Wednesday, August 1, 2012

ಸಣ್ಣ ವ್ಯಥೆ -23

ಮೂಲೆ ಮನೆ ಮಾದೇವಿ ರಾಗಿ ಬಿಸುತ್ತ  ತನ್ನ ಹಳೆ ರಾಗದಲ್ಲಿ ಪಕ್ಕದಲ್ಲಿ ಕುಳಿತು ತಲೆ ಆಡಿಸುತ್ತಿದ್ದ ಮೊಮ್ಮಕ್ಕಳ ಮುಖ ನೋಡಿ ಕೊಂಡು "ನಿಂಬೀಯಾ ವನದ ಮ್ಯಾಗಳ ಚಂದ್ರಮಾ ಚೆಂಡಾಡಿದ.." ಎಂದು
ಹಾಡಿ ಕೆಲಸ ಮತ್ತು ಮಕ್ಕಳ ಆರೈಕೆ ಮಾಡುತ್ತಿದ್ದಳು.
ಬಾವಿ ಮನೆ ರಂಗಪ್ಪ ಮುಂಜಾನೆ ೩:೩೦ ಕ್ಕೆ ಸರ್ಕಾರ ಕೊಡುವ ಮೂರು ಫೆಸು ಕರೆಂಟಿಗೆ ,ಹೋದ ವರುಷ ಕೊರೆಸಿದ್ದ ಕೊಳವೆ ಬಾವಿ ಇಂದ ತನ್ನ ಹೊಲಕ್ಕೆ ನೀರು ಹಾಯಿಸಲು ಎದ್ದು ಹೊರಟ,ಇದ್ದ ಹಳೆ ಬಾವಿ ಬತ್ತಿ ಬಹಳಷ್ಟು ವರ್ಷಗಳೇ ಕಳೆದಿದ್ದವು , ಹೋದ ವರ್ಷ ಅಳಿಯ ಮಾದೇಶ  ಹೆಂಡತಿಯ  ಇಚ್ಚೆಯ ಮೇರೆಗೆ ಮಾವ ರಂಗಪ್ಪನಿಗೆ ಕೊಳವೆ ಬಾವಿ ಕೊರೆಸಿ ಕೊಟ್ಟಿದ್ದ.
ಕಂಡಕ್ಟರ್ ಸಿದ್ದಪ್ಪನ ಮಗ ಪರಮೇಶ ೯ ನೆ ತರಗತಿಯಲ್ಲಿ ಪಾಸಾಗಿ ಊರಿನಲ್ಲಿ ಅತಿ ಹೆಚ್ಚು ಓದಿದವನೆನಿಸಿಕೊಂಡಿದ್ದ, ಊರಿಂದ ಸುಮಾರು ೪ ಮೈಲಿ ದೂರ ಇದ್ದ ಹೊಸೂರಿನ ನ್ಯಾಷನಲ್ ಹೈ ಸ್ಕೂಲ್ ನಲ್ಲಿ
೧೦ ನೆ ತರಗತಿ ಗೆ ಹೋಗುತ್ತಿದ್ದ. ಸಂಜೆ ೬ ಗಂಟೆಗೆ ಹಟ್ಟಿಗೆ ಬರುವ ಪರಮೇಶ ಬುಡ್ಡಿ ದೀಪದಲ್ಲಿ ಓದಿ ಪ್ರತಿದಿನ  ಮುಂಜಾನೆ ೬ ಕ್ಕೆ ಮನೆ ಬಿಡುತಿದ್ದ, ಶಾಲೆಯ ಪ್ರಾರ್ಥನೆ ವೇಳೆಗೆ ಸೇರಿಕೊಳ್ಳಲು.
 "ರಾಜಧಾನಿ ಬೆಂಗಳೂರಿನಲ್ಲಿ ಜನ ವಿಧಾನ ಸೌಧದ ಮುಂದೆ ನಮಗೆ ತಡೆ ರಹಿತ ವಿದ್ಯುತ್ ಬೇಕೆಂದು ಜನರೆಟರ್ ಬೆಳಕಿನಲ್ಲಿ ಪ್ರತಿಭಟಿಸಿದರು" ಎಂದು ಊರಿನ ಶಾನಭೋಗ ಸುಬ್ಬಣ್ಣ ಬುಡ್ಡಿ ದೀಪದ ಬೆಳಕಿನಲ್ಲಿ ಪತ್ರಿಕೆ  ಓದಿಕೊಂಡ.

--
ಗಂಗರಾಜು.ಕು.ಸಿ

No comments:

Post a Comment