೂ ಒಂದು ಕಾರಣ ವಿರುತ್ತದೆ .

ನನ್ನ ಕೆಲವು ಜಿಜ್ಞಾಸೆಗಳನ್ನು ಇಲ್ಲಿ ಬರೆಯುತ್ತೇನೆ , ಪ್ರತಿ ಭಾವನೆಯ ಹುಟ್ಟಿಗೆ ಒಂದು ಕಾರಣವಿದ್ದರೆ,ಭ್ರೂಣವಸ್ಥೆಯಲ್ಲಿ ಇರುವ ಮಗುವಿನ ಭಾವನೆಗಳ ಮೂಲ ಏನು  ? ತಾಯಿಯ ವಿವೇಕದಿಂದಲೇ ,ಹಾಗೆಂದು ಯೋಚನೆ ಮಾಡಿದರೆ ನನ್ನಲ್ಲಿ
ಇನ್ನೊಂದು ತರ್ಕ ಉದ್ಭವಿಸುತ್ತದೆ , ಮಗುವಿಗೆ ಹಸಿವಾದಾಗ ತಾಯಿಗೂ ಹಸಿವಾಗುತ್ತದೆ ಎಂದು ಎಲ್ಲೋ ಓದಿದ ನೆನಪು .
ಹಾಗಾದರೆ ವಿವೇಕ ಇಲ್ಲಿ ವರ್ತಿಸುವುದಿಲ್ಲವೇ?

ಕೆಲವೊಮ್ಮೆ , ಭಯ ಎಂಬುದು ಅತಿ ದೊಡ್ಡ ವಿವೇಕವಾಗಿ ವರ್ತಿಸಿ ,ಎಷ್ಟೋ ಭಾವನೆಗಳನ್ನು ಹೊಸಕಿ ಹಾಕುತ್ತದೆ ,
ಏಕೆಂದರೆ ಭಯ ಹುಟ್ಟುವುದು ಮೌಡ್ಯದಿಂದ ಅಲ್ಲವೇ ?

ತರ್ಕಕ್ಕೆ ಕೊನೆ ಇಲ್ಲ?

--
ಗಂಗರಾಜು.ಕು.ಸಿ .





Tuesday, July 17, 2012

ಹೊಗೆ ಮಾನವ

ಹೊಗೆ ಮಾನವ
ಇವನು ಹೊಗೆ ಮಾನವ ||

ಬೆಂಕಿ ಜೊತೆಗೆ ಸರಸವಾಡೋ
ಪಂಕ್ತಿಯಲ್ಲಿ ಪಾನ ಮಾಡೋ
ಪವನ ಮುಕ್ತ ಸ್ಪರ್ಶ ನೀಡೋ
ಇವನು ಹೊಗೆ ಮಾನವ

ಭೂ ಅಗಲಕೆ ಚಾಚಬಹುದು
ನೇಸರೆತ್ತರ  ಏರಬಹುದು
ನಿಂತ ಜಾಗವ ಕಂಪು ವರಿಸೋ
ಇವನು ಹೊಗೆ ಮಾನವ

ಹೊಗೆಯ ಹಿಂದೆ ನಗೆಯ ಬೀರಿ
ಹರುಷದಿಂದ ಮೊಗವ ತೋರಿ
ದೇವನಿವನೆ  ಹೊಗೆಯ ಹಿಂದೆ
ಇವನು ಹೊಗೆ ಮಾನವ

ಒಡಲ ಸುಖಕೆ ತಲೆಯ ಬಾಗಿ
ಪರರ ಶ್ವಾಸ ಬಿಸಿಯ ಮಾಡಿ
ಕೈ- ಬಾಯಿ ಸುಡುವ ನಾತ
ಇವನು ಹೊಗೆ ಮಾನವ

ಧೂಮಪಾನ ಹಾನಿಕರ
ಅದು ಇವಗೆ ತಾತ್ಸಾರ
ಸರ್ಕಾರಕೆ ಸವಾಲೆಸೆವ
ಇವನು ಹೊಗೆ ಮಾನವ

ಬಾಳಿ- ಬದುಕಿಸೋ ಬಾಳ್ವೆಯಲ್ಲಿ
ನಿತ್ಯ ದೇಹ ಕಾಂಡವೇಕೆ
ಬಿಟ್ಟ ಹೊಗೆ , ಹೋದ ನಗೆ
ಹುಡುಕಿ ತರಲು ಸಾಧ್ಯವೇ ?

--
ಗಂಗರಾಜು .ಕು.ಸಿ .

Friday, July 13, 2012

ಸಣ್ಣ ವ್ಯಥೆ -21

ಮೂಲೆ ಮನೆ ಮಾದೇವಿ ಹೇಳ್ದಂಗೆ ಆಗೈತೆ ನೋಡು ಆ ಗಂಡ ಸತ್ತ ಹೆಣ್ಣು ಹೇಳ್ದಂಗೆ ಆಯ್ತದೆ ಎಲ್ಲಾ ನಮ್ಮ ಹಣೆ ಬರಹ ಎಂದು ಸಿದ್ದಪ್ಪ ಗೊಣಗ ತೊಡಗಿದ್ದ. ಪಕ್ಕದಲ್ಲಿ ಬೀಡಿ ಸೇದುತ್ತಿದ್ದ ಪರಮೇಶ ಸುಮ್ಕಿರು ತಾತ ಹಂಗೆಲ್ಲ ಅನ್ನಬೇಡ . ತಲೆಯ ಮೇಲಿದ್ದ ಹೊದಿಗೆಯನ್ನು ಬಿಗಿ ಗೊಳಿಸಿದ ತಾತ , ನೋಡು ರೇವತಿ,ಅಶ್ವನಿ,ಭರಣಿ,ಕೃತಿಕಾ, ರೋಹಿಣಿ ಮಳೆಯ ಸದ್ದೇ ಇರ್ಲಿಲ್ಲ ಮೃಗಶಿರಾ,ಆರಿದ್ರಾ,ಪುನರ್ವಸು ಬಿರುಸಾಗಿ ಬರದೆ ತುಂತುರು ಆಗಿ ಹೋಯ್ತು . ಊರಾಗಿರೋ ಚರಂಡಿ ನೀರೆ ಸರಿಯಾಗಿ ಕೊಚ್ಚಿಕೊಂಡು ಹೋಗಿಲ್ಲ ಈ ಮಳೆಗೆ ಹೋಗು ಈ ಸಲ ಮುಂಗಾರು ಮಳೆಗೆ ಬೆಳೆ ತೆಗೆದಂಗೆ  ಐತ್ಹೆ , ಆ ಸಿದ್ದೇಶ್ವರನ ದಯಾ ಇದ್ರೆ ಹಿಂಗಾರನಾಗೆ ಅವರೇನೂ ,ತೊಗರಿನೋ ಬೆಳ್ಕೋ ಬೇಕು ಅಷ್ಟೇ . ಮನೆಗೆ ತಿನ್ನಾಕೆ ಅಷ್ಟು ದವಸ ಆದರು ಆಯ್ತದೆ. ಎರಡು ಬೀಡಿ ಬೂದಿಯಾಗಲು ಬಿಡದೆ ಕುಡಿದ ಪರಮೇಶ , ಬತ್ತಿನಿ ತಾತ ದನ ಕರುಗೆ ಹುಲ್ಲು ಹಾಕಬೇಕು ಅಂಥ ಎದ್ದು ಹೊರಟ .

ಊರಲಿದ್ದ ಮನೆಗಳಲ್ಲಿ ದವಸ ಮುಗಿಯುವ  ಹಂತಕ್ಕೆ ಬಂದು , ಶೆಟ್ಟರ ಅಂಗಡಿಗೆ ಸಾಲಕ್ಕೆ ಮೊರೆ ಹೋಗಿದ್ದ ದೃಶ್ಯ ನೋಡಿ ಸಿದ್ದಪ್ಪನ ಮನ ಮಣಿದಿತ್ತು. ಇದ್ದಕಿದ್ದಂತೆ ಪುಷ್ಯ ಮಳೆಯ ಜೊತೆ ಊರಿಗೆ ಬಂದ ಶಾಸಕ ಶಿವಪ್ಪ , ನಿಮಗೆಲ್ಲ ಸರ್ಕಾರ ದಿಂದ  ಕಡಿಮೆ ಬೆಲೆಗೆ  ಬೀಜ ಕೊಡುಸ್ತೀನಿ ಎಂದು ಆಶ್ವಾಸನೆ ಕೊಟ್ಟು ಹೋದ.ಮಳೆಯ ಜೊತೆ ಶಾಸಕನ ಮಾತಿಗೆ ಊರಿನ ಜನರೆಲ್ಲಾ ಖುಷಿಯಾದರು. ಆಶ್ಲೇಷ ಮಳೆಯ ಸಮಯಕ್ಕೆ ಜನ ನೆಲ ಹದ ಮಾಡಿ , ಜೋಳ ಭೂಮಿಗೆ ಬಿಡಲು ಶಾಸಕ ಕಳಿಸುವ ಬೀಜಗಳ ದಾರಿ ನೋಡ ತೊಡಗಿದರು .ಮಖೆ ಮಳೆ ಆಗದೆ ಹೋದರು ಜನ ಕುಂದದೆ ಬೀಜದ ನೀರಿಕ್ಷೆ ಯಲ್ಲಿದರು.
ಉತ್ತರ ಮಳೆಯ ವೇಳೆಗೆ ಊರಿನ ಶಾನಭೋಗರ ಮನೆಗೆ ಒಂದು ಉತ್ತರ ಬಂದಿತ್ತು , ಪತ್ರದಂತೆ ಊರಿಗೆಲ್ಲ ಶಾನಭೋಗ  "ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನಿಂದ ಹಳೆ ಮುಖ್ಯ ಮಂತ್ರಿಗಳು ತಂದ "ಧನ ಬೀಜ " ಯೋಜನೆಯನ್ನು ಹೊಸ ಮುಖ್ಯ ಮಂತ್ರಿಗಳು ಕೈ ಬಿಟ್ಟಿದ್ದಾರೆ" ಎಂದು ಡಂಗುರ ಸಾರಿಸಿದರು.ಹಸ್ತ,ಚಿತ್ತ ಮಳೆ ಜೋರಾಗಿ ಬಂದು ಹಸನು ಮಾಡಿದ್ದ ಭೂಮಿಯಲ್ಲಿ ಊರಿನ ಜನರಲ್ಲೇ ಕಾಂಗ್ರೆಸ್ ಗಿಡಗಳನ್ನೇ ಹಿಂಗಾರು ಮಳೆಗೆ ಬೆಳೆದರು .

--
ಗಂಗರಾಜು . ಕು. ಸಿ 

Wednesday, July 4, 2012

ನುಡಿ ನಡೆ

ಜಗವ ತೊಳೆವ ಜನರು ನಾವು
ಜಪವ ತೊರೆದು ಜೀವ ನವಕೆ ಜಯಿಸುವ

ನಡೆದ ದಾರಿ ಮರೆತು ನಾವು
ನಡತೆ ದಾರಿ ಹಿಡಿಯುವ

ಬಡವ ಬಲ್ಲಿದ ಬೇಧ ಮರೆತು
ಬವಣೆ ಮಾರ್ಗವ ಹಿಡಿಯುವ

ಮಾತು ಮನವ ಹಿಡಿಯಲಿಟ್ಟು
ಮೌನ ಪಥಕೆ ಧ್ವನಿಸುವ

ಮರೆತ ದುಃಖವ ನೆನವುಗೊಡದೆ
ನೆನೆವ ಸುಖಕೆ ಶ್ರಮಿಸುವ

ರಾಗ ದ್ವೇಷವ ಬದಿಯಲಿಟ್ಟು
ಸ್ನೇಹ ಸಂಯಮ ತೋರುವ

ಬದುಕು ಕಲಿಸೋ ಪಾಠದಲ್ಲಿ
ಆಟವಾಡಿ  ಕಲಿಯುವ , ಗೆಲ್ಲುವ

--
ಗಂಗರಾಜು .ಕು.ಸಿ .

Tuesday, July 3, 2012

ಸಣ್ಣ ವ್ಯಥೆ - 20

ಸೂರ್ಯನು ಅಂದು ಬೇಗನೆ ಭುವಿಯ ಬೆಳಗಲು ಬಂದಿದ್ದ ಹಾಗೆ ಭಾಸವಾಗುತಿತ್ತು. ಎದ್ದವನೇ ಕೆರೆಯ ಕಡೆ ಹೋಗಿ ಹಿಂದಿರುಗುವಾಗ  ದಾರಿಯಲ್ಲಿ ಬೆಕ್ಕು ಬಲದಿಂದ ಎಡಕ್ಕೆ ಕೆರೆಯ ಕಡೆ ನಡೆದಿತ್ತು. ಸರಿ ಹಾಳಾಗಿ ಹೋಗಲಿ ಎಂದು ಐದು ನಿಮಿಷ ಅಲ್ಲೇ ನಿಂತಿದ್ದೆ , ನನ್ನ ದುರದೃಷ್ಟಕ್ಕೆ  ನಾ ನಿಂತಿದ್ದ ದಾರಿಯಲ್ಲಿ ಖಾಸಿಮನ ಲಾರಿ ಕೂಡ ಬಂತು ನಾನು  ಪಕ್ಕಕ್ಕೆ ಸರಿದೆ ,ಆದರೆ ಲಾರಿ ಕೂಡ ಅಲ್ಲೇ ಇದ್ದ ಕೆಸರು ಗುಂಡಿಗೆ ತನ್ನ ಚಕ್ರವ ಸರಿಸಿ ನನ್ನ ಮೈ ಮೇಲೆ ಕೆಸರಿನಿಂದ ಉಗುಳಿತು. ಮನೆಗೆ ಬಂದು ಸ್ನಾನ ಮಾಡಲು ಹೋದರೆ  ಖಾಯಿಸಿಟ್ಟ ನೀರು ತಂಡಿಯಾಗಿತ್ತು , ಮತ್ತೆ ಬಿಸಿ ಮಾಡಿ ಕೊಡೆಂದು
ಗೌರಿಯ ಕೇಳಿದರೆ ಬೆಳಗ್ಗೆಯೇ ಬೈಗುಳವಾಗುತ್ತದೆ ಎಂದು ಯೋಚಿಸಿ ಅದೇ ನೀರಿನಲ್ಲೇ ಸ್ನಾನವ ಮಾಡಿದೆ.
ಆತುರಾತುರವಾಗಿ ತಿಂಡಿ ತಿಂದು ಆಫಿಸಿಗೆ ಹೊರಟೆ , ಮತ್ತೆ ಅದೇ ಬೆಕ್ಕು ಕೆರೆ ಕಡೆ ಇಂದ ಅಡ್ಡ ಬಂತು , ಮತ್ತದೇ ಚಾಳಿಯ ಮುಂದುವರೆಸಿ ಐದು ನಿಮಿಷ ನಿಂತೆ , ಎರಡನೇ ಬಸ್ಸು ಕೂಡ ಮಿಸ್ ಆಗಿತ್ತು. ನಡೆದು ಆಫೀಸು ತಲುಪಿದಾಗ ಮಧ್ಯಾನದ ಊಟದ ಸಮಯವಾಗಿತ್ತು. ಊಟವ ಮುಗಿಸಿ, ಬಾಸ್ ಕರೆದರೂ ಎಂದು ಅವರ ಕೋಣೆಗೆ ಹೋದೆ ನನ್ನ ನೋಡಿ ಅವರು ಹೇಳಿದರು "ನನ್ನ ಹೆಂಡತಿಗೆ ಬೆಕ್ಕುಗಳೆಂದರೆ ಬಹಳ ಪ್ರೀತಿ, ನಿಮ್ಮ ಊರಿಂದ ನಾಳೆ ಒಂದು ಬೆಕ್ಕು ತಂದು ಕೊಡುವೀರ !" ,ನಾನು ತಲೆಯಾಡಿಸಿ ಬೆಳಗಿನ ಅರ್ಧ ದಿನದ ರಜೆ ಬರೆದು , ನನ್ನ ಕೆಲಸದ ಜಾಗಕ್ಕೆ ಬಂದೆ ಹಾಗೆ ನೆಗಡಿಯು ಬಂದಿತ್ತು.

--
ಗಂಗರಾಜು.ಕು.ಸಿ .