Tuesday, October 4, 2011

ಹೀಗೊಂದು ದಿನ ನನ್ನ ಮನ - ಗಾಂಧೀ ಜಯಂತಿ


ಅಂದು ಬುಧುವಾರ, ಎಲ್ಲರು ಒಂದು ಪಿರೇಡ್ ಮತ್ತು  ಇನ್ನೊಂದು ಪಿರೇಡ್ ನಡುವಿನ ಸಮಯವನ್ನ ಸಂತೋಷದಿಂದ ಕಿರುಚಾಡಿಕೊಂಡು  ಕಳಿತ ಇದಿವಿ, ಆಗ ತಾನೇ  ನಿದ್ದೆ ಇಂದ ಎದ್ದ ವೆಂಕಟ ಸ್ವಾಮಿ  ಕಣ್ಣು ಉಜ್ಜುಕೊಂಡು,ಜೊಲ್ಲು ವರೆಸಿ ಕೊಳ್ಳುತ್ತಿದ್ದ , ಇನ್ನು ಕೆಲವರು ತಮ್ಮ ಗುಂಪು ಘರ್ಷಣೆ ಬಗ್ಗೆ ಗಹನವಾಗಿ ಹುಚ್ಚು ಹುಚ್ಚು ಮಾತುಗಳನ್ನಡುತ್ತಿದರು , ಮತ್ತು ಯಥಾ ಪ್ರಕಾರ ಹುಡುಗಿಯರು ಪುಸ್ತಕ  ನೋಡುವ ಹಾಗೆಯೋ ಅಥವಾ ಏನೋ ಬರೆಯುವ ಹಾಗೆಯೋ , ಇನ್ನು ಕೆಲವರು ತಮ್ಮ ಎರಡು ಜಡೆಗಳ ರಿಬ್ಬೊನ್ ಅಥವಾ  ರಬ್ಬೆರ್  ಅನ್ನು ಸರಿಪಡಿಸಿಕೊಳ್ಳುವ ಹಾಗೆಯೋ  ತಮ್ಮನ್ನು ತಾವು ನಿರ್ದೆಶಿಸಿಕೊಳ್ಳುತಿದ್ದರು, ಆದರೆ ನಾನು ಮಾತ್ರ ಎದ್ದು ಬೋರ್ಡ್ ನ್ನು , ನಮ್ಮ ಶಾಲೆಯ ಮತ್ತು ನಮ್ಮ ಕ್ಲಾಸಿನ ದರ್ಜಿಯ ಮಗ ಹರೀಶ ಅವರ ಅಮ್ಮ ಹೊಲಿದ ಬಣ್ಣ ಬಣ್ಣದ ಡಸ್ಟರ್ ನಿಂದ , ಆಗ ತಾನೆ ವಿಜ್ಞಾನದ ಮೇಡಂ ಗಬ್ಬು ಎಬ್ಬಿಸಿದ ಬೋರ್ಡ್ ನ್ನು  ಒರೆಸುವ ಕಾಮಗಾರಿಯಲ್ಲಿ ತೊಡಗಿದ್ದೆ . ಅಂದು ನಾವು ಮಾಡಿದ ಗಲಾಟೆ , ಗೌರಿಬಿದನೂರಿನ ಭಾನುವಾರದ ಸಂತೆಯ ದಿನ ಕುರಿ ಕೋಳಿ ಹರಾಜು ಹಾಕುವ ಚಿತ್ರಣದ ಹಾಗೆ ಮೂಡಿ,ಮುಗಿಲಿಗೆರಿತ್ತು.

   ಆಗ ಬಂದ್ರು ನೋಡಿ, ನಮ್ಮ ಶಾಲೆಯ ಹೆಡ್ ಮೇಡಂ , ಆಕೆ ಬಂದು ಎದುರಿಗೆ ನಿಂತರೆ ಒಂದನೇ ತರಗತಿ ಮಕ್ಕಳಿಗೆ ಆ ದಿನ  ಒಂದಕ್ಕೆ ಹೋಗುವ ಅವಶ್ಯಕತೆ ಇರುತ್ತಿರಲಿಲ್ಲ , ಆಕೆ ಎರಡನೇ ತರಗತಿ ಮಕ್ಕಳಿಗೆ ಬ್ಯೆದರೆ ಆ ದಿನ ಅವಕ್ಕೆ ಚಳಿ ಜ್ವರ ಪಕ್ಕಾ , ಮೂರನೇ ತರಗತಿ ಇಂದ ಮೇಲ್ಪಟ್ಟ ಮಕ್ಕಳು ಒಂದೇ ಸಮನೆ ನಡುಗುತ್ತಿದ್ದ ಕಾಲ ಅದು. ನಮ್ಮ ಹೆಡ್ ಮೇಡಂ ಒಂದು ಹವಾ ಇಟ್ಟಿದ್ರು . ಇಗಲೂ ಆ ಕ್ಷಣ ನೆನಸಿಕೊಂಡರೆ , ಕನಸಿನಲ್ಲೂ ಎಚ್ಚರವಾಗುತ್ತದೆ. 
ನಮ್ಮ ಹೆಡ್ ಮೇಡಂ ಬಂದು ಕ್ಲಾಸಿನಲ್ಲಿ ನಿಂತಿದ್ದಾರೆ , ಆದ್ರೆ ನಮ್ಮೆಲ್ಲರ ಗಮನ ಅವರ ಬಲಗೈಯ ದಬ್ಬೆಯ ಮೇಲೇನೆ. ಈ ದಬ್ಬೆಗು ಒಂದು ಸ್ವಾರಸ್ಯ ಇದೆ . ನನ್ನ ತಾತ ನಾಯಿ ಓಡಿಸಲು ಎಂದು ತಂದಿಟ್ಟು ಕೊಂಡಿದ್ದ  ಆ ದಬ್ಬೆಯನ್ನು , ನನ್ನ ಖೋ-ಖೋ ಆಟಕ್ಕೆ ಸೇರಿಸಿಕೊಳ್ಳಲಿ ಎಂಬ ದೂರ ಆಲೋಚನಇಂದ ನಾನೇ PT ಮೇಸ್ಟ್ರಿಗೆ ಗಿಫ್ಟ್ ಮಾಡಿದ್ದೆ . ಆದರೆ ಆ ದಬ್ಬೆ ಇಂದು ನಮ್ಮ ಹೆಡ್ ಮೇಡಂ ಕೈ ಸೇರಿತ್ತು. 
ಅವರು ಬಂದ ತಕ್ಷಣ ಲಗು ಬಗನೆ ಬೋರ್ಡ್ ಕ್ಲೀನ್ ಮಾಡಿ ನನ್ನ ಜಾಗಕ್ಕೆ ಬಂದು ನಿಂತೆ, ಅವರ ಮುಖ ನೋಡುವ ಧೈರ್ಯ ಅಲ್ಲಿದ್ದ ೭೦ ವಿಧ್ಯಾರ್ಥಿಗಳಲ್ಲಿ ಯಾರಿಗೂ ಇರಲಿಲ್ಲ. ಆಗ ಅವರ ಬಾಯಲಿ ಬಂದ ಪ್ರಥಮ ವಾಕ್ಯ,
"ಇದೇನು ಕ್ಲಾಸೋ ಇಲ್ಲ ಮಾರ್ಕೆಟ್ಟೋ" , ನಮಗೆಲ್ಲ ಈ ಸಂಭಾಷಣೆ ಮುಂಚೆನೇ ತಿಳಿದಿದ್ದರಿಂದ ಯಾರಲ್ಲೂ ಅದನ್ನು ಕೇಳಿಸಿಕೊಳ್ಳುವ ಹುಮ್ಮಸ್ಸು  ಇರಲಿಲ್ಲ  , ನಾವೆಲ್ಲರೂ ಭಾರತ ಕ್ರಿಕೆಟಿಗರು ೨೦೦೭ ವಿಶ್ವ ಕಪ್ ನಲ್ಲಿ ಹೊರಬಿದ್ದಾಗ ತಲೆ ಬಗ್ಗಿಸಿದ್ದರಲ್ಲ ಹಾಗೆ ನಮ್ಮ ತಲೆಯು ಇಳಿಮುಖವಾಗಿತ್ತು , ಆದರೆ ಕೆಲವರು ಹುಡುಗಿಯರು ಮಾತ್ರ ಇನ್ನು ತಮ್ಮ ಜಡೆಗಳನ್ನು ಸರಿ ಮಾಡಿ ಕೊಳ್ಳುತ್ತಲೇ ಇದ್ದರು .

ಅವರು ದಣಿವಾರುವವರೆಗೂ ತಮಗೆ ತಿಳಿದಸ್ತು ಮತ್ತು ನಮ್ಮ ದೆಸಇಂದ ಕಲಿತಿದ್ದ ಅಷ್ಟು ವಾಕ್ ಚಾತುರ್ಯವನ್ನು ಮುಗಿಸಿ 
"ಕುಕ್ಕರಿಸಿ" ಎಂದು ತಮ್ಮ ಕೈಲಿದ್ದ ದಬ್ಬೆಯನ್ನು ಮೇಜಿನ ಮುಖಕ್ಕೆ ಟಪ್ಪನೆ ಬಡಿದರು. ಆ ರಭಸಕೆ ಮೇಜಿನ ಬಲಗಾಲು ನೆಲಕ್ಕೆ ಬಡಿದು , ತನ್ನ ಅಭಿ ಮುಖವಾದ ಇನ್ನೊಂದು ಕಾಲನ್ನು ಮೇಲೆತ್ತಿಸಿ , ನೃತ್ಯವಾಡ ತೊಡಗಿತ್ತು , ಆ ಚಿತ್ರಣ ನಮ್ಮೆಲ್ಲರ ಗಮನ ಅತ್ತ  ಕೊಂಡೊಯ್ಯಿತು , ಅಲ್ಲೇ ಪಕ್ಕದಲ್ಲಿ ಕುಳಿತಿದ್ದ "ಮುನಿ ಕೃಷ್ಣ " ಅದನ್ನು ಸುಮ್ಮನಿರಿಸಿದನು.

 ಹೆಡ್ ಮೇಡಂ ವಿಷಯಕ್ಕೆ ಬಂದರು ,
"ಯಾರಡ್ರೋ ಕ್ಲಾಸ್ ಇವಾಗ ?" ,
ನಾವೆಲ್ಲರೂ ಚ ಕಾರ ವೆತ್ತದೆ ತಲೆ ಬಗ್ಗಿಸಿಯೇ ಮುನಿಕ್ರಿಷ್ಣನ ಬಗ್ಗೆ ಬೈದು ಕೊಳ್ಳುತಿದ್ದೆವು.
ಮತ್ತೊಮ್ಮೆ ತಮ್ಮ ಕೈಲಿದ್ದ ದಬ್ಬೆಯನ್ನು ಮೇಜಿಗೆ ಜೋರಾಗಿ ಬಡಿದರು , ಆದ್ರೆ ಈ ಬಾರಿ ಮುನಿಕೃಷ್ಣ ಮುಂದಾಲೋಚನೆಇಂದ ಮೇಜಿನ ಕಾಲನ್ನು ಎತ್ತಿ ಹಿಡಿದಿದ್ದ.
ಆಗ ನಮ್ಮ ಕ್ಲಾಸಿನ ಅತಿ ಬುದ್ದಿವಂತೆ ಎಂದು ಹೆಸ್ರು ಮಾಡಿಕೊಂಡಿದ್ದ ಅಥವಾ ಹೆಸರಿಸಿಕೊಂಡಿದ್ದ , ಪೋಲಿಸಪ್ಪನ ಮಗಳು ಬೃಂದಾ " ಈಗ ಸಮಾಜ ಕ್ಲಾಸು ಮಿಸ್ " ಅಂಥ ಹೇಳಿದಳು .
"ಸಮಾಜ ಅಂದ್ರೆ ಸಿದ್ದಪ್ಪ ತಾನೇ" ಎಂದು ಮೇಡಂ ಸ್ವಲ್ಪ ಗಟ್ಟಿಯಾಗಿ ಕೇಳಿದರು.
ಎಲ್ಲರು ಒಂದೇ ಸಮನೆ "ಊನೀ ಮಿಸ್" ಎಂದೆವು.
ಈ ಊನೀ ಎಂದರೆ , ನಮಗೆ ತಿಳಿದಿದ್ದ ಕನ್ನಡಿಕರಿಸಿದ್ದ OK ಎಂದರ್ಥ, ಆದರೆ ಸಂಸ್ಕೃತದಲ್ಲಿ ಊನೀ ಎಂದರೆ ಬೆಕ್ಕು ಅಂಥ ಆಮೇಲೆ ಗೊತ್ತಾಯ್ತು.

ಇಷ್ಟು ಸೀನ್ ಗಳು ನಡೆಯುತ್ತಿದ್ದ ಹಾಗೆ , ಮಾನ್ಯ ಮತ್ತು ನನ್ನ ನೆಚ್ಚಿನ ಮೆಸ್ಟ್ರಾಗಿದ್ದ ಸಿದ್ದಪ್ಪನವರು ,
ಶಾಲೆಯ ಹಿಂದೆ ಹೋಗಿ ಸರಸ್ವತಿ ಬಿಡಿ ಕುಡಿದು ಆರಾಮಾಗಿ ,ಒಂದು ನಿಂಬೆ ಹುಳಿ ಚಪ್ಪರಿಸುತ್ತ ,ಕೊಠಡಿಯ ಮುಂದೆ ಬಂದು ಹೆಡ್ ಮೇಡಂನಾ ನೋಡಿ ತಪ್ಪೆಸಗಿದ ಬುದ್ದಿವಂತನಂತೆ ನಗೆ ಬೀರಿದರು. ಆದ್ರೆ ಮೇಡಂ ಇದಕ್ಕೆಲ್ಲ ಸೊಪ್ಪು ಹಾಕದೆ , ಕ್ಲಾಸ್ ಮುಗಿದ ನಂತರ ನನ್ನ ರೂಮಿಗೆ ಬನ್ನಿ ಎಂದು ಹೇಳಿ ದಬ್ಬೆಯನ್ನು ಅಲ್ಲೇ ಬಿಟ್ಟು ಕಾಲ್ಕಿತ್ತರು.

ಶ್ರೀ ಸಿದ್ದಪ್ಪನವರು ಎಂದಿನಂತೆಯೇ , ಒಂದೆರಡು ಹಿತವಚನಗಳನ್ನು ಹೇಳ ತೊಡಗಿದರು, ಈ ಪಿರೇಡ್ಗಳ ಮದ್ಯದ ಸಮಯವನ್ನ, ನೆನ್ನೆ ನಾನು ಹೇಳಿದ ಪಾಠವನ್ನ ಮೆಲುಕು ಹಾಕೋಕೆ ಉಪಯೋಗಿಸಿಕೊಳ್ಳಿ , ಹಾಗೆ , ಹೀಗೆ ಎಂದು ತಮ್ಮ ಹಿತ ವಚನ ಕಾರ್ಯಕ್ರಮ ಮುಗಿಸಿದರು. ಇಷ್ಟೆಲ್ಲಾ ಸಮಾರಾಧನೆ ನಡೆಯುವ ಹೊತ್ತಿಗೆ ೪:೧೦ ನಿಮಿಷ ವಾಗಿತ್ತು.
ಎಂದಿನಂತೆ ಪಾಠಕ್ಕೆ  ಹಾರಿದರು ಮೇಸ್ಟ್ರು, ಅಂದು  "ಭೂಗೋಳ" ವಿಷಯದಲ್ಲಿ "ಶ್ರೀಲಂಕ" ಎಂಬ ಪಾಠದ   ಬಗ್ಗೆ , ಸಿದ್ದಪ್ಪನವರು ಚಾಕ್ ಪೀಸ್  ತೆಗೆದುಕೊಂಡು , ಆಗ ತಾನೆ ನಾನು ಸ್ವಚ್ಛ ಗೊಳಿಸಿದ್ದ ಬೋರ್ಡ್ ಮೇಲೆ "ಶ್ರೀಲಂಕ" ಎಂದು ಕೊರೆದರು.
ನಾನು ಮತ್ತು ಸುನಿಲ ಮಾತ್ರ " ಜಯಸೂರ್ಯ , ರಣತುಂಗ, ಅಟಪಟ್ಟು , ಮುತ್ತಯ್ಯ ಮುರಳೀಧರನ್, ಡಿ ಸಿಲ್ವ , ಧರ್ಮಸೇನ " ಎಂದು ಒಂದಷ್ಟು ಹೆಸರುಗಳನ್ನೂ 
ನಮ್ಮ ಹತ್ತಿರ ಕುಳಿತಿದ್ದ ಕ್ರಿಕೆಟ್ ಅಜ್ಞಾನಿಗಳ ಬಳಿ ನಮ್ಮ ಕ್ರಿಕೆಟ್ ಜ್ಞಾನವನ್ನ ಪ್ರದರ್ಶಿಸಿದೆವು. ಸಿದ್ದಪ್ಪನವರು ಅವರ ಪಾಡಿಗೆ ಅವರು ಶ್ರೀಲಂಕಾದ ಇಡೀ  ಬೌಗೋಳಿಕ ವಿಷಯಗಳಾದ ವಿಸ್ತಿರಣ , ವಾತಾವರಣ , ನಕ್ಷೆ , ರಾಜಧಾನಿ , ಜನ ಜೀವನ ಎಂಬಿತ್ಯಾದಿ ವಿಷಯಗಳ ಬಗ್ಗೆ ಬೋರ್ಡ್ ತುಂಬಿಸಿ ಬಿಟ್ಟಿದ್ದರು, ಅದನ್ನು ಹಾಗೆಯೇ ನಮ್ಮ ಕ್ಲಾಸಿನ ಹುಡುಗಿಯರು ಪೆನ್ಸಿಲ್  ಮತ್ತು ರಬ್ಬರ್ ಸಹಾಯದಿಂದ ನೊಣ ಕಾಪಿ ಮಾಡಿದರು.

ಹಿಂದಿನ ಸಾಲಿನಲ್ಲಿ ಕುಂತಿದ್ದ ವೆಂಕಟ ಸ್ವಾಮಿ ಮತ್ತೊಂದು ನಿದ್ದೆಗೆ ಜಾರಿ ಬಹಳ ಹೊತ್ತಾಗಿತ್ತು , ಆಗ ಸಮಯ ೪:೩೦ ನಿಮಿಷ , ಇನ್ನು ಕೇವಲ ೧೦ ನಿಮಿಷಕ್ಕೆ ಕೊನೆಯ ಬೆಲ್ಲು ,ಹಾಗಾಗಿ ನಾವೆಲ್ಲರೂ ನಮ್ಮ ನಮ್ಮ ಅಸ್ತ್ರ ಮತ್ತು ಶಾಸ್ತ್ರಗಳನ್ನು ಬ್ಯಾಗಿಗೆ ತುಂಬಿಕೊಂಡು, ಟುಪ್ ಟುಪ್ ಎಂದು ಬಟನ್  ಏರಿಸಿ ಖೋ-ಖೋ ಆಟದಲ್ಲಿ ಖೋ ಗೆ ಕಾಯುತ್ತಿರುವ ಆಟಗಾರರಂತೆ ಸಜ್ಜಾದೆವು. ಕೆಲವರು ಹುಡುಗಿಯರು ಸಹ ತಮ್ಮ ಟಿಫನ್ ಬಾಕ್ಸ್ , ಸೌಂದರ್ಯ ಸಲಕರಣೆ ಮತ್ತು ಬೈಂಡ್ ಹಾಕಿದ ಪುಸ್ತಕಗಳನ್ನು ಅಚ್ಚು ಕಟ್ಟಾಗಿ ಬ್ಯಾಗಿಗೆ ಇಳಿಸಿದರು . ಆದ್ರೆ ಮುಂದಿನ ಬೆಂಚಿನ ಹುಡುಗರು ಮತ್ತು ಹುಡುಗಿಯರು ಮಾತ್ರ ಇನ್ನು ಸಿದ್ದಪ್ಪನವರ ಪಾಠ ವನ್ನು ಕೇಳುತ್ತಲೇ ಇದ್ದರು.

ಆಗ ಬಂದ್ರು ನೋಡಿ ಪ್ರಕಾಶಣ್ಣ, ಇವರು ನಮ್ಮ ಶಾಲೆಯಲ್ಲಿ ಮಾಡದ ಕೆಳಸಗಳಿರಲಿಲ್ಲ ಒಂಥರಾ ಇವರು ನಮ್ಮ ಶಾಲೆಯ ಮೇಕೆ ಇದ್ದ ಹಾಗೆ , ಅದು ತಿನ್ನದ ಸೊಪ್ಪು ಇಲ್ಲ ಇವರು ಮಾಡದ ಕೆಲಸಗಳು ಇರ್ತಿರಲಿಲ್ಲ , ಹಾಗು ಹೀಗೂ ಎಲ್ಲರು ಇವರ್ನ ಬಕ್ರ ಮಾಡ್ತಾ ಇರೋವ್ರು .
ಇವರು ಕ್ಲಾಸಿಗೆ ಬಂದ್ರೆ ನಮಗೆಲ್ಲ ಒಂದು ಸಂತೋಷ ಮತ್ತು ಅಚ್ಚರಿ , ಅಂದು ಪ್ರಕಾಶಣ್ಣ ತಂದಿದ್ದ ಅಚ್ಚರಿ "ಮೆಮೋ"  , ಆ ಮೆಮೋ ಪುಸ್ತಕವನ್ನು ಸಿದ್ದಪನ ಕೈಗಿಟ್ಟ ಪ್ರಕಾಶಣ್ಣ ಕೊಠಡಿಯ  ಆಚೆ ಹೋಗಿ ನಿಂತರು. ಆಗ ನಾವೆಲ್ಲರೂ ಅದರಲ್ಲಿ ಏನು ಇದೆಯೋ , ಏನು ಕತೆನೋ ಎಂಬಂತೆ " ಶ್ರೀಶಾಂತ್  ಎದುರಾಳಿ ಬ್ಯಾಟ್ಸಮನ್ ನಾ ಗುರಾಯಿಸುವ  ಹಾಗೆ ನಾವು ವಾರೆಗಣ್ಣಲ್ಲಿ ಸಿದ್ದಪ್ಪರ ಕಡೆ ನೋಡಿದೆವು",
"ನಾಳೆ ಗಾಂಧಿ ಜಯಂತಿ , ನೀವೆಲ್ಲರೂ ತಪ್ಪದೆ ಸಮವಸ್ತ್ರ ಧರಿಸಿ ಬೆಳಗ್ಗೆ ೭:೩೦ ಕ್ಕೆ ಸರಿಯಾಗಿ ಶಾಲೆಯ ಆವರಣದಲ್ಲಿ ಇರಬೇಕು , ಯಾರಾದ್ರೂ ತಪ್ಪಿಸಿಕೊಂಡರೆ ಅವರು ತಮ್ಮ ಪೋಷಕರನ್ನು ಶುಕ್ರವಾರ ಶಾಲೆಗೇ ಬರುವ ಮುಂಚೆ ಕರೆತರಬೇಕು" ಎಂದು ಓದಿ ಮುಗಿಸಿ ಸಹಿ ಹಾಕಿದರು .

ಈ ಸನ್ನಿವೇಶ ನಡೆದದ್ದು ಅಕ್ಟೋಬರ್ ೧ , ೧೯೯೭ ರಲ್ಲ್ಲಿ , ಆಗ ನಾನು ೬ನೆ ತರಗತಿಯಲ್ಲಿದ್ದೆ, ತಕ್ಷಣವೇ ೪:೪೦ ನಿಮಿಷದ ಕೊನೆಯ ಬೆಲ್ ಅನ್ನು ಪ್ರಕಾಶಣ್ಣನ ಮಗ ಅನಿಲ , ಧಣ ಧಣ ಎಂದು ಬಾರಿಸಿದ , ನಾವು ಕೂಡ ಜೈಲಿನಿಂದ ತಪ್ಪಿಸಿಕೊಂಡ ಕೈದಿಗಳಂತೆ ಕಾಲ್ಕಿತ್ತು, ಯಥಾ ಪ್ರಕಾರ "ಬೌಂಡರಿ ಕ್ರಿಕೆಟ್ " ಅಡಲು ಸಜ್ಜಾದೆವು .

ಈಗಲೂ ನನಗೆ ಗಾಂಧಿ ಜಯಂತಿಯಂದರೆ , ನನ್ನ ತತ್ಕ್ಷಣದ ಚಿಂತನೆ ಈ ಪ್ರಸಂಗ , ನಮ್ಮ ಶಾಲೆಯಲ್ಲಿ ಅಕ್ಟೋಬರ್ ೨ ರಂದು , ಬೆಳಗ್ಗೆ ೮ ರಿಂದ ೧೦ ರವರೆಗೆ ಮಾಡಿಸುತ್ತಿದ್ದ  , ಶಾಲೆಯ ಮೈದಾನದ ಸ್ವಚ್ಚ್ಹಗೊಳಿಸುವಿಕೆ , ಶಾಲೆಯ ಅಷ್ಟು  ಕೊಠಡಿ , ಬೆಂಚು , ಮೇಜುಗಳನ್ನು ಸ್ವಚ್ಛ ಮಾಡುವುದು , ಮತ್ತು ನಮ್ಮ ಶಾಲೆಯ ಮೈದಾನದಲ್ಲಿ ಬೆಳೆದ ಪಾರ್ತೆನಿಯುಂನಾ  ಬುಡಮಟ್ಟ ಕೀಳುವುದು , ಇವೆ ಮೊದಲಾದುವ ನಮ್ಮ ಕೆಲಸಗಳು.
ಇಷ್ಟು ಕೆಲಸದ ನಂತರ , ಮಹಾತ್ಮ ಗಾಂಧೀ ಅವರ ಬಗ್ಗೆ ಅಂದಿನ ಕಾರ್ಯಕ್ರಮದ ಅಧ್ಯಕ್ಷರು , ನಮ್ಮ ಹೆಡ್ ಮೇಡಂ , ಪ್ರೌಢ ಶಾಲೆಯ ಹೆಡ್ ಮಾಸ್ತರರು , ಒಂದಷ್ಟು ವಿಧ್ಯಾರ್ಥಿಗಳು ಒಳ್ಳೆಯ ವಿಷಯಗಳನ್ನ ಹೇಳುತಿದ್ದರು , ಮತ್ತು ನಾವೆಲ್ಲರೂ ತಪ್ಪದೆ "ರಘುಪತಿ ರಾಘವ ರಾಜಾರಾಮ್ " ಹಾಡನ್ನು ರಾಗವಾಗಿ ಹೇಳಲು ಪ್ರಯತ್ನಿಸುತ್ತಿದ್ದೆವು . ಅಂದು ನಾವು ಪಟ್ಟ ದೈಹಿಕ ಶ್ರಮ ,ನಮ್ಮ ಗುರುಗಳು ಹೇಳಿದ ಒಳ್ಳೆಯ ವಿಷಯಗಳು ಇಂದು ನಮ್ಮ ಜೀವನದಲ್ಲಿ ಅಳವಡಿಕೊಳ್ಳಲು ಪ್ರಯತ್ನಿಸಿದ್ದೇವೆ ಮತ್ತು ಕೆಲವೊಮ್ಮೆ ಪಾಲಿಸಿದ್ದೇವೆ . 
ಆದ್ರೆ ಈಗ , ಗಾಂಧೀ ಜಯಂತಿ ಒಂದು ಕೇವಲ ರಜಾದಿನವಾಗಿದೆ , ಸುಮಾರು  ಶಾಲೆಗಳು ಗಾಂಧೀ ಜಯಂತಿಯನ್ನ  ಆಚರಿಸುವ ಗೋಜಿಗೂ ಹೋಗುವುದಿಲ್ಲ ಅಥವಾ ಅಪ್ಪಿ ತಪ್ಪಿ ಆಚರಿಸಿದರು ಪೋಷಕರು ಅಂದು ತಮ್ಮ ಮಕ್ಕಳನ್ನು ಶಾಲೆಗೇ ಕಳಿಸುವುದಿಲ್ಲ.
ಈಗಿನ ಮಕ್ಕಳಿಗೆ ಗಾಂಧೀಜಿ ಎಂದರೆ ಕೇವಲ ನೋಟಿನ ಮೇಲೆ ಇರೋ ಯಾರೋ  ವ್ಯಕ್ತಿ ಅಷ್ಟೇ  ಅಥವಾ ಅವರ ಜ್ಞಾನಕ್ಕೆ "may be he is first reserve bank governer"  ಎಂದೋ ಕಲ್ಪಿಸಿಕೊಳ್ಳುವ ಸ್ಥಿತಿಗೆ,ನಮ್ಮ ಭವ್ಯ sorry ಭ್ರಷ್ಟ ಭಾರತವನ್ನ ತರಬೇಡಿ ಎಂದು ವಿಜ್ಞಾಪಿಸಿಕೊಳ್ಳುತ್ತ ,
ಇಂತಿ ನಿಮ್ಮ
ಗಂಗರಾಜು .ಕು.ಸಿ .




No comments:

Post a Comment