Monday, October 24, 2011

ಕುಡಿದು ಬರೆದಾಗ ( Drink ಅಂಡ್ write )


ಕುಡಿದು ಬರೆದಾಗ ( Drink ಅಂಡ್  write )   ,

ಈ ಶೀರ್ಷಿಕೆ ಎಷ್ಟು ಚೆನ್ನಾಗಿದೆ ಆಲ್ವಾ ? , ಸಾಮಾನ್ಯವಾಗಿ ಕುಡಿದವರು ( i mean alcohol ) ಪಕ್ಕದಲ್ಲಿರೋ  ಸ್ನೇಹಿತನಿಗೋ  ಇಲ್ಲ  ತನ್ನ ಪ್ರೆಯಸಿಗೋ , ತನ್ನ ಪಾನಕ್ಕೆ sponsor ಗೋ ಅಥವಾ ತಮ್ಮ ಹೆಂಡತಿಗೋ ತಮ್ಮ ಅನುಭವಗಳನ್ನು , ಅವಸರದಿಂದ , ಅವಶ್ಯವಿಲ್ಲದೆ  , ಅಳುಕಿಲ್ಲದೆ  , ಅಂಜಿಕೆ ಇಲ್ಲದೆ  , ಹದ್ದಿಲ್ಲದೆ , ತಮ್ಮ್ಕ ಮನಸ್ಸಿನ ಬಯಕೆಗಳನ್ನು , ಘಟನೆಗಳನ್ನೂ ,ಅನುಭವಗಳನ್ನೂ ಮಧ್ಯಪಾನದ ಅಮಲಿನಿಂದ ಹೊರಬರುವವರೆಗೂ ಹೇಳುತ್ತಾರೆ ಮತ್ತು ಕೆಲವರು ಗೊಣಗಿ ಕೊಳ್ಳುತ್ತಾರೆ .ಈ ಗೊಣಗಿಕೊಳ್ಳುವವರು ಸ್ನೇಹಿತರು , ಪ್ರೇಯಸಿಯು ಅಟ್ ಲೀಸ್ಟ್ ಕೊರೆಸಿಕೊಳ್ಳುವ ಯಾವ ಪ್ರಜೆಯು ಸಿಗದೇ ಹೋದಾಗ ಇವರು ಉದ್ಭವಿಸುತ್ತಾರೆ , ಇವರ ಬಗ್ಗೆ ಈಗ ಮಾತು ಬೇಡ , ಯಾಕೆಂದರೆ ಅದು ಅವರು ಪಡಕೊಂಡದ್ದು .

ಕುಡಿದವರು ಲೀಲಾಜಾಲವಾಗಿ ತಮ್ಮ ಮನಸ್ಸಿಗೆ ತೋಚಿದ್ದು ಹೇಳುತ್ತಿರುತ್ತಾರೆ , ಅವುಗಳಲ್ಲಿ ಒಂದಷ್ಟು ನಿಜ , ಒಂದಷ್ಟು ಕೇಳುಗರನ್ನು ಮೆಚ್ಚಿಸಲು ಹೇಳುವ ವರ್ಣನಾತೀತ ಮಾತುಗಳು ಅಷ್ಟೇ . ಆದರೆ ಆ ನಿಜಗಳು ಇವೆ ಆಲ್ವಾ , ಅವು ಮಾತ್ರ ಸಾಮಾನ್ಯವಾಗಿ ಇರುವುದಿಲ್ಲ ,ತಲೆಯ ಮೇಲೆ ಹೊಡೆದಂಗೆ  ಇರ್ತಾವೆ . ಬಹುಷಃ ನಾ ಈಗ ಹೇಳಿದ ಗಾದೆ ಮಾತು ಕೇಳಿರಬಹುದು, ಅದರ ಅನುಭವ ಬೇಕಾದರೆ ಕುಡುಕರ ಸಂಗಡ ಕೂರಬಹುದು .

ಕುಡಿದವರಿಗೆ ಒಂದು ರೀತಿಯ ಮೊಂಡು ಧೈರ್ಯ ಅಥವಾ ನಾವು ಕುಡಿದವರು so ,ನಾವು ಮನಸೆಚ್ಚ್ಹ ಮಾತನಾಡಬಹುದು ,ಯಾರು ಏನು ಕೇಳಿಯಾರು ಎಂಬ ಧೈರ್ಯ ದ ಮೇಲೆ ಈ ರೀತಿಯ ವರ್ತನೆ ಎಂದು ಎಲ್ಲರು ತಿಳಿದಿದ್ದಾರೆ. ಆದರೆ ನಿಜವಾಗಿ ಕುಡಿದವನು, ಅವ್ನ ಮೇಲೆ ನಿಯಂತ್ರಣ ತಪ್ಪಿರುತ್ತಾನೆ , ಆ ನಿಯಂತ್ರಣ ತಪ್ಪಿದಾಗ ನಾವು ಮನುಷ್ಯನ ನಿಜವಾದ ಮುಗ್ದ ಮನಸ್ಸಿನ ಸುಪ್ತ ಚಿತ್ರಣವನ್ನು ಕಾಣಬಹುದು .  ಆ ಚಿತ್ರಣ , ಕೇವಲ ಕೆಲವರಲ್ಲಿ ಮಾತ್ರ ಕಾಣಬಹುದು , ಈ ಯಾಂತ್ರಿಕ ಜಗತ್ತಿನಲ್ಲಿ , ಭಾವನೆಗಳ ಸುಳಿಯಲ್ಲಿ , ಜೀವನದ ಜಂಜಾಟದಲ್ಲಿ , ಈ ಚಿತ್ರಣ ಬಹು ಅವಶ್ಯ  ಅಲ್ವೇ ?

ಸರಿ , ಇಷ್ಟೆಲ್ಲಾ  ಕೊರಿತಿದ್ದಿಯ ಅಂದ್ರೆ , ನೀ ಬಹುಷಃ ಕುಡಿದಿರಲೇ ಬೇಕು ಅಂತ ನನ್ನ ಪ್ರಿಯ ಮಿತ್ರರು ಯೋಚಿಸಿರುತ್ತಿರಾ ಆಲ್ವಾ ? , so my answer is yessssssss .

ಎಲ್ಲೋ ದೂರದ ಊರಲ್ಲಿ , ಯಾರು ಜೊತೆ ಇಲ್ಲದೆ , ದಿನವು ಯಾಂತ್ರಿಕತೆಯ  ವೈಭವಕ್ಕೆ ಬೇಸತ್ತು , ಒಮ್ಮೆ ಒಬ್ಬನೇ ಕುಳಿತು ಪಾನಮತ್ತ ನಾದಾಗ , ಅದರ ವ್ಯಥೆಯೇ ಈ ನನ್ನ ಇವತ್ತಿನ ಅಂಕಣ . 
ಸರಿಯಾಗಿ ಕಂಠ ಪೂರ್ತಿ ಕುಡಿದೆ , ನನ್ನ ದೇಹ ತನ್ನ ಧಾರ್ಧ್ಯ ವನ್ನು ತಪ್ಪುವ ಸ್ಥಿತಿಗೆ ತಲುಪಿತು , ನನ್ನ ಡಾಕ್ಟರ ಸ್ನೇಹಿತ ಹೇಳಿದ್ದ " ಮಗನೆ ಕುಡಿದಾಗ ಚೆನ್ನಾಗಿ ತಿನ್ನು ಅಂಥ" , so , ಸರಿಯಾಗಿ ಕಂಠ ಪೂರ್ತಿ ತಿಂದೆ , ಬಿಲ್ ಕೊಟ್ಟು , ಹೇಗೋ ದಾರಿ ಹಿಡಿದು ಹೋಟೆಲ್ ತಲುಪಿದ್ದೇನೆ .

 ತಲುಪುವ ದಾರಿಯಲ್ಲಿ ನನ್ನ ಮನಸ್ಸಿನಲ್ಲಿ ನೂರಾರು ವಿಕಾರಗಳು , ಆ ವಿಕಾರಗಳನ್ನೆಲ್ಲ ಇಲ್ಲಿ ಬರೆದರೆ ನನ್ನ ಮಾರಣ ಹೋಮ ಖಂಡಿತ , and more over ನಾನು ಹೇಳುವುದು ಇಲ್ಲ ಬಿಡಿ ಅತ್ಲಾಗ.ಸುಮಾರು ೧೦೦ ರಿಂದ ೧೫೦ ವಿಕಾರಗಳು ನನ್ನ ಮನಸ್ಸು ಹೊಕ್ಕವು , ಅವುಗಳಲ್ಲಿ ಒಂದು ವಿಕಾರ ಮಾತ್ರ ನನ್ನನ್ನು ಈ ಅಲುಗಾಡುವ ಕೈಯಲ್ಲೂ ಬರೆಯುವಂತೆ ಮಾಡಿದೆ . ಏನು ಅಂತೀರಾ?
ಕುಡಿದು ಮಾತಾಡಿದ್ರು ಓಕೆ , ಕುಡಿದು ಬರೆದರೆ ತಪ್ಪೇನು ಅಂಥ ?

 ಕುಡಿದು ಏನು ಬೇಕೋ ಅದು , ಹೇಗೆ ಬೇಕೋ ಹಾಗೆ , ಯಾವ ರೀತಿ ಬೇಕೋ ಆ ರೀತಿ , ಕೆಟ್ಟದಾಗಿ , ಉಚ್ಚವಾಗಿ ಮಾತನಾಡುವವರನ್ನು ನೋಡಿ  ಬೇಸತ್ತು , ಅವರಿಗೆ ಛೀಮಾರಿಯನ್ನು  ಹಾಕಿರುತ್ತೇವೆ ಮತ್ತು ಅವರಲ್ಲಿ ನಿಮಗೆ ಒಂದು ಕ್ಷಮೆ ಇದೆ ಆಲ್ವಾ ? i .e ಕುಡಿದಿದ್ದಾನೆ ಅಂಥ , ಆ ಕ್ಷಮೆ ನನ್ನ ಮೇಲೂ ಇರಲಿ . ಕೆಲವು ಮಾತುಗಳು ಸೂಕ್ಷ್ಮ ವಾಗಿರ್ತ್ತವೆ , ಆದ್ರೆ ಅವನ್ನ ನೀವು ನಿಮ್ಮ ಭೂತ ಕಾಲವೆಂಬ ಕನ್ನಡಿ ಇಂದ ಏನು ನೋಡ್ಕೊಳೋಕೆ ಹೋಗಬೇಡಿ , ಯಾಕಂದ್ರೆ ನಾವೆಲ್ಲಾ ಸಜಿವೀಗಳು ಇರುವುದು ಭೂಮಿಯ ಮೇಲೇನೆ .

 ಸುಪ್ತ ಮನಸ್ಸು ಮತ್ತು ಜಾಗೃತ ಮನಸ್ಸು ಎಂಬ ವಿಷಯಗಳ ಬಗ್ಗೆ ಕೇಳಿರುತ್ತೇವೆ , ಬಹುಷಃ ನಿಮಗೆಲ್ಲರಿಗೂ ಗೊತ್ತು ಇರುತ್ತದೆ, ನನ್ನ ಇಂಗ್ಲಿಷ್ ಮಾಧ್ಯಮದ ಮಿತ್ರರಿಗಾಗಿ , conscious mind and sub conscious mind ಅಂಥ ಅಷ್ಟೇ. ಇವುಗಳ ಬಗ್ಗೆ ನಾನು ನಿಮ್ಮ ಬಳಿ ಚರ್ಚಿಸಲು ಮನೋರೋಗಿನೂ ಅಲ್ಲ ಅಥವಾ ಮನೋವೈಧ್ಯನು ಅಲ್ಲ .ಆದರು ಸಹ ಸ್ವಲ್ಪ ನಾನು ಇದರ ಬಗ್ಗೆ ಬರಿತೀನಿ , ಈ ಎರಡು ಮನಸ್ಸುಗಳಲ್ಲದೆ ಇನ್ನೊಂದು ಇದೆ , ಅದೇ ಅಂತರ್ಮುಖಿ ಮನಸ್ಸು. ಕೆಲವರಿಗೆ ಈ ಮನಸ್ಸು ತಾವು ಬೆಳೆಯುವ ವಾತಾವರಣದಿಂದ ಬಂದಿರುತ್ತದೆ ಅಥವಾ ಅವರು ವಾಸಿಸುವ ಪರಿಸರದ ಪ್ರಭಾವದಿಂದ ಈ ರೀತಿಯ ಪರಿವರ್ತನೆಯಾಗಿರಬಹುದು. ಇವರನ್ನು ರೋಗಿಗಳು ಅಂತ ಕರೆಯಬಹುದು ,ಆದರೆ ವಾಸಿ ಮಾಡಲಾಗದ ರೋಗ ಅಷ್ಟೇ.

 ನನ್ನ ಕುಡಿದ ಮನಸ್ಸಿನ ಪ್ರಕಾರ, ಎಲ್ಲ ಮನಸ್ಸುಗಳು ,ಒಂದಲ್ಲ ಒಂದು ಸಮಯದಲ್ಲಿ ಅಂತರ್ಮುಖಿಯಾಗಿ ವರ್ತಿಸುತ್ತವೆ ಅಥವಾ ವರ್ತಿಸಿರುತ್ತವೆ. ಇದು ನಮ್ಮ ಮನಃಶೈಲಿ, ಇದನ್ನು ಬದಲಿಸಿಕೊಳ್ಳಲು ಕೆಲವರಿಗೆ ಅಥವಾ ಕೆಲವು ಸನ್ನಿವೇಶಗಳಲ್ಲಿ ಸಾಧ್ಯವಾಗುವುದಿಲ್ಲ. ಸೊ , ಇದು ಮಾನವನ ಸಹಜ ಮನೋ ಧರ್ಮ ಅಂಥ ಹೇಳೋಣವೇ ?
ನಮ್ಮ ಮನಸ್ಸು ಕೂಡ ಒಂದು ವಿಷಯ ತೆಗೆದು ಕೊಂಡರೆ , ಅದನ್ನ ಆಳವಾಗಿ ಅಗೆಯಲು ಪ್ರಯತ್ನಿಸುತ್ತದೆ ಆಲ್ವಾ ಈ ಅಗೆಯುವ ಸಂಧರ್ಭದಲ್ಲಿ ಕೆಲವು ತಾತ್ಕಾಲಿಕ ನಿರ್ಣಯಗಳನ್ನ ತೆಗೆದುಕೊಂಡು ಮುಂದೆ ಹೋಗಿರುತ್ತೇವೆ , ಕೆಲವೊಮ್ಮೆ ಆ ನಿರ್ಣಯಗಳೇ ಈ ಅಂತರ್ಮುಖದ ಮೂಲ ಕಾರಣ ವಾಗಬಹುದು. ಸಾಕಪ್ಪಾ, ಸಾಕು ಬಹಳಷ್ಟು ಇದರ ಬಗ್ಗೆ ಬಹಳಷ್ಟು ಮಾತಾಡಿದರೆ ,ನನ್ನ NIMHANS candidate ಅಂಥ ನೀವು ಕರೆದರೂ ಕರೆಯಬಹುದು.ನಾನು ಇಲ್ಲಿಗೆ ಇದರ ಬಗ್ಗೆ ನಿಲ್ಲಿಸಿ ಬಿಡುತ್ತೇನೆ.

 ಅಯ್ಯೋ, ನಾನು ಇಲ್ಲಿ ಕುಡಿರಿ ಅಂಥ ನಿಮಗೆ advertisementu  ಕೊಡ್ತಾ ಇಲ್ಲ ಅಥವಾ ನಾನು ಕುಡಿತಿನಿ , ಕುಡಿದಿದ್ದೀನಿ ಅಂಥ ಹೋಗಳಿಕೆನು ಕೊಡ್ತಾ ಇಲ್ಲ .

 ಯಾರೋ ಮಹಾನುಭಾವರು ಹೇಳಿರೋ ಒಂದು ಸಾಲು ಜ್ಞಾಪಕಕ್ಕೆ ಬಂತು ,
"ಕುಡಿದು ಕುಡಿದು ಕುಣಿದಾಡು ಹೇ ಮನುಜ ,
ಕುಡಿದವನ, ಅರಿತವ ನಿಜಕು ರಾಜ" ,
ನನಗೆ , ಕವಿ ಈ ಸಾಲುಗಳನ್ನ ಯಾವ ಸಂಧರ್ಭದಲ್ಲಿ ಹೇಳಿದ್ದಾರೆ ಅಂಥ ನಿಜವಾಗಲು ಗೊತ್ತಿಲ್ಲ.
ಆದರೆ ಇಲ್ಲಿ ಉಲ್ಲೇಖಿಸಲು ಕಾರಣ, ಕುಡಿದಾಗ ಜನ ತಮ್ಮ ನೋವನ್ನೆಲ್ಲ ಮರೆತು , ಯಾವುದೊ ಹುಚ್ಚು ಧೈರ್ಯದಿಂದ , ಪ್ರಪಂಚಕ್ಕೆ ಸವಾಲೆಸೆಯುವ ಶಕ್ತಿವಂತರಂತೆ ಆಡುತ್ತಾರೆ ಆಲ್ವಾ ?, ಅದೇ ನೀವು ನಿಮ್ಮ ನಿಜ ಜೀವನದಲ್ಲೂ ಧೈರ್ಯವಾಗಿ ಇರಿ , ನೀವು ನೀವಾಗಿರಿ ಅಷ್ಟೇ. ನಮಗೆ ಧೈರ್ಯ ಎಂಬ ಗುಣವನ್ನು ತುಂಬಲು alcohol ನ ಅಗತ್ಯ ಏಕೆ ಬೇಕು? , ಧೈರ್ಯ ಎಂಬ ಅಂಶ ಮನಸ್ಸಿಗೆ ಸಂಬಂದಿಸಿದ್ದು , so alcohol ನ ಹೊಟ್ಟೆಗೆ ಹಾಕ್ಕೊಂಡ್ರೆ kidney, lever ಹಾಳಾಗುತ್ತೆ ಹೊರತು ಧೈರ್ಯ ಎಲ್ಲಿ ಬಂದಿತು.

 ನನಗೂ ಸ್ವಲ್ಪ ಕಿಕ್ಕ್ ಕಡಿಮೆ ಆಯಿತು , ನಾವು ಪಾಚ್ಕೊತಿವಿ. good night.


-- ಗಂಗರಾಜು.ಕು.ಸಿ.

Friday, October 21, 2011

ಸಣ್ಣ ವ್ಯಥೆ - 7

ಕಾಲೇಜು ರಂಗ ಕಳೆದು ಉದ್ಯೋಗವ ಮಾಡಲು ಒಂದು ಸಾಫ್ಟ್ ವೇರ್ ಕಂಪನಿಗೆ ಕಾಲೇಜು ಮುಗಿದ ೪ ದಿನಗಳಲ್ಲಿ ಸೇರಿಕೊಂಡೆ.ಇದಕ್ಕೆ ನಾನು ನನ್ನ ಕಾಲೇಜಿಗೆ ಮತ್ತು ನಮ್ಮ ಉಪನ್ಯಾಸಕರಿಗೆ ಚಿರ ಋಣಿ. ಉದ್ಯೋಗದ ಪ್ರಥಮ ತಿಂಗಳು ಹೊಸ ಹೊಸ ವಿಷಯಗಳ ಅರಿಯುವಲ್ಲಿ , ಪರಿಚಯಗಳಲ್ಲಿ ಒಂದು ಸುಂದರ ಅಲೆಯಂತೆ ಕಳೆಯಿತು.ತಿಂಗಳ ಕೊನೆಗೆ ಪ್ರಥಮ ಸಂಬಳವೆಂಬ ಹೊಸ ಪದಕ್ಕೆ ನನ್ನ ಜೀವನ ಎದುರು ನೋಡ ತೊಡಗಿತು, ಮನದಲ್ಲಿ ಒಂದು ಯೋಚನೆ ಏನ್ ಮಾಡುವುದು ಮೊದಲ ಸಂಬಳದಲ್ಲಿ ಅಂಥ ,ತಕ್ಷಣ ನನ್ನ ತಂಗಿಗೆ ಫೋನಾಯಿಸಿದೆ , ಅಪ್ಪನ ಶರ್ಟ್ ಸೈಜ್ ನೋಡಿ ಹೇಳು , ಹಾಗೆ ತಮ್ಮನ ಜೀನ್ಸ್ ಪ್ಯಾಂಟ್ ಮತ್ತು T ಶರ್ಟ್ ಸೈಜ್ ಅನ್ನು ಹೇಳು ಎಂದು ಹೇಳಿ, ಫೋನ್ ಇಟ್ಟು ಬಿಟ್ಟೆ.ಅರ್ಧ ತಾಸು ಬಿಟ್ಟು ಮತ್ತೆ ಮನೆಗೆ ಫೋನಾಯಿಸಿದೆ , ಆ ಕಡೆಯಿಂದ ಬಂದ ಉತ್ತರ ನನ್ನ ಕಣ್ಣನ್ನು ಒದ್ದೆ ಯಾಗಿಸಿತು ಮತ್ತು ಅಪ್ಪನ ಮೇಲೆ ಮತ್ತಷ್ಟು ಗೌರವ ಹೆಚ್ಚಿಸಿತು , "ಅಣ್ಣ , ಅಪ್ಪನ ಶರ್ಟ್ ನಲ್ಲಿ ಹಿಂದೆ ಹರಿದಿದೆ ಕಣೋ ಸೈಜ್ ಇರೋ label ,ಶರ್ಟ್ ಅಲ್ಲಿ ಇಲ್ಲ" .ನಾನು ಎಂದು ಅಪ್ಪನ ಬಟ್ಟೆಯ ಬಗ್ಗೆ ಅಷ್ಟು ಗಮನಿಸಿರಲಿಲ್ಲ .ಈ ಚಿತ್ರಗಳು ಮನಸ್ಸಿನ ಮೇಲೆ ಮೂಡಿ ಸುಮಾರು ೪ ವರ್ಷಗಳು ಕಳೆದಿವೆ ,ಆದರೆ ಈಗಲೂ ಯಾರೇ ಸ್ನೇಹಿತರಾಗಲಿ ಪ್ರಥಮ ಸಂಬಳದ ಬಗ್ಗೆ ನನ್ನ ಬಳಿ ಚರ್ಚಿಸಿದಾಗ ನನ್ನ ಕಣ್ಣು ಈಗಲೂ ಒದ್ದೆ ಯಾಗುತ್ತದೆ.
ಜೀವನದ ನಮ್ಮ ಪ್ರತಿ ಏಳಿಗೆಯಲ್ಲು ಭೂತ ಕಾಲದ ಮೆಟ್ಟಿಲುಗಳು ನಮ್ಮನ್ನ ಸದಾ ಎತ್ತರದಲ್ಲಿ ,ಎಚ್ಚರದಿಂದ ಇರುವಂತೆ ಮಾಡುತ್ತವೆ ಆಲ್ವಾ ?.

- ಗಂಗರಾಜು.ಕು.ಸಿ.

Thursday, October 20, 2011

ಸಣ್ಣ ವ್ಯಥೆ -6

ಒಮ್ಮೊಮ್ಮೆ ಅನಿಸುತ್ತದೆ ಯಾಕೋ , ಈ ಡಾರ್ವಿನ್ ಸಿದ್ಧಾಂತವನ್ನ ಜನರು ಎಲ್ಲಾ ಕಡೆ ಆಚರಣೆಗೆ ತರುತ್ತಿದ್ದಾರೆ ಅಂಥ.ಅದರಲ್ಲೂ ವೃತ್ತಿ ಜೀವನದಲ್ಲಿ ಈ ಸಿದ್ದಾಂತ ಬಹು ಜನರ ಮನಿಸ್ಸಿನ ಮೇಲೆ ನಿರಂತರ ದಾಳಿ ಮಾಡುತ್ತಲೇ ಇರುತ್ತದೆ, ಹಾಗೆಂದು ನಾನು ಇದು ತಪ್ಪು ಅಂಥ ಹೇಳುತ್ತಿಲ್ಲ.ಒಬ್ಬನ ಸೋಲು ಅಥವಾ ಬಲಹೀನತೆ ಮತ್ತೊಬ್ಬನ ಯಶಸ್ಸಿಗೆ ಅಥವಾ ಬೆಳವಣಿಗೆಗೆ ಸಹಾಯವಾಗಬಹುದು , ಆದರೆ ಇದರಲ್ಲಿ ಎಲ್ಲೂ ಸ್ವಾರ್ಥ, ಮೋಸ ಎಂಬ ಅಂಶ ಗಳಿಲ್ಲ. ಆದರೆ ಪರರ ಸೋಲಿಗೆ ನಾವು ಕಾರಣರಾಗಿ, ಆ ಸೋಲಿನ ಮೇಲೆ ಮಹಲ್ ಕಟ್ಟುವುದು ಯಾವ ನ್ಯಾಯ ? .ಈ ಬೆಳವಣಿಗೆ ಇಂದ ಸೋಲೊಪ್ಪಿಕೊಂಡ ಪ್ರಜೆಯ ಮನಸ್ಸಿನ ಮೇಲೆ ಆಗುವ ಆಘಾತ , ಅದರ ಪರಿಣಾಮ ಅವನ ಮನಸ್ಸು ಡಾರ್ವಿನ್ ಸಿದ್ದಾಂತ ಎಲ್ಲೆಡೆಯೂ ವರ್ತಿಸುತ್ತದೆ ಎಂದು ಪ್ರತಿಪಾದಿಸುತ್ತದೆ.
ಇದು ಎಷ್ಟು ಸರಿ , ನನ್ನಲ್ಲಿ ಉತ್ತರವಿಲ್ಲ ?

- ಗಂಗರಾಜು .ಕು.ಸಿ.

Sunday, October 9, 2011

ಸಣ್ಣ ವ್ಯಥೆ -5

ಅಂದು ಚೀನಾ ಗಡಿಯಲ್ಲಿ ಗುಂಡಿನ ಕಾಳಗ ನಡೆಯುತ್ತಲೇ ಇತ್ತು. ನಿರಂತರ ಮಂಜು, ನಿರಂತರ ಗುಂಡಿನ ಸದ್ದು ಅಲ್ಲಿ ಭಯಾನಕ ಸನ್ನಿವೇಶವನ್ನು ಸೃಷ್ಟಿಸಿತ್ತು.ಆದರೆ ಸೈನಿಕ ಸೂರ್ಯಶೇಖರ್ ಇವಕ್ಕೆಲ್ಲ ಅಂಜದೆ ಶತ್ರುಗಳ ಗುಂಪಿನ ಮೇಲೆ ಗುಂಡಿನ ಮಳೆಗೆರೆಯುವಲ್ಲಿ ಮುಂದಾಳಾದರು.ಆ ಕೆಟ್ಟ ಗಳಿಗೆ ಸೂರ್ಯಶೇಖರ್ ರನ್ನು ಬಲಿತೆಗೆದುಕೊಂಡಿತು, ಆ ವೀರ ಮರಣ ಉಳಿದ ಸೈನಿಕರಿಗೆ ಛಲ ಬಿಡದೆ ಹೋರಾಡುವ ಮನಸ್ಥಿತಿ ಕೊಟ್ಟಿತು.ಸುಮಾರು ಮೂರು ದಿನಗಳ ನಂತರ ಸೂರ್ಯ ಶೇಖರ್ ದೇಹವನ್ನು ಅವರ ಹುಟ್ಟುರಿಗೆ ತರಲಾಯಿತು , ಅಂದು ಊರಿನ ಮುಖಂಡರು , ಶಾಸಕರು ಅವರ ಮನೆ ಮುಂದೆ ಜಮಾಯಿಸಿದ್ದರು .ಮಗನ ಕಂಡ ತಾಯಿ ಗರ್ವದಿಂದ ಕಣ್ಣಿರಿಗೆ ಆಸ್ಪದ ಕೊಡದೆ , ತನ್ನ ಎರಡನೇ ಮಗನನ್ನು ಸೇನೆಗೆ ಬಿಳ್ಕೊಟ್ಟಳು.

- ಗಂಗರಾಜು.ಕು.ಸಿ.

Thursday, October 6, 2011

ಸಣ್ಣ ವ್ಯಥೆ -4

ಮಗುವಾಗಿದ್ದಾಗ ಹಾಲಿನ ಬಾಟಲಿ
ಶಾಲೆಗೆ ಹೋಗುವಾಗ ನೀರಿನ ಬಾಟಲಿ
ಕಾಲೇಜಿಗೆ ಸೇರಿಕೊಂಡಾಗ ಬೀರು ಬಾಟಲಿ
ಸಂಬಳ ಬಂದಾಗ ಸ್ಕಾಚ್ ಬಾಟಲಿ
ಮದುವೆಯ ನಂತರ ಸಾರಾಯಿ ಬಾಟಲಿ
ಕೊನೆಯುಸಿರೆಳೆವಾಗ ಗ್ಲುಕೋಸ್ ಬಾಟಲಿ .

- ಗಂಗರಾಜು .ಕು.ಸಿ .


ಸಣ್ಣ ವ್ಯಥೆ -3

ತನ್ನ ಬಾಲ್ಯ ಸ್ನೇಹಿತ ಪ್ರಭುವನ್ನು ಪ್ರೀತಿಸಿ, ಅಪ್ಪ ಅಮ್ಮ ಮತ್ತು ಅಣ್ಣನ ಎದುರು ಹಾಕಿಕೊಂಡು ಮದುವೆಯಾದ ಪುಷ್ಪ ಸಾಸಿವೆ ಹಳ್ಳಿಯಲ್ಲಿ ಸಂಸಾರ ಹೂಡಿದಳು.
ಇದಾಗಿ ೨೦ ವರ್ಷಗಳಾದವು ಪುಷ್ಪನ ಮಗಳು ಲಕ್ಷ್ಮಿ ಸಿ .ಇ. ಟಿ ಪರಿಕ್ಷೆಯಲ್ಲ್ಲಿ ಎಂಟನೆ ರಾಂಕ್ ಗಳಿಸಿದಾಗ ಪುಷ್ಪನ ಅಪ್ಪ ಅಮ್ಮ ,ಮೊಮ್ಮಗಳ ನೋಡಲು ಪುಷ್ಪನ ಅಣ್ಣನ ಮಗನ ಜೊತೆ ಬಂದರು.

ಗಂಗರಾಜು .ಕು.ಸಿ.

ಸಣ್ಣ ವ್ಯಥೆ -2

ಅಂದು ಶ್ರೀ ರಾಮನವಮಿ , ಬೇಸಗೆಯಲ್ಲೂ ಮೋಡಗಳು ಚಂದ್ರನನ್ನು ಕವಿದಿದ್ದವು .ಊರ ಮುಂದೆ ಜನರೆಲ್ಲಾ ಸಂಪೂರ್ಣ ರಾಮಾಯಣ ನಾಟಕವನ್ನು ನೋಡುತ್ತಿದ್ದಾರೆ . ಆದರೆ ಹೊಗೆಸೊಪ್ಪು ಮಾರುವ ರಾಮಣ್ಣನ ಹೆಂಡತಿ ಸೀತಕ್ಕನನ್ನು ಅವರ ಅತ್ತೆ ನಾಗವ್ವ ಇಲ್ಲ ಸಲ್ಲದ ಆರೋಪ ಹೊರಿಸಿ ಮಗನಿಗೆ ಚಾಡಿ ಸುತ್ತುತಿದ್ದಾಳೆ.ಅತ್ತ , ಸೀತಾ ಮಾತೆಯ ಅಗ್ನಿಪ್ರವೇಶ ಸ್ಥಿತಿಯನ್ನು ನೋಡಿ ಮರುಕ ಪಟ್ಟ ಜನ ಎದ್ದು ತಮ್ಮ ತಮ್ಮ ಮನೆಗಳಿಗೆ ಹೊರಟರು.ನಾಗವ್ವ ತನ್ನ ಪಟ್ಟು ಬಿಡದೆ ಸೀತಕ್ಕನಿಗೆ ಪಾಪಿ ಪಟ್ಟ ಕಟ್ಟಿದಳು , ಅಷ್ಟು ಸಾಲದೆನ್ನುವಂತೆ ಸೀತಕ್ಕನ ಮೇಲೆ ಸೀಮೆ ಎಣ್ಣೆ ಸುರಿದಳು. ಆದರೆ ಜನರು ಮಳೆ ಬರುವ ಮುನ್ನ ಮನೆ ಸೇರಿಕೊಂಡರು.ಚಂದ್ರನನ್ನು ಕಾರ್ಮೋಡಗಳು ಆವರಿಸಿ ಮತ್ತಷ್ಟು ಮಳೆಯಾಯಿತು.

ಗಂಗರಾಜು . ಕು.ಸಿ.


ಸಣ್ಣ ವ್ಯಥೆ -1

ಅಲ್ಲೇ ಕುಳಿತಿದ್ದ ಕಾಳಜ್ಜ ಕೂಗಿ ಕೂಗಿ ಕರೆದರೂ ಕೇಳದೆ ೧೫ ವರ್ಷದ ಓಬಳೇಶ ತೋಟಕ್ಕೆ ನುಗ್ಗಿದ, ಅದು ಯುಗಾದಿಯ ಮಾರನೆಯ ದಿನ ಅಲ್ಲಿ ಊರಿನ ಹಿರಿಯರು ಅಂಥ ಅನಿಸಿಕೊಂಡವರೆಲ್ಲ ಜೂಜಿನಲ್ಲಿ ಮಗ್ನರಾಗಿದ್ದರು ಜೊತೆಗೆ ತೀರ್ಥ ಸಹ ಅವರೆಲ್ಲರ ಕೈ ಮತ್ತು ಮೈಯಲ್ಲಿ ಮಿನುಗುತಿತ್ತು . ದೊಡ್ಡ ಬ್ಯಾಲ್ಯದ ಪುಟ್ಟಿ ಮತ್ತು ತಂಡ ತಮ್ಮದೇ ಆದ ನೃತ್ಯದಲ್ಲಿ ರಾರಾಜಿಸುತ್ತಿದ್ದರು.ಓಬಳೇಶ ತನ್ನ ಅಪ್ಪನ ಜೊತೆ ಬೆರೆತು ತಾತನ ಆಸ್ತಿಯನ್ನು ಪಣಕ್ಕೆ ಇಟ್ಟ.
- ಗಂಗರಾಜು ಕು.ಸಿ .

Tuesday, October 4, 2011

ಹೀಗೊಂದು ದಿನ ನನ್ನ ಮನ - ಗಾಂಧೀ ಜಯಂತಿ


ಅಂದು ಬುಧುವಾರ, ಎಲ್ಲರು ಒಂದು ಪಿರೇಡ್ ಮತ್ತು  ಇನ್ನೊಂದು ಪಿರೇಡ್ ನಡುವಿನ ಸಮಯವನ್ನ ಸಂತೋಷದಿಂದ ಕಿರುಚಾಡಿಕೊಂಡು  ಕಳಿತ ಇದಿವಿ, ಆಗ ತಾನೇ  ನಿದ್ದೆ ಇಂದ ಎದ್ದ ವೆಂಕಟ ಸ್ವಾಮಿ  ಕಣ್ಣು ಉಜ್ಜುಕೊಂಡು,ಜೊಲ್ಲು ವರೆಸಿ ಕೊಳ್ಳುತ್ತಿದ್ದ , ಇನ್ನು ಕೆಲವರು ತಮ್ಮ ಗುಂಪು ಘರ್ಷಣೆ ಬಗ್ಗೆ ಗಹನವಾಗಿ ಹುಚ್ಚು ಹುಚ್ಚು ಮಾತುಗಳನ್ನಡುತ್ತಿದರು , ಮತ್ತು ಯಥಾ ಪ್ರಕಾರ ಹುಡುಗಿಯರು ಪುಸ್ತಕ  ನೋಡುವ ಹಾಗೆಯೋ ಅಥವಾ ಏನೋ ಬರೆಯುವ ಹಾಗೆಯೋ , ಇನ್ನು ಕೆಲವರು ತಮ್ಮ ಎರಡು ಜಡೆಗಳ ರಿಬ್ಬೊನ್ ಅಥವಾ  ರಬ್ಬೆರ್  ಅನ್ನು ಸರಿಪಡಿಸಿಕೊಳ್ಳುವ ಹಾಗೆಯೋ  ತಮ್ಮನ್ನು ತಾವು ನಿರ್ದೆಶಿಸಿಕೊಳ್ಳುತಿದ್ದರು, ಆದರೆ ನಾನು ಮಾತ್ರ ಎದ್ದು ಬೋರ್ಡ್ ನ್ನು , ನಮ್ಮ ಶಾಲೆಯ ಮತ್ತು ನಮ್ಮ ಕ್ಲಾಸಿನ ದರ್ಜಿಯ ಮಗ ಹರೀಶ ಅವರ ಅಮ್ಮ ಹೊಲಿದ ಬಣ್ಣ ಬಣ್ಣದ ಡಸ್ಟರ್ ನಿಂದ , ಆಗ ತಾನೆ ವಿಜ್ಞಾನದ ಮೇಡಂ ಗಬ್ಬು ಎಬ್ಬಿಸಿದ ಬೋರ್ಡ್ ನ್ನು  ಒರೆಸುವ ಕಾಮಗಾರಿಯಲ್ಲಿ ತೊಡಗಿದ್ದೆ . ಅಂದು ನಾವು ಮಾಡಿದ ಗಲಾಟೆ , ಗೌರಿಬಿದನೂರಿನ ಭಾನುವಾರದ ಸಂತೆಯ ದಿನ ಕುರಿ ಕೋಳಿ ಹರಾಜು ಹಾಕುವ ಚಿತ್ರಣದ ಹಾಗೆ ಮೂಡಿ,ಮುಗಿಲಿಗೆರಿತ್ತು.

   ಆಗ ಬಂದ್ರು ನೋಡಿ, ನಮ್ಮ ಶಾಲೆಯ ಹೆಡ್ ಮೇಡಂ , ಆಕೆ ಬಂದು ಎದುರಿಗೆ ನಿಂತರೆ ಒಂದನೇ ತರಗತಿ ಮಕ್ಕಳಿಗೆ ಆ ದಿನ  ಒಂದಕ್ಕೆ ಹೋಗುವ ಅವಶ್ಯಕತೆ ಇರುತ್ತಿರಲಿಲ್ಲ , ಆಕೆ ಎರಡನೇ ತರಗತಿ ಮಕ್ಕಳಿಗೆ ಬ್ಯೆದರೆ ಆ ದಿನ ಅವಕ್ಕೆ ಚಳಿ ಜ್ವರ ಪಕ್ಕಾ , ಮೂರನೇ ತರಗತಿ ಇಂದ ಮೇಲ್ಪಟ್ಟ ಮಕ್ಕಳು ಒಂದೇ ಸಮನೆ ನಡುಗುತ್ತಿದ್ದ ಕಾಲ ಅದು. ನಮ್ಮ ಹೆಡ್ ಮೇಡಂ ಒಂದು ಹವಾ ಇಟ್ಟಿದ್ರು . ಇಗಲೂ ಆ ಕ್ಷಣ ನೆನಸಿಕೊಂಡರೆ , ಕನಸಿನಲ್ಲೂ ಎಚ್ಚರವಾಗುತ್ತದೆ. 
ನಮ್ಮ ಹೆಡ್ ಮೇಡಂ ಬಂದು ಕ್ಲಾಸಿನಲ್ಲಿ ನಿಂತಿದ್ದಾರೆ , ಆದ್ರೆ ನಮ್ಮೆಲ್ಲರ ಗಮನ ಅವರ ಬಲಗೈಯ ದಬ್ಬೆಯ ಮೇಲೇನೆ. ಈ ದಬ್ಬೆಗು ಒಂದು ಸ್ವಾರಸ್ಯ ಇದೆ . ನನ್ನ ತಾತ ನಾಯಿ ಓಡಿಸಲು ಎಂದು ತಂದಿಟ್ಟು ಕೊಂಡಿದ್ದ  ಆ ದಬ್ಬೆಯನ್ನು , ನನ್ನ ಖೋ-ಖೋ ಆಟಕ್ಕೆ ಸೇರಿಸಿಕೊಳ್ಳಲಿ ಎಂಬ ದೂರ ಆಲೋಚನಇಂದ ನಾನೇ PT ಮೇಸ್ಟ್ರಿಗೆ ಗಿಫ್ಟ್ ಮಾಡಿದ್ದೆ . ಆದರೆ ಆ ದಬ್ಬೆ ಇಂದು ನಮ್ಮ ಹೆಡ್ ಮೇಡಂ ಕೈ ಸೇರಿತ್ತು. 
ಅವರು ಬಂದ ತಕ್ಷಣ ಲಗು ಬಗನೆ ಬೋರ್ಡ್ ಕ್ಲೀನ್ ಮಾಡಿ ನನ್ನ ಜಾಗಕ್ಕೆ ಬಂದು ನಿಂತೆ, ಅವರ ಮುಖ ನೋಡುವ ಧೈರ್ಯ ಅಲ್ಲಿದ್ದ ೭೦ ವಿಧ್ಯಾರ್ಥಿಗಳಲ್ಲಿ ಯಾರಿಗೂ ಇರಲಿಲ್ಲ. ಆಗ ಅವರ ಬಾಯಲಿ ಬಂದ ಪ್ರಥಮ ವಾಕ್ಯ,
"ಇದೇನು ಕ್ಲಾಸೋ ಇಲ್ಲ ಮಾರ್ಕೆಟ್ಟೋ" , ನಮಗೆಲ್ಲ ಈ ಸಂಭಾಷಣೆ ಮುಂಚೆನೇ ತಿಳಿದಿದ್ದರಿಂದ ಯಾರಲ್ಲೂ ಅದನ್ನು ಕೇಳಿಸಿಕೊಳ್ಳುವ ಹುಮ್ಮಸ್ಸು  ಇರಲಿಲ್ಲ  , ನಾವೆಲ್ಲರೂ ಭಾರತ ಕ್ರಿಕೆಟಿಗರು ೨೦೦೭ ವಿಶ್ವ ಕಪ್ ನಲ್ಲಿ ಹೊರಬಿದ್ದಾಗ ತಲೆ ಬಗ್ಗಿಸಿದ್ದರಲ್ಲ ಹಾಗೆ ನಮ್ಮ ತಲೆಯು ಇಳಿಮುಖವಾಗಿತ್ತು , ಆದರೆ ಕೆಲವರು ಹುಡುಗಿಯರು ಮಾತ್ರ ಇನ್ನು ತಮ್ಮ ಜಡೆಗಳನ್ನು ಸರಿ ಮಾಡಿ ಕೊಳ್ಳುತ್ತಲೇ ಇದ್ದರು .

ಅವರು ದಣಿವಾರುವವರೆಗೂ ತಮಗೆ ತಿಳಿದಸ್ತು ಮತ್ತು ನಮ್ಮ ದೆಸಇಂದ ಕಲಿತಿದ್ದ ಅಷ್ಟು ವಾಕ್ ಚಾತುರ್ಯವನ್ನು ಮುಗಿಸಿ 
"ಕುಕ್ಕರಿಸಿ" ಎಂದು ತಮ್ಮ ಕೈಲಿದ್ದ ದಬ್ಬೆಯನ್ನು ಮೇಜಿನ ಮುಖಕ್ಕೆ ಟಪ್ಪನೆ ಬಡಿದರು. ಆ ರಭಸಕೆ ಮೇಜಿನ ಬಲಗಾಲು ನೆಲಕ್ಕೆ ಬಡಿದು , ತನ್ನ ಅಭಿ ಮುಖವಾದ ಇನ್ನೊಂದು ಕಾಲನ್ನು ಮೇಲೆತ್ತಿಸಿ , ನೃತ್ಯವಾಡ ತೊಡಗಿತ್ತು , ಆ ಚಿತ್ರಣ ನಮ್ಮೆಲ್ಲರ ಗಮನ ಅತ್ತ  ಕೊಂಡೊಯ್ಯಿತು , ಅಲ್ಲೇ ಪಕ್ಕದಲ್ಲಿ ಕುಳಿತಿದ್ದ "ಮುನಿ ಕೃಷ್ಣ " ಅದನ್ನು ಸುಮ್ಮನಿರಿಸಿದನು.

 ಹೆಡ್ ಮೇಡಂ ವಿಷಯಕ್ಕೆ ಬಂದರು ,
"ಯಾರಡ್ರೋ ಕ್ಲಾಸ್ ಇವಾಗ ?" ,
ನಾವೆಲ್ಲರೂ ಚ ಕಾರ ವೆತ್ತದೆ ತಲೆ ಬಗ್ಗಿಸಿಯೇ ಮುನಿಕ್ರಿಷ್ಣನ ಬಗ್ಗೆ ಬೈದು ಕೊಳ್ಳುತಿದ್ದೆವು.
ಮತ್ತೊಮ್ಮೆ ತಮ್ಮ ಕೈಲಿದ್ದ ದಬ್ಬೆಯನ್ನು ಮೇಜಿಗೆ ಜೋರಾಗಿ ಬಡಿದರು , ಆದ್ರೆ ಈ ಬಾರಿ ಮುನಿಕೃಷ್ಣ ಮುಂದಾಲೋಚನೆಇಂದ ಮೇಜಿನ ಕಾಲನ್ನು ಎತ್ತಿ ಹಿಡಿದಿದ್ದ.
ಆಗ ನಮ್ಮ ಕ್ಲಾಸಿನ ಅತಿ ಬುದ್ದಿವಂತೆ ಎಂದು ಹೆಸ್ರು ಮಾಡಿಕೊಂಡಿದ್ದ ಅಥವಾ ಹೆಸರಿಸಿಕೊಂಡಿದ್ದ , ಪೋಲಿಸಪ್ಪನ ಮಗಳು ಬೃಂದಾ " ಈಗ ಸಮಾಜ ಕ್ಲಾಸು ಮಿಸ್ " ಅಂಥ ಹೇಳಿದಳು .
"ಸಮಾಜ ಅಂದ್ರೆ ಸಿದ್ದಪ್ಪ ತಾನೇ" ಎಂದು ಮೇಡಂ ಸ್ವಲ್ಪ ಗಟ್ಟಿಯಾಗಿ ಕೇಳಿದರು.
ಎಲ್ಲರು ಒಂದೇ ಸಮನೆ "ಊನೀ ಮಿಸ್" ಎಂದೆವು.
ಈ ಊನೀ ಎಂದರೆ , ನಮಗೆ ತಿಳಿದಿದ್ದ ಕನ್ನಡಿಕರಿಸಿದ್ದ OK ಎಂದರ್ಥ, ಆದರೆ ಸಂಸ್ಕೃತದಲ್ಲಿ ಊನೀ ಎಂದರೆ ಬೆಕ್ಕು ಅಂಥ ಆಮೇಲೆ ಗೊತ್ತಾಯ್ತು.

ಇಷ್ಟು ಸೀನ್ ಗಳು ನಡೆಯುತ್ತಿದ್ದ ಹಾಗೆ , ಮಾನ್ಯ ಮತ್ತು ನನ್ನ ನೆಚ್ಚಿನ ಮೆಸ್ಟ್ರಾಗಿದ್ದ ಸಿದ್ದಪ್ಪನವರು ,
ಶಾಲೆಯ ಹಿಂದೆ ಹೋಗಿ ಸರಸ್ವತಿ ಬಿಡಿ ಕುಡಿದು ಆರಾಮಾಗಿ ,ಒಂದು ನಿಂಬೆ ಹುಳಿ ಚಪ್ಪರಿಸುತ್ತ ,ಕೊಠಡಿಯ ಮುಂದೆ ಬಂದು ಹೆಡ್ ಮೇಡಂನಾ ನೋಡಿ ತಪ್ಪೆಸಗಿದ ಬುದ್ದಿವಂತನಂತೆ ನಗೆ ಬೀರಿದರು. ಆದ್ರೆ ಮೇಡಂ ಇದಕ್ಕೆಲ್ಲ ಸೊಪ್ಪು ಹಾಕದೆ , ಕ್ಲಾಸ್ ಮುಗಿದ ನಂತರ ನನ್ನ ರೂಮಿಗೆ ಬನ್ನಿ ಎಂದು ಹೇಳಿ ದಬ್ಬೆಯನ್ನು ಅಲ್ಲೇ ಬಿಟ್ಟು ಕಾಲ್ಕಿತ್ತರು.

ಶ್ರೀ ಸಿದ್ದಪ್ಪನವರು ಎಂದಿನಂತೆಯೇ , ಒಂದೆರಡು ಹಿತವಚನಗಳನ್ನು ಹೇಳ ತೊಡಗಿದರು, ಈ ಪಿರೇಡ್ಗಳ ಮದ್ಯದ ಸಮಯವನ್ನ, ನೆನ್ನೆ ನಾನು ಹೇಳಿದ ಪಾಠವನ್ನ ಮೆಲುಕು ಹಾಕೋಕೆ ಉಪಯೋಗಿಸಿಕೊಳ್ಳಿ , ಹಾಗೆ , ಹೀಗೆ ಎಂದು ತಮ್ಮ ಹಿತ ವಚನ ಕಾರ್ಯಕ್ರಮ ಮುಗಿಸಿದರು. ಇಷ್ಟೆಲ್ಲಾ ಸಮಾರಾಧನೆ ನಡೆಯುವ ಹೊತ್ತಿಗೆ ೪:೧೦ ನಿಮಿಷ ವಾಗಿತ್ತು.
ಎಂದಿನಂತೆ ಪಾಠಕ್ಕೆ  ಹಾರಿದರು ಮೇಸ್ಟ್ರು, ಅಂದು  "ಭೂಗೋಳ" ವಿಷಯದಲ್ಲಿ "ಶ್ರೀಲಂಕ" ಎಂಬ ಪಾಠದ   ಬಗ್ಗೆ , ಸಿದ್ದಪ್ಪನವರು ಚಾಕ್ ಪೀಸ್  ತೆಗೆದುಕೊಂಡು , ಆಗ ತಾನೆ ನಾನು ಸ್ವಚ್ಛ ಗೊಳಿಸಿದ್ದ ಬೋರ್ಡ್ ಮೇಲೆ "ಶ್ರೀಲಂಕ" ಎಂದು ಕೊರೆದರು.
ನಾನು ಮತ್ತು ಸುನಿಲ ಮಾತ್ರ " ಜಯಸೂರ್ಯ , ರಣತುಂಗ, ಅಟಪಟ್ಟು , ಮುತ್ತಯ್ಯ ಮುರಳೀಧರನ್, ಡಿ ಸಿಲ್ವ , ಧರ್ಮಸೇನ " ಎಂದು ಒಂದಷ್ಟು ಹೆಸರುಗಳನ್ನೂ 
ನಮ್ಮ ಹತ್ತಿರ ಕುಳಿತಿದ್ದ ಕ್ರಿಕೆಟ್ ಅಜ್ಞಾನಿಗಳ ಬಳಿ ನಮ್ಮ ಕ್ರಿಕೆಟ್ ಜ್ಞಾನವನ್ನ ಪ್ರದರ್ಶಿಸಿದೆವು. ಸಿದ್ದಪ್ಪನವರು ಅವರ ಪಾಡಿಗೆ ಅವರು ಶ್ರೀಲಂಕಾದ ಇಡೀ  ಬೌಗೋಳಿಕ ವಿಷಯಗಳಾದ ವಿಸ್ತಿರಣ , ವಾತಾವರಣ , ನಕ್ಷೆ , ರಾಜಧಾನಿ , ಜನ ಜೀವನ ಎಂಬಿತ್ಯಾದಿ ವಿಷಯಗಳ ಬಗ್ಗೆ ಬೋರ್ಡ್ ತುಂಬಿಸಿ ಬಿಟ್ಟಿದ್ದರು, ಅದನ್ನು ಹಾಗೆಯೇ ನಮ್ಮ ಕ್ಲಾಸಿನ ಹುಡುಗಿಯರು ಪೆನ್ಸಿಲ್  ಮತ್ತು ರಬ್ಬರ್ ಸಹಾಯದಿಂದ ನೊಣ ಕಾಪಿ ಮಾಡಿದರು.

ಹಿಂದಿನ ಸಾಲಿನಲ್ಲಿ ಕುಂತಿದ್ದ ವೆಂಕಟ ಸ್ವಾಮಿ ಮತ್ತೊಂದು ನಿದ್ದೆಗೆ ಜಾರಿ ಬಹಳ ಹೊತ್ತಾಗಿತ್ತು , ಆಗ ಸಮಯ ೪:೩೦ ನಿಮಿಷ , ಇನ್ನು ಕೇವಲ ೧೦ ನಿಮಿಷಕ್ಕೆ ಕೊನೆಯ ಬೆಲ್ಲು ,ಹಾಗಾಗಿ ನಾವೆಲ್ಲರೂ ನಮ್ಮ ನಮ್ಮ ಅಸ್ತ್ರ ಮತ್ತು ಶಾಸ್ತ್ರಗಳನ್ನು ಬ್ಯಾಗಿಗೆ ತುಂಬಿಕೊಂಡು, ಟುಪ್ ಟುಪ್ ಎಂದು ಬಟನ್  ಏರಿಸಿ ಖೋ-ಖೋ ಆಟದಲ್ಲಿ ಖೋ ಗೆ ಕಾಯುತ್ತಿರುವ ಆಟಗಾರರಂತೆ ಸಜ್ಜಾದೆವು. ಕೆಲವರು ಹುಡುಗಿಯರು ಸಹ ತಮ್ಮ ಟಿಫನ್ ಬಾಕ್ಸ್ , ಸೌಂದರ್ಯ ಸಲಕರಣೆ ಮತ್ತು ಬೈಂಡ್ ಹಾಕಿದ ಪುಸ್ತಕಗಳನ್ನು ಅಚ್ಚು ಕಟ್ಟಾಗಿ ಬ್ಯಾಗಿಗೆ ಇಳಿಸಿದರು . ಆದ್ರೆ ಮುಂದಿನ ಬೆಂಚಿನ ಹುಡುಗರು ಮತ್ತು ಹುಡುಗಿಯರು ಮಾತ್ರ ಇನ್ನು ಸಿದ್ದಪ್ಪನವರ ಪಾಠ ವನ್ನು ಕೇಳುತ್ತಲೇ ಇದ್ದರು.

ಆಗ ಬಂದ್ರು ನೋಡಿ ಪ್ರಕಾಶಣ್ಣ, ಇವರು ನಮ್ಮ ಶಾಲೆಯಲ್ಲಿ ಮಾಡದ ಕೆಳಸಗಳಿರಲಿಲ್ಲ ಒಂಥರಾ ಇವರು ನಮ್ಮ ಶಾಲೆಯ ಮೇಕೆ ಇದ್ದ ಹಾಗೆ , ಅದು ತಿನ್ನದ ಸೊಪ್ಪು ಇಲ್ಲ ಇವರು ಮಾಡದ ಕೆಲಸಗಳು ಇರ್ತಿರಲಿಲ್ಲ , ಹಾಗು ಹೀಗೂ ಎಲ್ಲರು ಇವರ್ನ ಬಕ್ರ ಮಾಡ್ತಾ ಇರೋವ್ರು .
ಇವರು ಕ್ಲಾಸಿಗೆ ಬಂದ್ರೆ ನಮಗೆಲ್ಲ ಒಂದು ಸಂತೋಷ ಮತ್ತು ಅಚ್ಚರಿ , ಅಂದು ಪ್ರಕಾಶಣ್ಣ ತಂದಿದ್ದ ಅಚ್ಚರಿ "ಮೆಮೋ"  , ಆ ಮೆಮೋ ಪುಸ್ತಕವನ್ನು ಸಿದ್ದಪನ ಕೈಗಿಟ್ಟ ಪ್ರಕಾಶಣ್ಣ ಕೊಠಡಿಯ  ಆಚೆ ಹೋಗಿ ನಿಂತರು. ಆಗ ನಾವೆಲ್ಲರೂ ಅದರಲ್ಲಿ ಏನು ಇದೆಯೋ , ಏನು ಕತೆನೋ ಎಂಬಂತೆ " ಶ್ರೀಶಾಂತ್  ಎದುರಾಳಿ ಬ್ಯಾಟ್ಸಮನ್ ನಾ ಗುರಾಯಿಸುವ  ಹಾಗೆ ನಾವು ವಾರೆಗಣ್ಣಲ್ಲಿ ಸಿದ್ದಪ್ಪರ ಕಡೆ ನೋಡಿದೆವು",
"ನಾಳೆ ಗಾಂಧಿ ಜಯಂತಿ , ನೀವೆಲ್ಲರೂ ತಪ್ಪದೆ ಸಮವಸ್ತ್ರ ಧರಿಸಿ ಬೆಳಗ್ಗೆ ೭:೩೦ ಕ್ಕೆ ಸರಿಯಾಗಿ ಶಾಲೆಯ ಆವರಣದಲ್ಲಿ ಇರಬೇಕು , ಯಾರಾದ್ರೂ ತಪ್ಪಿಸಿಕೊಂಡರೆ ಅವರು ತಮ್ಮ ಪೋಷಕರನ್ನು ಶುಕ್ರವಾರ ಶಾಲೆಗೇ ಬರುವ ಮುಂಚೆ ಕರೆತರಬೇಕು" ಎಂದು ಓದಿ ಮುಗಿಸಿ ಸಹಿ ಹಾಕಿದರು .

ಈ ಸನ್ನಿವೇಶ ನಡೆದದ್ದು ಅಕ್ಟೋಬರ್ ೧ , ೧೯೯೭ ರಲ್ಲ್ಲಿ , ಆಗ ನಾನು ೬ನೆ ತರಗತಿಯಲ್ಲಿದ್ದೆ, ತಕ್ಷಣವೇ ೪:೪೦ ನಿಮಿಷದ ಕೊನೆಯ ಬೆಲ್ ಅನ್ನು ಪ್ರಕಾಶಣ್ಣನ ಮಗ ಅನಿಲ , ಧಣ ಧಣ ಎಂದು ಬಾರಿಸಿದ , ನಾವು ಕೂಡ ಜೈಲಿನಿಂದ ತಪ್ಪಿಸಿಕೊಂಡ ಕೈದಿಗಳಂತೆ ಕಾಲ್ಕಿತ್ತು, ಯಥಾ ಪ್ರಕಾರ "ಬೌಂಡರಿ ಕ್ರಿಕೆಟ್ " ಅಡಲು ಸಜ್ಜಾದೆವು .

ಈಗಲೂ ನನಗೆ ಗಾಂಧಿ ಜಯಂತಿಯಂದರೆ , ನನ್ನ ತತ್ಕ್ಷಣದ ಚಿಂತನೆ ಈ ಪ್ರಸಂಗ , ನಮ್ಮ ಶಾಲೆಯಲ್ಲಿ ಅಕ್ಟೋಬರ್ ೨ ರಂದು , ಬೆಳಗ್ಗೆ ೮ ರಿಂದ ೧೦ ರವರೆಗೆ ಮಾಡಿಸುತ್ತಿದ್ದ  , ಶಾಲೆಯ ಮೈದಾನದ ಸ್ವಚ್ಚ್ಹಗೊಳಿಸುವಿಕೆ , ಶಾಲೆಯ ಅಷ್ಟು  ಕೊಠಡಿ , ಬೆಂಚು , ಮೇಜುಗಳನ್ನು ಸ್ವಚ್ಛ ಮಾಡುವುದು , ಮತ್ತು ನಮ್ಮ ಶಾಲೆಯ ಮೈದಾನದಲ್ಲಿ ಬೆಳೆದ ಪಾರ್ತೆನಿಯುಂನಾ  ಬುಡಮಟ್ಟ ಕೀಳುವುದು , ಇವೆ ಮೊದಲಾದುವ ನಮ್ಮ ಕೆಲಸಗಳು.
ಇಷ್ಟು ಕೆಲಸದ ನಂತರ , ಮಹಾತ್ಮ ಗಾಂಧೀ ಅವರ ಬಗ್ಗೆ ಅಂದಿನ ಕಾರ್ಯಕ್ರಮದ ಅಧ್ಯಕ್ಷರು , ನಮ್ಮ ಹೆಡ್ ಮೇಡಂ , ಪ್ರೌಢ ಶಾಲೆಯ ಹೆಡ್ ಮಾಸ್ತರರು , ಒಂದಷ್ಟು ವಿಧ್ಯಾರ್ಥಿಗಳು ಒಳ್ಳೆಯ ವಿಷಯಗಳನ್ನ ಹೇಳುತಿದ್ದರು , ಮತ್ತು ನಾವೆಲ್ಲರೂ ತಪ್ಪದೆ "ರಘುಪತಿ ರಾಘವ ರಾಜಾರಾಮ್ " ಹಾಡನ್ನು ರಾಗವಾಗಿ ಹೇಳಲು ಪ್ರಯತ್ನಿಸುತ್ತಿದ್ದೆವು . ಅಂದು ನಾವು ಪಟ್ಟ ದೈಹಿಕ ಶ್ರಮ ,ನಮ್ಮ ಗುರುಗಳು ಹೇಳಿದ ಒಳ್ಳೆಯ ವಿಷಯಗಳು ಇಂದು ನಮ್ಮ ಜೀವನದಲ್ಲಿ ಅಳವಡಿಕೊಳ್ಳಲು ಪ್ರಯತ್ನಿಸಿದ್ದೇವೆ ಮತ್ತು ಕೆಲವೊಮ್ಮೆ ಪಾಲಿಸಿದ್ದೇವೆ . 
ಆದ್ರೆ ಈಗ , ಗಾಂಧೀ ಜಯಂತಿ ಒಂದು ಕೇವಲ ರಜಾದಿನವಾಗಿದೆ , ಸುಮಾರು  ಶಾಲೆಗಳು ಗಾಂಧೀ ಜಯಂತಿಯನ್ನ  ಆಚರಿಸುವ ಗೋಜಿಗೂ ಹೋಗುವುದಿಲ್ಲ ಅಥವಾ ಅಪ್ಪಿ ತಪ್ಪಿ ಆಚರಿಸಿದರು ಪೋಷಕರು ಅಂದು ತಮ್ಮ ಮಕ್ಕಳನ್ನು ಶಾಲೆಗೇ ಕಳಿಸುವುದಿಲ್ಲ.
ಈಗಿನ ಮಕ್ಕಳಿಗೆ ಗಾಂಧೀಜಿ ಎಂದರೆ ಕೇವಲ ನೋಟಿನ ಮೇಲೆ ಇರೋ ಯಾರೋ  ವ್ಯಕ್ತಿ ಅಷ್ಟೇ  ಅಥವಾ ಅವರ ಜ್ಞಾನಕ್ಕೆ "may be he is first reserve bank governer"  ಎಂದೋ ಕಲ್ಪಿಸಿಕೊಳ್ಳುವ ಸ್ಥಿತಿಗೆ,ನಮ್ಮ ಭವ್ಯ sorry ಭ್ರಷ್ಟ ಭಾರತವನ್ನ ತರಬೇಡಿ ಎಂದು ವಿಜ್ಞಾಪಿಸಿಕೊಳ್ಳುತ್ತ ,
ಇಂತಿ ನಿಮ್ಮ
ಗಂಗರಾಜು .ಕು.ಸಿ .