Friday, August 31, 2012

ಸಣ್ಣ ವ್ಯಥೆ 25 (ಶೂನ್ಯ )

ವಾನ ಪ್ರಸ್ಥದಲ್ಲಿ ಹಾಯಾಗಿ ಕಾಲ ಕಳೆಯಲು ಸುಂದರ ನೆನಪುಗಳನ್ನ ನಿಮ್ಮ ವಯಸ್ಸಿನಲ್ಲಿ ಅಣಿ ಮಾಡಿಕೊಳ್ಳಿ ಎಂದು
ಅಂದಿನ ಆಕಾಶವಾಣಿಯಲ್ಲಿ ಕೇಳಿದ ತಕ್ಷಣ ರಂಗಜ್ಜನ ಕಣ್ಣಾಲಿ ಚಳಿಗಾಲದ ಮಂಜು ಸೂರ್ಯನ ತಾಪಕೆ ಹರಿಯುವಂತೆ ಇಳಿಯ ತೊಡಗಿತು.ಹುಟ್ಟುವಾಗಲೇ ತಂದೆಯ ಕಳೆದುಕೊಂಡು ಆಮೇಲೆ ತಾಯಿ ಕೂಡ ಪ್ಲೇಗ್ ಮಾರಿಗೆ ತುತ್ತಾಗಿ ಅಜ್ಜಿಯ ಲಾಲನೆಯಲ್ಲಿ ಬೆಳೆದ ರಂಗಜ್ಜನಿಗೆ, ಯೌವನವಸ್ಥೆಯ ಹೊತ್ತಿಗೆ ಅನಾಥ ಸ್ಥಿತಿಗೆ ಬಂದು ಮುಂದೆ ಮಾರಿ ಗುಡಿ ಪಕ್ಕದ ತಿಮ್ಮಕ್ಕನನ್ನು ಮದುವೆಯಾದ.
ಸುಖ ಸಂಸಾರಕ್ಕೆ ೧೨ ಸೂತ್ರಗಳು ಆದರೆ ಇವರ ಸುಖ ಸಂಸಾರಕ್ಕೆ ೧೨ ಮಕ್ಕಳಾಗಿ ,ಅವರಲ್ಲಿ ೬ ಮಕ್ಕಳು ಹಸುಳೆಯಲ್ಲೇ ನೀಗಿಕೊಂಡರೆ ಉಳಿದ ೬ ರಲ್ಲಿ ೩ಬಾಲ್ಯಾವಸ್ಥೆಯಲ್ಲಿ ಬಾವಿಗೆ ಮತ್ತು ಕೆರೆಯ ಹರಿವಿಗೆ -ಆಳಕ್ಕೆ ಸಿಕ್ಕಿ ಮರೆಯಾದವು.ಉಳಿದ ೩ ಮಕ್ಕಳು ಅಷ್ಟಾಗಿ ಓದಲಿಲ್ಲವಾದರೂ ,ಆದರೆ ರಂಗಜ್ಜನ ಪಿತ್ರಾರ್ಜಿತ ಮತ್ತು ಮಾತ್ರಾರ್ಜಿತ ಆಸ್ತಿಯ ಮೇಲೆ ಅವಲಂಬಿತರಾಗಿದ್ದರು,
ರಂಗಜ್ಜ ಕೂಡ ತನ್ನ ಚೈತನ್ಯದ ದಿನಗಳಲ್ಲಿ ಬುಟ್ಟಿಯ ಗಂಟಿನಂತಿದ್ದ ಆಸ್ತಿಯನ್ನ ಒಂದು ಪಲ್ಲ ಗೋಣಿ ಚೀಲಕ್ಕೆ ಸರಿದೂಗಿಸಿದ್ದ.ಕುಂತು ತಿನ್ನುವವರು ಹೆಚ್ಚಾಗಿ ಆ ಪಲ್ಲ ಚೀಲ ಮತ್ತೆ ಗಂಟಾಗಿತ್ತು , ಆದರೆ ಆ ಗಂಟನ್ನು ಕಿತ್ತು ತಿನ್ನಲು ಮೂರು ಮಕ್ಕಳ ಹೆಂಡತಿಯರಿಗೆ ತಲಾ ನಾಲ್ಕು ಪಿಳ್ಳೆಗಳು ಇಲಿಗಳಂತೆ ಬೆನ್ನಿಗೆ ಬಿದ್ದಿದ್ದವು. ತನ್ನ ಯೋಚನಾ ಲಹರಿ ಇಷ್ಟೆಲ್ಲಾ ಅರಿದು ಅಳುವ ಹೊತ್ತಿಗೆ ಆಕಾಶವಾಣಿಯಲ್ಲಿ "ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು " ಎಂದು ಜೋರಾಗಿಕೇಳಿಸುತ್ತಿತ್ತು.
ಬಾಗಿಲಿಗೆ ಬಂದು ಅಜ್ಜ ಎಂದು ಕೂಗಿದ ಮೊಮ್ಮಗ "ಪ್ರಕಾಶ ನೀರಿಗೆ ಬಿದ್ದವ್ನೆ" ಎಂದು ಅಳತೊಡಗಿದ .
ಆಕಾಶವಾಣಿ ಕೂಡ "ವೇದಾಂತಿ ಹೇಳಿದನು, ಈ ಬದುಕು ಶೂನ್ಯ ಶೂನ್ಯ " ಎಂದು ಅಳತೊಡಗಿತು.

--
ಗಂಗರಾಜು .ಕು.ಸಿ

No comments:

Post a Comment