Wednesday, December 21, 2011

ಸಣ್ಣ ವ್ಯಥೆ -14

ದೂರ ದೂರಕೆ ,ತೀರದ ಆಚೆಗೆ 
ಬಾಲ್ಯವ ಮರೆತು , ದುಡಿಮೆಯ ಬಯಸಿ||

ಜನನವೇ ಇವರಿಗೆ ಮೃತ್ಯುವಾಗಿದೆ
ಸಲಹುವವರು ಸುಳಿವಿಲ್ಲದೆ ಸರಿದಿದ್ದಾರೆ
ಬದುಕ ಕಟ್ಟಲು ಬಯಕೆಗಳಿಲ್ಲ 
ಹೊತ್ತಿನ ತುತ್ತಿಗೆ ಹವಣಿಸುತ್ತಿದ್ದಾರೆ 

ಮರೆಯಲು ಇವರಲಿ ನೆನಪುಗಳಿಲ್ಲ 
ಸವಿಯಲು ಸುಂದರ ಸಂಜೆಗಳಿಲ್ಲ
ದಿನವು ಕಣ್ಣಿರಲಿ ಮಿಂದು 
ಕಂಠದಲಿ ದುಃಖವ ಮಿಡಿದಿಹರು 


ದಿನದ ಕೂಲಿಯೇ ಇವರ ಶಿಕ್ಷಣ
ಬೈಗುಳವೇ ಇವರಿಗೆ ಪಾಠ ಪ್ರವಚನ 
ಆಡಲು ಒಡನಾಡಿಗಳಿಲ್ಲ 
ಅಗುಳು ಲೆಕ್ಕಿಸಿ ಉಣ್ಣುವ ಬದುಕು 


ಹುಟ್ಟಿಸಿದ ಅಪ್ಪ ಸಾರಾಯಿ ಅಂಗಡಿಯ ಖಾಯಂ ಸದಸ್ಯ 
ಅಮ್ಮನೋ ಇನ್ನೊಂದು ಅನರ್ಥ ಶಿಶುವಿನ ಗರ್ಭಿಣಿ 
ದಾಯಾದಿಗಳೋ ದಿಕ್ಕು ದಿಕ್ಕಿಗೆ ಓಡಿ ಹೋಗಿದ್ದಾರೆ 
ನೆರಹೊರೆಯವರ ಮೆಚ್ಚಿನ ಸೇವಕನಾಗಿಹನು 

ಬಡತನವ ಬಣ್ಣಿಸಲು ಇವನೇ ಆಗಿಹನು 
ಇವನ ದಾಸ್ಯದ ದಣಿವ ತೀರಿಸಲು ಯಾರಿಹರು 
ಇಂತಹವರ ಬಾಲ್ಯಕ್ಕೆ ಬೆಳಕನಿರ್ವರು ಯಾರು
ನೆಲೆಯೇ ಇಲ್ಲದವರ ನಲಿವು ಹೇಗೆ 
ಬಾಲ್ಯವೇ ನೀನೇಕೆ ಈ ಮಕ್ಕಳಿಗೆ ಸುಂದರವಾಗಿಲ್ಲ ?

ದೂರ ದೂರಕೆ ,ತೀರದ ಆಚೆಗೆ 
ಬಾಲ್ಯವ ಮರೆತು , ದುಡಿಮೆಯ ಬಯಸಿ||

-- ಗಂಗರಾಜು.ಕು.ಸಿ

No comments:

Post a Comment