Friday, July 13, 2012

ಸಣ್ಣ ವ್ಯಥೆ -21

ಮೂಲೆ ಮನೆ ಮಾದೇವಿ ಹೇಳ್ದಂಗೆ ಆಗೈತೆ ನೋಡು ಆ ಗಂಡ ಸತ್ತ ಹೆಣ್ಣು ಹೇಳ್ದಂಗೆ ಆಯ್ತದೆ ಎಲ್ಲಾ ನಮ್ಮ ಹಣೆ ಬರಹ ಎಂದು ಸಿದ್ದಪ್ಪ ಗೊಣಗ ತೊಡಗಿದ್ದ. ಪಕ್ಕದಲ್ಲಿ ಬೀಡಿ ಸೇದುತ್ತಿದ್ದ ಪರಮೇಶ ಸುಮ್ಕಿರು ತಾತ ಹಂಗೆಲ್ಲ ಅನ್ನಬೇಡ . ತಲೆಯ ಮೇಲಿದ್ದ ಹೊದಿಗೆಯನ್ನು ಬಿಗಿ ಗೊಳಿಸಿದ ತಾತ , ನೋಡು ರೇವತಿ,ಅಶ್ವನಿ,ಭರಣಿ,ಕೃತಿಕಾ, ರೋಹಿಣಿ ಮಳೆಯ ಸದ್ದೇ ಇರ್ಲಿಲ್ಲ ಮೃಗಶಿರಾ,ಆರಿದ್ರಾ,ಪುನರ್ವಸು ಬಿರುಸಾಗಿ ಬರದೆ ತುಂತುರು ಆಗಿ ಹೋಯ್ತು . ಊರಾಗಿರೋ ಚರಂಡಿ ನೀರೆ ಸರಿಯಾಗಿ ಕೊಚ್ಚಿಕೊಂಡು ಹೋಗಿಲ್ಲ ಈ ಮಳೆಗೆ ಹೋಗು ಈ ಸಲ ಮುಂಗಾರು ಮಳೆಗೆ ಬೆಳೆ ತೆಗೆದಂಗೆ  ಐತ್ಹೆ , ಆ ಸಿದ್ದೇಶ್ವರನ ದಯಾ ಇದ್ರೆ ಹಿಂಗಾರನಾಗೆ ಅವರೇನೂ ,ತೊಗರಿನೋ ಬೆಳ್ಕೋ ಬೇಕು ಅಷ್ಟೇ . ಮನೆಗೆ ತಿನ್ನಾಕೆ ಅಷ್ಟು ದವಸ ಆದರು ಆಯ್ತದೆ. ಎರಡು ಬೀಡಿ ಬೂದಿಯಾಗಲು ಬಿಡದೆ ಕುಡಿದ ಪರಮೇಶ , ಬತ್ತಿನಿ ತಾತ ದನ ಕರುಗೆ ಹುಲ್ಲು ಹಾಕಬೇಕು ಅಂಥ ಎದ್ದು ಹೊರಟ .

ಊರಲಿದ್ದ ಮನೆಗಳಲ್ಲಿ ದವಸ ಮುಗಿಯುವ  ಹಂತಕ್ಕೆ ಬಂದು , ಶೆಟ್ಟರ ಅಂಗಡಿಗೆ ಸಾಲಕ್ಕೆ ಮೊರೆ ಹೋಗಿದ್ದ ದೃಶ್ಯ ನೋಡಿ ಸಿದ್ದಪ್ಪನ ಮನ ಮಣಿದಿತ್ತು. ಇದ್ದಕಿದ್ದಂತೆ ಪುಷ್ಯ ಮಳೆಯ ಜೊತೆ ಊರಿಗೆ ಬಂದ ಶಾಸಕ ಶಿವಪ್ಪ , ನಿಮಗೆಲ್ಲ ಸರ್ಕಾರ ದಿಂದ  ಕಡಿಮೆ ಬೆಲೆಗೆ  ಬೀಜ ಕೊಡುಸ್ತೀನಿ ಎಂದು ಆಶ್ವಾಸನೆ ಕೊಟ್ಟು ಹೋದ.ಮಳೆಯ ಜೊತೆ ಶಾಸಕನ ಮಾತಿಗೆ ಊರಿನ ಜನರೆಲ್ಲಾ ಖುಷಿಯಾದರು. ಆಶ್ಲೇಷ ಮಳೆಯ ಸಮಯಕ್ಕೆ ಜನ ನೆಲ ಹದ ಮಾಡಿ , ಜೋಳ ಭೂಮಿಗೆ ಬಿಡಲು ಶಾಸಕ ಕಳಿಸುವ ಬೀಜಗಳ ದಾರಿ ನೋಡ ತೊಡಗಿದರು .ಮಖೆ ಮಳೆ ಆಗದೆ ಹೋದರು ಜನ ಕುಂದದೆ ಬೀಜದ ನೀರಿಕ್ಷೆ ಯಲ್ಲಿದರು.
ಉತ್ತರ ಮಳೆಯ ವೇಳೆಗೆ ಊರಿನ ಶಾನಭೋಗರ ಮನೆಗೆ ಒಂದು ಉತ್ತರ ಬಂದಿತ್ತು , ಪತ್ರದಂತೆ ಊರಿಗೆಲ್ಲ ಶಾನಭೋಗ  "ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನಿಂದ ಹಳೆ ಮುಖ್ಯ ಮಂತ್ರಿಗಳು ತಂದ "ಧನ ಬೀಜ " ಯೋಜನೆಯನ್ನು ಹೊಸ ಮುಖ್ಯ ಮಂತ್ರಿಗಳು ಕೈ ಬಿಟ್ಟಿದ್ದಾರೆ" ಎಂದು ಡಂಗುರ ಸಾರಿಸಿದರು.ಹಸ್ತ,ಚಿತ್ತ ಮಳೆ ಜೋರಾಗಿ ಬಂದು ಹಸನು ಮಾಡಿದ್ದ ಭೂಮಿಯಲ್ಲಿ ಊರಿನ ಜನರಲ್ಲೇ ಕಾಂಗ್ರೆಸ್ ಗಿಡಗಳನ್ನೇ ಹಿಂಗಾರು ಮಳೆಗೆ ಬೆಳೆದರು .

--
ಗಂಗರಾಜು . ಕು. ಸಿ 

No comments:

Post a Comment